ಬೆಳಗಾವಿ :ಗ್ಯಾಸ್ ಕಟರ್ ಮಷಿನ್ ಬಳಸಿ ದುಷ್ಕರ್ಮಿಗಳು ಎಟಿಎಂ ಹಣ ಕಳ್ಳತನ ಮಾಡಿರುವ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ ಸಾಂಬ್ರಾ ಗ್ರಾಮದಲ್ಲಿ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ನಡೆದಿದೆ.
ಸಾಂಬ್ರಾ ಗ್ರಾಮದ ಮುಖ್ಯ ರಸ್ತೆಯಲ್ಲಿ ಇರುವ ಎಸ್ಬಿಐ ಬ್ಯಾಂಕ್ ಎಟಿಎಂ ಇದಾಗಿದ್ದು, ಕೇವಲ 7 ನಿಮಿಷದಲ್ಲಿ ಕಳ್ಳರು ಗ್ಯಾಸ್ ಕಟರ್ ಬಳಸಿ ಎಟಿಎಂ ಕಳ್ಳತನ ಮಾಡಿದ್ದಾರೆ. ಎಟಿಎಂನಲ್ಲಿದ್ದ 75,600 ರೂಪಾಯಿ ಹಣ ಕದ್ದೊಯ್ದಿದ್ದಾರೆ.
ಬೆಳಗಾವಿಯಲ್ಲಿ ಕಟರ್ ಬಳಸಿ ಎಟಿಎಂ ಹಣ ಕಳ್ಳತನ ಸಿಸಿಟಿವಿ ವಿಡಿಯೋ (ETV Bharat) ಸ್ಥಳಕ್ಕೆ ಮಾರಿಹಾಳ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲದೇ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಕೂಡ ಆಗಮಿಸಿ ಮಾಹಿತಿ ಪಡೆದಿದ್ದಾರೆ.
ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಯಡಾ ಮಾರ್ಟಿನ್, "ಮೂವರು ಆರೋಪಿಗಳು ಕಟರ್ ಉಪಯೋಗಿಸಿ ಕಳ್ಳತನ ಮಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೊದಲು ಆರೋಪಿಗಳು ಸಿಸಿಟಿವಿ ಕ್ಯಾಮರಾಗೆ ಸ್ಪ್ರೇ ಮಾಡಿ ಬಂದ್ ಮಾಡಿದ್ದಾರೆ. ತಕ್ಷಣ ಬ್ಯಾಂಕ್ ಕಂಟ್ರೋಲ್ ರೂಮ್ ಗೆ ಮಾಹಿತಿ ಹೋಗಿದೆ. ಅವರು ನಮ್ಮ ಪೊಲೀಸರಿಗೆ ತಿಳಿಸಿದ್ದಾರೆ. ನಮ್ಮವರು ಸ್ಥಳಕ್ಕೆ ಬರುವಷ್ಟರಲ್ಲಿ ಹಣ ಕಳ್ಳತನ ಮಾಡಿಕೊಂಡು ಆರೋಪಿಗಳು ಪರಾರಿಯಾಗಿದ್ದಾರೆ. ಎಟಿಎಂಗೆ ಸೆಕ್ಯೂರಿಟಿ ಸಿಬ್ಬಂದಿ ಇರಲಿಲ್ಲ. ಆರೋಪಿಗಳ ಪತ್ತೆಗೆ ಮೂರು ತಂಡ ರಚಿಸಲಾಗುವುದು. ಶೀಘ್ರವೇ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುತ್ತೇವೆ" ಎಂದು ಮಾಹಿತಿ ನೀಡಿದರು.
ಸಾಂಬ್ರಾ ಬಳಿಕ ಮಹಾರಾಷ್ಟ್ರ ಕೊಲ್ಹಾಪುರದ ಅಜರಾದಲ್ಲೂ ಮತ್ತೊಂದು ಎಟಿಎಂ ಕಳ್ಳತನಕ್ಕೆ ಆರೋಪಿಗಳು ಯತ್ನಿಸಿದ್ದಾರೆ. ಅಷ್ಟರಲ್ಲಿ ಬೆಳಗಾಗಿದ್ದರಿಂದ ಕಳ್ಳತನ ಸಾಧ್ಯವಾಗದೇ ಕಳ್ಳರ ಗ್ಯಾಂಗ್ ಪರಾರಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ:ಪೂಜೆ ಮಾಡುವ ನೆಪದಲ್ಲಿ ಮನೆಗೆ ಬಂದು ಚಿನ್ನಾಭರಣ ಕದ್ದ ಆರೋಪಿಗಳ ಬಂಧನ