ಯಾದಗಿರಿ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು, ಅವರ ರಾಜೀನಾಮೆಗೆ ಆಗ್ರಹಿಸಿ ವಿವಿಧ ಸಂಘಟನೆಗಳು ಮಂಗಳವಾರ ಶಹಾಪುರ ಬಂಗ್ಗೆ ಕರೆ ನೀಡಿದ್ದವು.
ಈ ಹಿನ್ನೆಲೆಯಲ್ಲಿ ದಲಿತ, ಅಲ್ಪಸಂಖ್ಯಾತ, ಸಿಪಿಐಎಂ, ಮಹರ್ಷಿ ವಾಲ್ಮೀಕಿ, ವಕೀಲರ ಸಂಘ, ಸಂತ ಸೇವಾಲಾಲ್, ಕನ್ನಡಪರ ಸಂಘಟನೆಗಳು ಹಾಗೂ ಅಂಬೇಡ್ಕರ್ ವಿಚಾರವಾದಿಗಳ ಬಳಗದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಗಮನ ಸೆಳೆದ ಪುಷ್ಪ-2 ಚಿತ್ರದ ವೇಷ: ಬಂದ್ ಹಿನ್ನೆಲೆಯಲ್ಲಿ ನಗರದಲ್ಲಿ ಸಾರಿಗೆ ಬಸ್ ಸಂಚಾರ ಸ್ಥಗಿತವಾಗಿದ್ದು, ಅಂಗಡಿ, ಮುಗ್ಗಟ್ಟುಗಳು ಬಂದ್ ಆಗಿದ್ದವು. ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ನಗರದ ಕನ್ಯಾಕೋಳೂರು ಅಗಸಿಯಿಂದ ಆರಂಭಗೊಂಡ ಬೃಹತ್ ಪ್ರತಿಭಟನಾ ಮೆರವಣಿಗೆಯು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಣಕು ಶವಯಾತ್ರೆಯೊಂದಿಗೆ ರಾಜ್ಯ ಹೆದ್ದಾರಿ ಮೂಲಕ ತಹಸೀಲ್ದಾರ್ ಕಚೇರಿಯವರೆಗೆ ನಡೆಯಿತು. ಪ್ರತಿಭಟನೆಗೆ ಹಗಲು ವೇಷಧಾರಿಗಳು ಪುಷ್ಪ-2 ಚಿತ್ರದ ವೇಷ ತೊಟ್ಟು ಬೆಂಬಲಿಸುವ ಮೂಲಕ ಗಮನ ಸೆಳೆದರು.
ಮನುಸ್ಮೃತಿ ಆರಾಧಕರ ವಿರುದ್ಧ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪರಂಪರೆ ರಕ್ಷಿಸಲು ನಾವು ಹೋರಾಡುತ್ತೇವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕೂಡಲೇ ಸಂಪುಟದಿಂದ ವಜಾಗೊಳಿಸಿ, ಅವರನ್ನು ಈ ದೇಶದಿಂದ ಗಡಿಪಾರು ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಬಿಗಿ ಪೊಲೀಸ್ ಭದ್ರತೆ: ಬಂದ್ ಹಿನ್ನೆಲೆಯಲ್ಲಿ ಕಾನೂನು ವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿತ್ತು. ಒಬ್ಬರು ಡಿವೈಎಸ್ಪಿ, 4 ಸಿಪಿಐ, 13 ಪಿಎಸ್ಐ, 10 ಎಎಸ್ಐ, 3 ಡಿಎಆರ್ ತುಕಡಿ ಹಾಗೂ 100 ಜನ ಪೊಲೀಸ್ ಸಿಬ್ಬಂದಿ ಸೇರಿದಂತೆ ಹೋಂ ಗಾರ್ಡ್ಗಳನ್ನು ನಿಯೋಜನೆ ಮಾಡಲಾಗಿತ್ತು.
ಸಂಚಾರ ಮಾರ್ಗ ಬದಲಾವಣೆ: ಸಂಚಾರ ಬಂದ್ ಆದ ಹಿನ್ನೆಲೆ ರಾಯಚೂರು, ದೇವದುರ್ಗದಿಂದ ರಸ್ತಾಪುರ ಕ್ರಾಸ್ ಮೂಲಕ ಸಗರ ಮಾರ್ಗವಾಗಿ ಭೀಮರಾಯನಗುಡಿಗೆ ಸಂಪರ್ಕ ಕಲ್ಪಿಸಲಾಗಿತ್ತು. ಸುರಪುರ ಕೃಷ್ಣಾಪುರ ಸಗರ ಮೂಲಕ ಭೀಮರಾಯನಗುಡಿಗೆ ಹಾಗೂ ಯಾದಗಿರಿಯಿಂದ ಹಳಿಸಗರ ಮಾರ್ಗವಾಗಿ ಎನ್ಜಿಒ ಕಾಲೋನಿ ಮೂಲಕ ಭೀಮರಾಯನಗುಡಿಗೆ ಸಂಪರ್ಕದ ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಎಸ್.ಎಂ.ಪಾಟೀಲ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ