ಬೆಂಗಳೂರು: ದೃಷ್ಟಿ ವಿಕಲಚೇತನರ ಅನುಕೂಲಕ್ಕಾಗಿ ರಾಜ್ಯದ ಎಲ್ಲ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಮುಂದಿನ ಎರಡು ವರ್ಷಗಳಲ್ಲಿ ಬಸ್ ಸಂಚಾರದ ವಿವರಗಳ ಪ್ರಕಟಣೆಗಾಗಿ ಆಡಿಯೋ ವ್ಯವಸ್ಥೆ ಕಲ್ಪಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ದೃಷ್ಟಿವಿಶೇಷಚೇತನ ವಕೀಲ ಎನ್. ಶ್ರೇಯಸ್ ಮತ್ತು ಶ್ರೇಯಸ್ ಗ್ಲೋಬಲ್ ಟ್ರಸ್ಟ್ ಫಾರ್ ಸೋಷಿಯಲ್ ಕಾಸ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಕೃತಿಕಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯಪೀಠ ಈ ಆದೇಶ ನೀಡಿದೆ.
ವಿವಿಧ ಬಸ್ ನಿಲ್ದಾಣಗಳಲ್ಲಿ ಬಸ್ಗಳ ಆಗಮನ ಮತ್ತು ನಿರ್ಗಮನ ಸ್ಥಳಗಳಲ್ಲಿ ದೃಷ್ಟಿ ವಿಶೇಷಚೇತನರೂ ಸೇರಿ ಎಲ್ಲ ಬಗೆಯ ದಿವ್ಯಾಂಗರ ಅನುಕೂಲಕ್ಕಾಗಿ ಬಸ್‌ಗಳಲ್ಲಿ ಆಡಿಯೋ ಅನೌನ್ಸ್‌ಮೆಂಟ್ ಸಿಸ್ಟಂ (ಎಎಎಸ್) ಕಾರ್ಯನಿರ್ವಹಿಸುವಂತೆ ಮಾಡಬೇಕು ಎಂದು ರಾಜ್ಯ ಸಾರಿಗೆ ಸಂಸ್ಥೆಗಳಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಈ ಸಲುವಾಗಿ ಸುಧಾರಿತ ತಾಂತ್ರಿಕ ಉಪಕರಣಗಳು ಮತ್ತು ಸೌಲಭ್ಯಗಳನ್ನು ಪರಿಚಯಿಸಲು ರಾಜ್ಯ ಸರ್ಕಾರ ಮತ್ತು ಅದರ ಸಾರಿಗೆ ನಿಗಮಗಳಿಗೆ ನಿರ್ದೇಶನ ನೀಡಿರುವ ನ್ಯಾಯಾಲಯ, ಈ ಯೋಜನೆಯು ನಿರಂತರವಾಗಿ ಕಾರ್ಯನಿರ್ವಹಿಸಲು ಸ್ಥಳೀಯ ಅಧಿಕಾರಿಗಳು ಸಾಕಷ್ಟು ಹಣವನ್ನು ಬಜೆಟ್‌ನಲ್ಲಿ ಮೀಸಲಿಡಬೇಕು ಎಂದು ಆದೇಶಿಸಿದೆ.
ಅಲ್ಲದೇ, ಮುಂದಿನ ಎರಡು ವರ್ಷಗಳಲ್ಲಿ, ರಾಜ್ಯ ಸರ್ಕಾರ ವಿಶೇಷಚೇತನರ ಅನುಕೂಲಕ್ಕಾಗಿ ಎಎಎಸ್ ಅನ್ನು ಪ್ರತಿ ಜಿಲ್ಲೆ ಮತ್ತು ತಾಲೂಕುಗಳಲ್ಲಿನ ಎಲ್ಲಾ ಪ್ರಮುಖ ಬಸ್ ನಿಲ್ದಾಣಗಳು ಮತ್ತು ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಸ್ಥಳಗಳಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ.
ಇದನ್ನೂ ಓದಿ: ರೇವ್ ಪಾರ್ಟಿ ಪ್ರಕರಣ; ತೆಲುಗು ನಟಿ ಹೇಮಾ ವಿರುದ್ಧದ ವಿಚಾರಣಾ ಪ್ರಕ್ರಿಯೆಗೆ ಹೈಕೋರ್ಟ್ ತಡೆ
ದಿವ್ಯಾಂಗ ವ್ಯಕ್ತಿಗಳಿಗೆ ದೈಹಿಕವಾಗಿ ಮಾರ್ಗದರ್ಶನ, ಸಹಾಯ ಮತ್ತು ನೆರವು ನೀಡಲು ಪ್ರಮುಖ ಸ್ಥಳಗಳು/ಬಸ್ ನಿಲ್ದಾಣಗಳಲ್ಲಿ ಮೇಲ್ವಿಚಾರಣಾ ನೌಕರರ ತಂಡವನ್ನು ನಿಯೋಜಿಸಬೇಕು. ಇದರಿಂದ ಅವರು ಪ್ರಯೋಜನಗಳನ್ನು ಪರಿಣಾಮಕಾರಿಯಾಗಿ ಪಡೆಯಬಹುದು ಎಂದು ನ್ಯಾಯಾಲಯ ಹೇಳಿದೆ.
ಈ ಹಿಂದೆ ಸ್ಥಗಿತಗೊಂಡಿದ್ದ ಬಸ್ ನಿಲ್ದಾಣಗಳಲ್ಲಿನ ಆಡಿಯೋ ಅನೌನ್ಸ್‌ಮೆಂಟ್ ಸೌಲಭ್ಯವನ್ನು ಪುನಃ ಆರಂಭಿಸುವ ಮೂಲಕ ಅಧಿಕಾರಿಗಳು ವಿಶೇಷಚೇತನರ ಹಕ್ಕನ್ನು ಒದಗಿಸುವಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ವಿವರಿಸಿದೆ.
ಇದನ್ನೂ ಓದಿ: ಉದ್ಯೋಗ ಸ್ಥಳದಲ್ಲಿ ಜಾತಿ ತಾರತಮ್ಯ ಆರೋಪ : ಐಐಎಂ-ಬಿ ನಿರ್ದೇಶಕ ರಿಷಿಕೇಶ್ ಮತ್ತಿತರರ ವಿರುದ್ಧದ FIRಗೆ ಹೈಕೋರ್ಟ್ ತಡೆ