ಬೆಳ್ತಂಗಡಿ(ದಕ್ಷಿಣ ಕನ್ನಡ):ತಮ್ಮ ಮೇಲಿನ ಭ್ರಷ್ಟಾಚಾರ ಆರೋಪವನ್ನು ಅಲ್ಲಗಳೆದಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಇಲ್ಲಿನ ಸಂತೆಕಟ್ಟೆಯಲ್ಲಿರುವ ಮಾರಿಗುಡಿ ಸನ್ನಿಧಾನದಲ್ಲಿ ತಾನು 'ಒಂದು ರೂಪಾಯಿ ಮುಟ್ಟಿಲ್ಲ, ಭ್ರಷ್ಟಾಚಾರ ಮಾಡಿಲ್ಲ. ಒಂದು ವೇಳೆ ಭ್ರಷ್ಟಾಚಾರ ಮಾಡಿದ್ದು ಹೌದೇ ಆದಲ್ಲಿ ಮಾರಿಗುಡಿಯ ಮಹಾದೇವಿ ತಕ್ಕ ಶಿಕ್ಷೆ ನೀಡಲಿ' ಎಂದು ಪ್ರಮಾಣ ಮಾಡಿದ್ದಾರೆ.
ಬೆಳ್ತಂಗಡಿ ಪ್ರವಾಸಿ ಬಂಗಲೆ ನಿರ್ಮಾಣ ಹಾಗೂ ಹೆದ್ದಾರಿ ಕಾಮಗಾರಿಯಲ್ಲಿ ಶಾಸಕ ಹರೀಶ್ ಪೂಂಜಾ ಭ್ರಷ್ಟಾಚಾರ ಎಸಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಶಾಸಕರಿಗೆ 3 ಕೋಟಿ ಕಿಕ್ ಬ್ಯಾಕ್ ತಲುಪಿದೆ. 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದ ಬೆಳ್ತಂಗಡಿ ಪ್ರವಾಸಿ ಮಂದಿರದ ಕಾಮಗಾರಿ ಮುಗಿದ ಬಳಿಕ ವರ್ಕ್ ಆರ್ಡರ್ ಆಗಿದೆ. ಅಲ್ಲದೇ ಪ್ರವಾಸಿ ಮಂದಿರದ ಅನುದಾನವನ್ನು ಚುನಾವಣೆ ಪ್ರಚಾರಕ್ಕೆ ಬಳಸಲಾಗಿದೆ.
ಕಾಮಗಾರಿ ಪೂರ್ಣಗೊಂಡರೂ 2 ಕೋಟಿ ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಇಡಲಾಗಿದೆ. ಈ ಮೂಲಕ ಶಾಸಕ ಹರೀಶ್ ಪೂಂಜಾ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಆರೋಪಿಸಿದ್ದರು. ಅಲ್ಲದೆ ಈ ಹಗರಣಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದು, ಎಸ್ಐಟಿ ತನಿಖೆಗೂ ಆಗ್ರಹಿಸಲಾಗಿತ್ತು.