ಬೆಳಗಾವಿ: "ಸಂಕ್ರಮಣದ ಅಕ್ಕಪಕ್ಕದಲ್ಲಿ, ಕರಿ ಮುಗಿಯುವ ವೇಳೆ ಇಂಥ ಘಟನೆಗಳು ನಡೆಯುತ್ತವೆ ಎಂದು ಮನೆಯಲ್ಲಿ ಹಿರಿಯರು ಹೇಳುತ್ತಿರುತ್ತಾರೆ. ನಮಗೆ ಬೇಕಾದವರು ಸಂಕ್ರಮಣ ಮುಗಿಯೋವರೆಗೂ ಎಚ್ಚರಿಕೆಯಿಂದ ಇರುವಂತೆ ಭವಿಷ್ಯ ನುಡಿದಿದ್ದರು. ಆದರೆ, ಈಗ ನಮ್ಮಿಂದಲೇ ಈ ಅಚಾತುರ್ಯ ನಡೆದು ಬಿಟ್ಟಿದೆ" ಎಂದು ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ತಿಳಿಸಿದರು.
ಆಸ್ಪತ್ರೆಯಲ್ಲಿ ಸಹೋದರಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, "ಸಿಎಲ್ಪಿ ಸಭೆ ಮುಗಿಸಿ ನಿನ್ನೆ ರಾತ್ರಿ 11 ಗಂಟೆಗೆ ಬೆಂಗಳೂರಿನ ನಮ್ಮ ನಿವಾಸದಿಂದ ಬೆಳಗಾವಿಗೆ ಪ್ರಯಾಣ ಬೆಳೆಸಿದೆವು. ಇಂದು ಸಂಕ್ರಮಣಕ್ಕೆ ಮನೆದೇವರಾದ ಚಿಕ್ಕಹಟ್ಟಿಹೊಳಿ ವೀರಭದ್ರೇಶ್ವರ ದೇವಸ್ಥಾನಕ್ಕೆ ಮನೆಯವರೆಲ್ಲ ಹೋಗಲು ನಿರ್ಧರಿಸಿದ್ದೆವು. ಹಾಗಾಗಿ, ತರಾತುರಿಯಲ್ಲಿ ನಾನು, ಸಹೋದರಿ ಬರುತ್ತಿದ್ದೆವು."
ಆದರೆ, ದುರಾದೃಷ್ಟವಶಾತ್ ಇನ್ನೇನು 15 ನಿಮಿಷದೊಳಗೆ ಬೆಳಗಾವಿಗೆ ಸೇರುವ ಮೊದಲೇ ಬೆಳಗ್ಗೆ 5 ಗಂಟೆಗೆ ಎರಡು ನಾಯಿಗಳು ಅಡ್ಡ ಬಂದವು. ಆಗ ಚಾಲಕನಿಗೆ ಪಾಪ ಏನು ಮಾಡಬೇಕು ಅಂತಾ ಗೊತ್ತಾಗದೇ, ಆ ಪ್ರಾಣಿಗಳ ಜೀವ ಉಳಿಸಲು ಕಾರನ್ನು ಎಡಕ್ಕೆ ತೆಗೆದುಕೊಂಡಾಗ ರಸ್ತೆ ಪಕ್ಕದಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದಿದೆ ಎಂದು ಘಟನೆಯನ್ನು ವಿವರಿಸಿದರು.
"ಘಟನೆಯಲ್ಲಿ ನನಗೆ ತಲೆ, ಕಿವಿ, ಮುಖ, ಬಲ ತೋಳಿಗೆ ಗಾಯವಾಗಿದೆ. ಅದೇ ರೀತಿ ಸಹೋದರಿಗೆ ಸಣ್ಣಪುಟ್ಟ ಗಾಯದ ಜೊತೆಗೆ ಎಲ್ 1, ಎಲ್-4 ಬೆನ್ನು ಮೂಳೆಗಳ ಏರ್ ಲೈನ್ ಫ್ರ್ಯಾಕ್ಚರ್ ಆಗಿದ್ದು, 1 ತಿಂಗಳು ಬೆಡ್ ರೆಸ್ಟ್ ಮಾಡುವಂತೆ ವೈದ್ಯರು ಹೇಳಿದ್ದಾರೆ" ಎಂದರು.
ಮನೆಯವರಿಗೆ ಧೈರ್ಯ ತುಂಬಿ ಬಂದಿದ್ದೇನೆ:"ಮನೆಯವರೆಲ್ಲಾ ಗಾಬರಿ ಆಗಿದ್ದರಿಂದ ಬೆಳಗ್ಗೆ ಮನೆಗೆ ಹೋಗಿ ಧೈರ್ಯ ತುಂಬಿ, ಈಗ ಮತ್ತೆ ಆಸ್ಪತ್ರೆಗೆ ಬಂದು ಅಕ್ಕನನ್ನು ಮಾತಾಡಿಸಿದ್ದೇನೆ. ನೋವು ಇರೋದರಿಂದ ಅವರಿಗೆ ಸರಿಯಾಗಿ ಮಾತನಾಡಲು ಕಷ್ಟವಾಗುತ್ತಿದೆ. ಆದರೂ ಅವರು ಧೈರ್ಯವಾಗಿದ್ದಾರೆ. ಅಪಾಯದಿಂದ ಪಾರಾಗಿದ್ದಾರೆ. ಯಾರೂ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ದೇವರು ಮತ್ತು ಜನರ ಆಶೀರ್ವಾದಿಂದ ಆರಾಮವಾಗಿದ್ದಾರೆ. ಆದಷ್ಟು ಬೇಗ ಗುಣಮುಖರಾಗಿ ಜನಸೇವೆ ಪುನರಾರಂಭಿಸುತ್ತಾರೆ ಎಂದು" ವಿಶ್ವಾಸ ವ್ಯಕ್ತಪಡಿಸಿದರು.