ಮೈಸೂರು: ನಗರದ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ಇರುವ ಇನ್ಫೋಸಿಸ್ ಅವರಣದಲ್ಲಿ ಮಂಗಳವಾರ ಕಾಣಿಸಿಕೊಂಡ ಚಿರತೆ ಸೆರೆಗಾಗಿ ಕಾರ್ಯಾಚರಣೆ ಎರಡನೇ ದಿನವೂ ಮುಂದುವರೆದಿದೆ. ಡ್ರೋನ್ ಕ್ಯಾಮರಾ ಮೂಲಕ ಚಿರತೆಯ ಪತ್ತೆ ಕಾರ್ಯ ನಡೆಸಲಾಗುತ್ತಿದೆ. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಕಾರ್ಯಚರಣೆಯ ನೇತೃತ್ವ ವಹಿಸಿದ್ದಾರೆ.
ಮೈಸೂರು ನಗರದ ಹೊರವಲಯದಲ್ಲಿರುವ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ಸುಮಾರು 350 ಎಕರೆ ವಿಸ್ತೀರ್ಣದಲ್ಲಿ ಇರುವ ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಮಂಗಳವಾರ ಬೆಳಗಿನ ಜಾವ ಚಿರತೆಯೊಂದು ಕಾಣಿಸಿಕೊಂಡಿತ್ತು. ಕ್ಯಾಂಪಸ್ನಲ್ಲಿ ಚಿರತೆ ಕಂಡುಬಂದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಬಳಿಕ ಮಂಗಳವಾರ ಬೆಳ್ಳಗೆಯಿಂದಲೇ ಅರಣ್ಯ ಇಲಾಖೆಯ ಸುಮಾರು 40 ಜನರ ತಂಡ ಕಾರ್ಯಾಚರಣೆ ಅರಂಭಿಸಿದೆ. ಆದರೆ ಮಂಗಳವಾರ ಸಂಜೆವರೆಗೂ ಚಿರತೆ ಪತ್ತೆಯಾಗಿರಲಿಲ್ಲ.
ಬುಧವಾರವೂ ಮುಂದುವರೆದ ಕಾರ್ಯಾಚರಣೆ: ಹೀಗಾಗಿ, ಚಿರತೆ ಸೆರೆಗೆ ಎರಡನೇ ದಿನವೂ ಅರಣ್ಯ ಇಲಾಖೆಯು ಡ್ರೋನ್ ಕ್ಯಾಮೆರಾ ಬಳಸಿ ಶೋಧಕಾರ್ಯ ಆರಂಭಿಸಿದೆ. ಮಂಗಳವಾರ ರಾತ್ರಿ ಇನ್ಫೋಸಿಸ್ ಕ್ಯಾಂಪಸ್ನ ಅಯಕಟ್ಟಿನ ಜಾಗಗಳಲ್ಲಿ ಟ್ರ್ಯಾಪ್ ಕ್ಯಾಮರಾ ಹಾಗೂ ಎರಡು ಬೋನ್ಗಳನ್ನು ಸಹ ಅಳವಡಿಸಲಾಗಿದೆ. ಆದರೆ ಮಂಗಳವಾರ ರಾತ್ರಿ ಚಿರತೆಯ ಸಂಚಾರ ಕ್ಯಾಂಪಸ್ನ ಎಲ್ಲಿಯೂ ಕಂಡು ಬಂದಿಲ್ಲ.
ಬುಧವಾರ ಬೆಳಗ್ಗೆಯಿಂದಲೇ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಚಿರತೆ ಕಾರ್ಯಪಡೆ ಹಾಗೂ ಪಶು ವೈದ್ಯರ ತಂಡ, ಅರಿವಳಿಕೆ ತಜ್ಞರ ಜೊತೆ ಕಾರ್ಯಾಚರಣೆ ಆರಂಭಿಸಲಾಗಿದೆ. ಮೈಸೂರು ಡಿಸಿಎಫ್ ಪ್ರಭುಗೌಡ ಹಾಗೂ ಡಿಸಿಎಫ್ ಬಸವರಾಜು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ.
ಎಚ್ಚರಿಕೆಯಿಂದ ಇರುವಂತೆ ಸಿಬ್ಬಂದಿಗೆ ಸೂಚನೆ: 350 ಎಕರೆ ವಿಸ್ತೀರ್ಣದ ಬೃಹತ್ ಇನ್ಫೋಸಿಸ್ ಕ್ಯಾಂಪಸ್ ಇದಾಗಿದ್ದು, ಸಾವಿರಾರು ಮಂದಿ ದೇಶ, ವಿದೇಶಗಳಿಂದ ತರಬೇತಿಗೆ ಬಂದ ವಿದ್ಯಾರ್ಥಿಗಳು ಇಲ್ಲಿದ್ದಾರೆ. ಜೊತೆಗೆ ಕ್ಯಾಂಪಸ್ನಲ್ಲಿ ಸಿಬ್ಬಂದಿಯೂ ಇದ್ದು, ಎಲ್ಲರೂ ಮುಂಜಾಗ್ರತೆ ವಹಿಸಬೇಕು. ಯಾರೂ ಸಹ ಕ್ಯಾಂಪಸ್ನ ಒಳಗೆ ಸುಮ್ಮನೆ ಓಡಾಡಬಾರದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಯಾವುದೇ ಸಿಬ್ಬಂದಿ, ಹೊರಗಿನಿಂದ ಬರುವವರನ್ನು ಭದ್ರತಾ ಸಿಬ್ಬಂದಿ ಕ್ಯಾಂಪಸ್ ಒಳಗೆ ಬಿಡುತ್ತಿಲ್ಲ. ಆಡಳಿತ ಅಧಿಕಾರಿಗಳು ನೌಕರರಿಗೆ ಮನೆಯಿಂದಲೇ ಕಾರ್ಯ ನಿರ್ವಹಿಸಿ ಎಂದು ಸೂಚಿಸಿದ್ದಾರೆ.
ಹುಡುಕಾಟ ಮುಂದುವರೆದಿದ್ದು, ಅರಣ್ಯ ಇಲಾಖೆ ಡ್ರೋನ್ ಕ್ಯಾಮರಾ, ಟ್ರ್ಯಾಪ್ ಕ್ಯಾಮರಾ, ಬೋನ್ಗಳು ಹಾಗೂ ನುರಿತ ಸಿಬ್ಬಂದಿ ಜೊತೆಗೆ ಚಿರತೆ ಕಾರ್ಯಪಡೆಯೂ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.
ಅರಣ್ಯ ಇಲಾಖೆ ಮಾಹಿತಿ: ''ಚಿರತೆ ಸೆರೆಗೆ ಬುಧವಾರವೂ ಡ್ರೋನ್ ಕ್ಯಾಮರಾ ಹಾಗೂ ಫೂಟ್ ಪ್ಯಾಟ್ರೋಲಿಂಗ್ ಬಳಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆಯಕಟ್ಟಿನ ಜಾಗಗಳನ್ನು ಗುರುತಿಸಿ ಅಳವಡಿಸಲಾಗಿದ್ದ ಕ್ಯಾಮರಾ ಟ್ರ್ಯಾಪ್ಗಳಲ್ಲಿ ಹಾಗೂ ಕ್ಯಾಂಪಸ್ನಲ್ಲಿನ ಸಿಸಿಟಿವಿ ಕ್ಯಾಮರಾಗಳಲ್ಲಿಯೂ ಚಿರತೆಯ ಯಾವುದೇ ಚಲನವಲನ ಕಂಡು ಬಂದಿಲ್ಲ. ಯಾವುದೇ ಹೊಸ ಹೆಜ್ಜೆ ಗುರುತುಗಳಾಗಲಿ ಕಂಡು ಬಂದಿರುವುದಿಲ್ಲ. ಸ್ಥಳಕ್ಕೆ ಅರಣ್ಯ ಸಂರಕ್ಷಣಾಧಿಕಾರಿ ಡಾ. ಮಾಲತಿಪ್ರಿಯ ಭೇಟಿ ನೀಡಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ತಂಡಕ್ಕೆ ಕಾರ್ಯಾಚರಣೆ ಪರಿಶೀಲಿಸಿ ಅಗತ್ಯ ಮಾರ್ಗದರ್ಶನ ನೀಡಿದ್ದಾರೆ. ಇನ್ಫೋಸಿಸ್ ಕ್ಯಾಂಪಸ್ನ ಎಲ್ಲಾ ಸಿಬ್ಬಂದಿ ಹಾಗೂ ತರಬೇತಾರ್ಥಿಗಳು ಮುಂಜಾಗ್ರತಾ ಕ್ರಮ ಅನುಸರಿಸುವಂತೆ ನಿರಂತರವಾಗಿ ಮಾಹಿತಿ ನೀಡಲಾಗುತ್ತಿದೆ'' ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ: ಕರುವಿನ ರಕ್ತದ ರುಚಿ ನೋಡಿ ಮತ್ತೆ ಬೇಟೆಗೆ ಬಂದ ಚಿರತೆ ಸೆರೆ : ವಿಡಿಯೋ