ಬೆಂಗಳೂರು: ವೈದ್ಯಕೀಯ ಸ್ನಾತಕೋತ್ತರ ಪದವಿಗೆ ಪ್ರವೇಶ ಪರೀಕ್ಷೆಗೆ (ಪಿಜಿ-ನೀಟ್) ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅಚಾತುರ್ಯದಿಂದ ಜಾತಿ ನಮೂದಿಸುವಲ್ಲಿ ತಪ್ಪಾಗಿದ್ದು, ಸರಿಪಡಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ(ಕೆಇಎ) ನಿರ್ದೇಶನ ನೀಡಲು ಕೋರಿ ಕೊನೆಯ ಘಳಿಗೆಯಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದ ವೈದ್ಯಕೀಯ ವಿದ್ಯಾರ್ಥಿನಿಯ ಮನವಿ ಪರಿಗಣಿಸಲು ಹೈಕೋರ್ಟ್ ನಿರಾಕರಿಸಿದೆ.
ಬೆಂಗಳೂರಿನ ಡಾ.ಸಿ.ಪ್ರೇರಣಾ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನು ಸಿವರಾಮನ್ ಮತ್ತು ನ್ಯಾಯಮೂರ್ತಿ ಉಮೇಶ್ ಎಂ.ಅಡಿಗ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ವಾದ ನಂಬಲಾಗದು ಎಂದ ಪೀಠ: ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಅರ್ಜಿದಾರರು ಹಿಂದುಳಿದ ವರ್ಗಗಳ 3ಎಗೆ(ಒಕ್ಕಲಿಗ) ಜಾತಿಗೆ ಸೇರಿದ್ದರು. ಆದರೆ, ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅಚಾತುರ್ಯದಿಂದ ಸಾಮಾನ್ಯ ವರ್ಗಕ್ಕೆ ಸೇರಿದವರು ಎಂಬುದಾಗಿ ನೀಟ್ ಪರೀಕ್ಷೆ ಅರ್ಜಿ ತುಂಬುವ ಸಂದರ್ಭದಲ್ಲಿ ತಪ್ಪಾಗಿ ನಮೂದಿಸಿದ್ದಾಗಿ ತಿಳಿಸಿದ್ದಾರೆ. ಆದರೆ, ಅರ್ಜಿ ತುಂಬುವ ಸಂದರ್ಭದಲ್ಲಿ ಅವರ ಬಳಿ ಹಿಂದುಳಿದ ವರ್ಗಗಳ ಜಾತಿಗೆ ಸೇರಿದ ಪ್ರಮಾಣ ಪತ್ರ ಮಾಡಿಸಿಲ್ಲ. ಆದರೂ ಅಚಾತುರ್ಯದಿಂದ ತಪ್ಪಾಗಿದೆ ಎಂಬುದಾಗಿ ವಾದಿಸಿದ್ದು, ಅದನ್ನು ನಂಬಲಾಗುವುದಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಅಲ್ಲದೇ, ಎರಡನೇ ಸುತ್ತಿನ ಕೌನ್ಸೆಲಿಂಗ್ 2024ರ ಡಿಸೆಂಬರ್ 6ರಂದು ಪ್ರಾರಂಭವಾಗಿ 17ಕ್ಕೆ ಮುಗಿಯುತ್ತಿತ್ತು. ಆದರೆ, ಅರ್ಜಿದಾರರು ಡಿಸೆಂಬರ್ 5ರಂದು ಮನವಿ ಸಲ್ಲಿಸಿ ತನ್ನ ಜಾತಿ ಕಲಂನಲ್ಲಿ ಆಗಿರುವ ತಪ್ಪನ್ನು ಸರಿಪಡಿಸುವಂತೆ ಕೋರಿದ್ದಾರೆ. ಇದು ಎರಡನೇ ಸುತ್ತಿನ ಕೌನ್ಸೆಲಿಂಗ್ ಪ್ರಾರಂಭಕ್ಕೆ ಸಿದ್ದಗೊಳ್ಳುವ ಸಂದರ್ಭದಲ್ಲಿ ತಾನು ಸಲ್ಲಿಸಿರುವ ಅರ್ಜಿಯಲ್ಲಿ ತಪ್ಪಾಗಿರುವುದು ತಿಳಿದುಕೊಂಡಿರುವುದಾಗಿ ತಿಳಿಸಿದ್ದಾರೆ. ಈ ವಾದ ನಂಬಲಾಗುವುದಿಲ್ಲ ಎಂದು ಪೀಠ ಹೇಳಿದೆ.
ಪ್ರಕರಣ: ಅರ್ಜಿದಾರರಾದ ಡಾ. ಸಿ.ಪ್ರೇರಣಾ 2023ರ ಮಾರ್ಚ್ನಲ್ಲಿ ಕರ್ನಾಟಕದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಎಂಬಿಬಿಎಸ್ ಪದವಿ ಪೂರ್ಣಗೊಳಿಸಿದ್ದಾರೆ. 2024ರಲ್ಲಿ ನಡೆಸಿದ ರಾಷ್ಟ್ರೀಯ ಅರ್ಹತೆ ಪ್ರವೇಶ ಪರೀಕ್ಷೆಯಲ್ಲಿ (ಪಿಜಿ-ನೀಟ್) ಭಾಗಿಯಾಗಿದ್ದು, 1,19,700 ರ‍್ಯಾಂಕ್ ಪಡೆದುಕೊಂಡಿದ್ದರು.
ಅರ್ಜಿದಾರರು ಹಿಂದುಳಿದ ವರ್ಗಗಳ 3ಎ(ಒಕ್ಕಲಿಗ)ಗೆ ಜಾತಿಗೆ ಸೇರಿದ್ದರು. ಆದರೆ, ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅಚಾತುರ್ಯದಿಂದ ಸಾಮಾನ್ಯ ವರ್ಗಕ್ಕೆ ಸೇರಿದವರು ಎಂಬುದಾಗಿ ನಮೂದಿಸಿದ್ದು, ಬಳಿಕ ತಾನು ಮಾಡಿದ ತಪ್ಪು ಗೊತ್ತಾಗಿ, ತಕ್ಷಣ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಮನವಿ ಮಾಡಲಾಗಿದೆ. ಆದರೆ, ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಅಲ್ಲದೇ, ಎರಡನೇ ಸುತ್ತಿನ ಪಿಜಿ ಸಿಇಟಿ ಕೌನ್ಸೆಲಿಂಗ್ಗೆ ಅಧಿಸೂಚನೆ ಹೊರಡಿಸಿತ್ತು. ಜಾತಿ ಪಟ್ಟಿಯಲ್ಲಿ ಆಗಿರುವ ತಪ್ಪನ್ನು ಸರಿಪಡಿಸುವಂತೆ ಕೋರಿ ಸಲ್ಲಿಸಿರುವ ಮನವಿ ಪರಿಗಣಿಸಲು ಸೂಚನೆ ನೀಡಬೇಕು ಎಂದು ಅರ್ಜಿಯಲ್ಲಿ ಕೋರಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ''ಅರ್ಜಿದಾರ ವಿದ್ಯಾರ್ಥಿನಿಯ ಅಚಾತುರ್ಯದಿಂದ ತಪ್ಪಾಗಿ ನಮೂದಿಸಿರುವ ಜಾತಿ ಪಟ್ಟಿಯನ್ನು ತಿದ್ದುಪಡಿ ಮಾಡುವುದಕ್ಕೆ ಅವಕಾಶ ಕಲ್ಪಿಸಬೇಕು. ಜೊತೆಗೆ, ಎರಡನೇ ಸುತ್ತಿನ ಕೌನ್ಸೆಲಿಂಗ್ನಲ್ಲಿ ಹಿಂದುಳಿದ ವರ್ಗಗಳ ಅಡಿಯಲ್ಲಿನ ಜಾತಿ ಪ್ರಮಾಣ ಪತ್ರ ಪರಿಗಣಿಸಲು ನಿರ್ದೇಶನ ನೀಡಬೇಕು. ಇಲ್ಲವಾದಲ್ಲಿ ಅರ್ಜಿದಾರರು ಒಂದು ವರ್ಷದ ಶೈಕ್ಷಣಿಕ ಜೀವನಕ್ಕೆ ಮೊಟಕಾಗಲಿದೆ'' ಎಂದು ಪೀಠಕ್ಕೆ ಕೋರಿದರು.
ಇದಕ್ಕೆ ಆಕ್ಷೇಪಿಸಿದ ಸರ್ಕಾರ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪರ ವಕೀಲರು, ''ಈಗಾಗಲೇ ಎರಡನೇ ಸುತ್ತಿನ ಕೌನ್ಸೆಲಿಂಗ್ಗೆ ಸಂಬಂಧಿಸಿದಂತೆ ದಾಖಲೆಗಳ ಪರಿಶೀಲನೆ ಮುಕ್ತಾಯವಾಗಿದೆ. ಕೆಲವೇ ದಿನಗಳಲ್ಲಿ ಕೌನ್ಸೆಲಿಂಗ್ ಸಹ ಆರಂಭವಾಗಲಿದೆ. ಹೀಗಾಗಿ, ಅರ್ಜಿದಾರರ ಕೋರಿಕೆಯನ್ನು ಪರಿಗಣಿಸಿದಲ್ಲಿ ಸಂಪೂರ್ಣ ಕೌನ್ಸೆಲಿಂಗ್ ಪ್ರಕ್ರಿಯೆಗೆ ಅಡಚಣೆಯಾಗಲಿದೆ. ಹೀಗಾಗಿ, ಅವರ ಮನವಿ ತಿರಸ್ಕರಿಸಬೇಕು'' ಎಂದು ಮನವಿ ಮಾಡಿದ್ದರು.
ಅಲ್ಲದೆ, ಅರ್ಜಿದಾರರು ಪಿಜಿ - ನೀಟ್ ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಬಳಿಕ ಸಂಬಂಧಿಸಿದ ಸರ್ಕಾರಿ ಪ್ರಾಧಿಕಾರದಿಂದ ಹಿಂದುಳಿದ ಜಾತಿಗಳ ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದಾರೆ. ಇದರಿಂದ, ಅವರು ಅಚಾತುರ್ಯದಿಂದ ತಪ್ಪಾಗಿದೆ ಎಂದು ನಂಬಲಾಗುವುದಿಲ್ಲ. ಹೀಗಾಗಿ ಅರ್ಜಿ ವಜಾಗೊಳಿಸಬೇಕು ಎಂದು ಕೋರಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಈ ಆದೇಶ ನೀಡಿದೆ.
ಇದನ್ನೂ ಓದಿ: ಬಸ್ ನಿಲ್ದಾಣಗಳಲ್ಲಿ ವಿಕಲಚೇತನರಿಗೆ ನೆರವಾಗಲು ಆಡಿಯೋ ಪ್ರಕಟಣೆಗೆ ಸರ್ಕಾರಕ್ಕೆ ಸೂಚಿಸಿದ ಹೈಕೋರ್ಟ್