ಕರ್ನಾಟಕ

karnataka

ETV Bharat / state

ಹೆಚ್‌ಡಿಕೆ, ಡಿಕೆಶಿ ಇಷ್ಟೊಂದು ಆವೇಶಭರಿತವಾಗಿ ಮಾತನಾಡುವುದು ಸರಿಯಲ್ಲ: ಸಚಿವ ಸತೀಶ್ ಜಾರಕಿಹೊಳಿ - Satish Jarakiholi

ಡಿ.ಕೆ.ಶಿವಕುಮಾರ್​ ಮತ್ತು ಹೆಚ್.​ಡಿ.ಕುಮಾರಸ್ವಾಮಿ ಆರೋಪ-ಪ್ರತ್ಯಾರೋಪ ಹಾಗು ಮುಡಾ ಹಗರಣ ಆರೋಪದ ಕುರಿತು ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿದರು.

MINISTER SATISH JARAKIHOLI  DK SHIVAKUMAR  HD KUMARASWAMY  BELAGAVI
ಸಚಿವ ಸತೀಶ್ ಜಾರಕಿಹೊಳಿ (ETV Bharat)

By ETV Bharat Karnataka Team

Published : Aug 6, 2024, 9:40 PM IST

Updated : Aug 6, 2024, 10:59 PM IST

ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ (ETV Bharat)

ಬೆಳಗಾವಿ:ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದರೆ ಕಾನೂನು ಹೋರಾಟ ಅನಿವಾರ್ಯವಾಗಲಿದೆ. ಯಾವ ರೀತಿ ಹೋರಾಟ ಮಾಡಬೇಕೆಂದು ಈಗಾಗಲೇ ಚರ್ಚೆ ನಡೆದಿದೆ ಎಂದು ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದರು.

ಮಂಗಳವಾರ ಅಥಣಿ ತಾಲೂಕಿನಲ್ಲಿ ಕೃಷ್ಣಾ ನದಿ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ಅಥಣಿ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು.

ಮೂಡಾ ವಿಚಾರದಲ್ಲಿ ಸಿಎಂ ಎಲ್ಲರಿಗೂ ಸ್ಪಷ್ಟತೆ ನೀಡಿದ್ದಾರೆ. ತನಿಖೆಗೂ ಆದೇಶಿಸಿದ್ದಾರೆ. ರಾಜಕೀಯ ಉದ್ದೇಶಕ್ಕಾಗಿ ಸಿದ್ದರಾಮಯ್ಯನವರ ಮೇಲೆ ಆರೋಪ ಮಾಡುತ್ತಿದ್ದಾರೆ. ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ನೀಡಿದರೆ ಯಾವ ರೀತಿಯ ಹೋರಾಟ ಮಾಡಬೇಕು ಎಂಬುದು ಚರ್ಚೆ ಆಗಿದೆ ಎಂದು ಹೇಳಿದರು.

ಶಾಸಕ ಬಸವನಗೌಡ ಯತ್ನಾಳ್​ ಅವರು ಡಿ.ಕೆ.ಶಿವಕುಮಾರ್ ಅವರನ್ನು ಸಿಎಂ ಮಾಡೋಕೆ ವಿಜಯೇಂದ್ರ ಪಾದಯಾತ್ರೆ ಮಾಡುತ್ತಿದ್ದಾರೆ ಎಂಬ ಆರೋಪ ವಿಚಾರದ ಬಗ್ಗೆ ಮಾತನಾಡಿ, ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲ್ಲ. ಅವರು ಹೇಳಿದ ಹಾಗೆ ನಮ್ಮ ಬಳಿ ಯಾವುದೇ ದಾಖಲೆಗಳಿಲ್ಲ. ಹಾಗಾಗಿ ಮಾತಾಡಲ್ಲ. ಬಿಜೆಪಿ ಹಗರಣಗಳ ಕುರಿತು ತನಿಖೆ ಮಾಡಬೇಕಿತ್ತು. ಬಿಜೆಪಿಯವರ ಹಗರಣಗಳಿಗೆ ನಮ್ಮ ಸರ್ಕಾರ ಹೆಚ್ಚು ಗಮನ ಕೊಟ್ಟಿಲ್ಲ. ಈಗ ನಾವು ಎಚ್ಚೆತ್ತುಕೊಂಡಿದ್ದೇವೆ. ಈಗಾಗಲೇ 29 ಪ್ರಕರಣಗಳು ತನಿಖೆ ನಡೆಯುತ್ತಿವೆ. ಈಗಲೂ ಕಾಲ ಮಿಂಚಿಲ್ಲ. ಶೀಘ್ರವಾಗಿ ತನಿಖೆ ಮಾಡಿಸ್ತೀವಿ ಎಂದರು.

ಮುಡಾ ಹಗರಣ ವಿಚಾರಕ್ಕೆ ಬಿಜೆಪಿ ಪಾದಯಾತ್ರೆ ಕುರಿತು ಸಚಿವ ಜಾರಕಿಹೋಳಿ ಪ್ರತಿಕ್ರಿಯಿಸಿ, ಪಾದಯಾತ್ರೆ ಹಾಗೂ ಆರೋಪ ಮಾಡಲು ಬಿಜೆಪಿಯವರಿಗೆ ಹಕ್ಕಿದೆ. ಅವರು ಮಾಡಲಿ. ಅದನ್ನು ನಾವು ಪ್ರಶ್ನೆ ಮಾಡಲು ಆಗಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವ ಪ್ರಶ್ನೆಯೇ ಬರಲ್ಲ. ಅವರು ಯಾವುದೇ ತಪ್ಪು ಮಾಡಿಲ್ಲ. ನಾವೂ ಸಹ ಮುಡಾ ಕುರಿತಂತೆ ಸಮಾವೇಶ ಮಾಡುತ್ತೇವೆ. ಮುಡಾದಲ್ಲಿ ಏನಿದೆ, ಏನ್ ಆಗಿದೆ ಎಂದು ಹೇಳುತ್ತೇವೆ. ಇದೇ 9ರಂದು ಮೈಸೂರಿನಲ್ಲಿ ಬೃಹತ್ ಸಮಾವೇಶ ಇದೆ. ಎಲ್ಲಾ ಮಂತ್ರಿಗಳು, ಶಾಸಕರು ತೆರಳುತ್ತೇವೆ. ಸಮಾವೇಶದಲ್ಲಿ ಮುಖ್ಯಮಂತ್ರಿಗಳು ಹಾಗೂ ತಜ್ಞರು ಉತ್ತರ ಕೊಡುತ್ತಾರೆ ಎಂದು ಹೇಳಿದರು.

ಡಿಕೆಶಿ ಹಾಗೂ ಹೆಚ್​ಡಿಕೆ ನಡುವಿನ ಟಾಕ್ ವಾರ್ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದ ಜನ ಗಮನಿಸುತ್ತಿದ್ದಾರೆ. ಇದು ಸರಿಯಾದ ಕ್ರಮ ಅಲ್ಲ. ಇಷ್ಟೊಂದು ಆವೇಶಭರಿತವಾಗಿ ಮಾತನಾಡುವುದು ಸರಿಯಲ್ಲ. ಅವರು ತುಂಬಾ ಆಳವಾಗಿ ಹೋಗಿ ಮಾತನಾಡುತ್ತಿದ್ದಾರೆ. ನಾವು ಸಾರ್ವಜನಿಕ ಜೀವನದಲ್ಲಿ ಇದ್ದೇವೆ. ಚೌಕಟ್ಟಿನಲ್ಲಿ ಮಾತನಾಡಬೇಕೆಂದು ಇಬ್ಬರು ನಾಯಕರಿಗೆ ಸಲಹೆ ನೀಡಿದರು.

ಇದನ್ನೂ ಓದಿ:ಡಿಕೆಶಿ-ಹೆಚ್​ಡಿಕೆ ನಡುವಿನ ವೈಯಕ್ತಿಕ ಟೀಕೆಗಳಿಂದ ಪಾದಯಾತ್ರೆ ಡೈವರ್ಟ್: ಎಸ್.ಆರ್.ವಿಶ್ವನಾಥ್ - S R Vishwanath

Last Updated : Aug 6, 2024, 10:59 PM IST

ABOUT THE AUTHOR

...view details