ಚಿಕ್ಕೋಡಿ: ದೆಹಲಿಗೆ ಹೋದಾಗ ನಮ್ಮ ವರಿಷ್ಠರು, ಪಕ್ಷದ ಅಧ್ಯಕ್ಷರನ್ನು ಭೇಟಿಯಾಗುವುದು ಸಹಜ. ಅದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಇಂದು ನಿಪ್ಪಾಣಿಯಲ್ಲಿ ಖಾಸಗಿ ಕಾಲೇಜು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೆಹಲಿ ಪ್ರವಾಸ ಹೊಸದಲ್ಲ. ವರಿಷ್ಠರನ್ನು ನಾವು ಭೇಟಿಯಾಗುವುದು ವಾಡಿಕೆ. ರಾಜ್ಯದಲ್ಲಿ ಹೊಸ ಸಂಚಲನದ ಲಕ್ಷಣ ಹಾಗೂ ಬೆಳವಣಿಗೆಗಳು ಕಾಣುತ್ತಿಲ್ಲ. ಎಲ್ಲವೂ ಊಹಾಪೋಹಗಳಷ್ಟೇ ಎಂದರು.
ರಾಜ್ಯದಲ್ಲಿ ದಲಿತ ಸಿಎಂ ಕೂಗು ಎದ್ದಿಲ್ಲ. ಖರ್ಗೆ ಅವರ ಜೊತೆಗೆ ಮುಡಾ ಹಗರಣ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ರಾಜಕೀಯ, ನಮ್ಮ ಸಮಸ್ಯೆಗಳನ್ನು ಮಾತ್ರ ಚರ್ಚಿಸಿದ್ದೇವೆ. ನಾನು ಸಿಎಂ ಎನ್ನುವುದನ್ನು ಅಭಿಮಾನಿಗಳು ಅಭಿಯಾನ ಮಾಡುತ್ತಿದ್ದಾರೆ. ಅಭಿಯಾನ ಮಾಡಲು ದುಡ್ಡು ಬೇಕಾಗಿಲ್ಲ. ಫ್ರೀ ಆಗಿ ಮಾಡುವರು ಮಾಡುತ್ತಾರೆ. ಅದಕ್ಕೂ ಖರ್ಗೆ ಅವರೊಂದಿಗಿನ ಭೇಟಿಗೂ ಸಂಬಂಧವಿಲ್ಲ ಎಂದು ತಿಳಿಸಿದರು.