ಮೈಸೂರು : ಜೆಡಿಎಸ್ ಶಾಸಕರನ್ನ ಕಾಂಗ್ರೆಸ್ಗೆ ಕರೆತರುತ್ತೇನೆ ಎಂಬ ಶಾಸಕ ಸಿ. ಪಿ ಯೋಗೇಶ್ವರ್ ಹೇಳಿಕೆಗೆ ಜೆಡಿಎಸ್ನ ಮಾಜಿ ಶಾಸಕ ಸಾ. ರಾ ಮಹೇಶ್ ಅವರು ಪ್ರತಿಕ್ರಿಯಿಸಿದ್ದು, ಮೊದಲು ಕಾಂಗ್ರೆಸ್ನಲ್ಲಿರುವ ಅಸಮಾಧಾನಗೊಂಡ ಶಾಸಕರ ಬಗ್ಗೆ ಗಮನ ಹರಿಸಲಿ. ಆ ನಂತರ ಜೆಡಿಎಸ್ ಬಗ್ಗೆ ಗಮನ ನೀಡಿದರೆ ಒಳ್ಳೆಯದು ಎಂದು ತಿರುಗೇಟು ನೀಡಿದ್ದಾರೆ.
ಈ ಕುರಿತು ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಿ ಪಿ ಯೋಗೇಶ್ವರ್ ಅವರು ನನಗೂ ಸ್ನೇಹಿತರು, ಕುಮಾರಣ್ಣ ಮಾರ್ಗದರ್ಶನದಲ್ಲಿ ಜೆಡಿಎಸ್ನಿಂದ ಅಭ್ಯರ್ಥಿ ಮಾಡಬೇಕು, ಅವರನ್ನ ನಮ್ಮಲ್ಲೇ ಉಳಿಸಿಕೊಳ್ಳಬೇಕು ಎಂದು ಹೇಳಿ ಹಲವಾರು ಬಾರಿ ದೆಹಲಿಯಲ್ಲಿ ಹಾಗೂ ಬೆಂಗಳೂರಿನಲ್ಲಿಯೂ ಚರ್ಚೆ ಮಾಡಿದ್ದೇವೆ. ಇವತ್ತು ಅವರು ಕಾಂಗ್ರೆಸ್ಗೆ ಹೋಗಿದ್ದಾರೆ. ಶಾಸಕರಾಗಿದ್ದಾರೆ. ಜನ ಆಶೀರ್ವಾದ ಮಾಡಿದ್ದಾರೆ. ಮೂರು ವರ್ಷ ಒಳ್ಳೆಯ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.
ಮೂರು ವರ್ಷ ಸರ್ಕಾರ ಉಳಿಸಿಕೊಳ್ಳಲಿ : ನಮ್ಮವರನ್ನ ಕರೆಯುವುದು ಇರಲಿ, ಕಾಂಗ್ರೆಸ್ನಿಂದ 30 - 35 ಜನ ಬರಲಿಕ್ಕೆ ರೆಡಿ ಇದ್ದಾರೆ, ಸರ್ಕಾರ ಬಹಳಷ್ಟು ದಿನ ಉಳಿಯಲ್ಲ ಎಂದು ಹೇಳಿ ನನ್ನೊಂದಿಗೆ ಚರ್ಚೆ ಮಾಡಿದ್ದಾರೆ. ಮೊದಲು ಮಾನ್ಯ ಮುಖ್ಯಮಂತ್ರಿಗಳಿಗೆ, ಉಪಮುಖ್ಯಮಂತ್ರಿಗಳಿಗೆ ಅವರು ಯಾರ್ಯಾರು ಅಸಮಾಧಾನಿತರು ಇದ್ದಾರೆ, ಅವರೆಲ್ಲರ ಪಟ್ಟಿಯನ್ನ ಕೊಟ್ಟು ಅವರನ್ನೆಲ್ಲಾ ಸಮಾಧಾನಪಡಿಸಿಕೊಂಡು, ಮೂರು ವರ್ಷ ಸರ್ಕಾರ ಉಳಿಸಿಕೊಳ್ಳಲಿ ಎಂದು ಸಲಹೆ ಕೊಡಲಿ ಎಂದರು.
ನಮ್ಮ ಪಕ್ಷದ ಮೇಲೆ ನಮಗೆ ನಂಬಿಕೆ ಇದೆ. ಪ್ರಾದೇಶಿಕ ಪಕ್ಷವಾದರೂ ನಾವು ಗೆಲ್ಲಲಿ - ಸೋಲಲಿ ಬದುಕಿರುವ ತನಕ ದೇವೇಗೌಡರು, ಕುಮಾರಸ್ವಾಮಿ ಅವರ ಜೊತೆಯಲ್ಲಿ ಇರುತ್ತೇವೆ ಎಂದು ಹೇಳಿದರು.
ಅಸಮಾಧಾನಿತರು ಯಾರಿದ್ದಾರೆ ಎಂಬುದು ಅವರಿಗೆ ಗೊತ್ತಿದೆ: ಅವರನ್ನ ನಿಮ್ಮ ಜೊತೆಯಲ್ಲಿಯೇ ಇರಿಸಿಕೊಳ್ಳಬೇಕು ಎಂದು ಇದ್ರಿ, ಗೆಲ್ಲಿಸಿಕೊಳ್ಳಬೇಕು ಅಂತಿದ್ರಿ. ಆದರೆ ಅವರ ಮನಸ್ಸಿನಲ್ಲಿ ಇದೆಲ್ಲ ಇದೆಯೋ ಇಲ್ಲವೋ ನಿಮಗೆ ಏನು ಅನ್ನಿಸುತ್ತೆ? ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಅವರನ್ನ ಮುಖ್ಯಮಂತ್ರಿ ಸ್ಥಾನದಿಂದ ತೆಗೆದವರಲ್ಲಿ ಇವರು ಒಬ್ಬ ಪ್ರಮುಖರು. ಇವೆಲ್ಲವನ್ನು ಮರೆತು ನಾವು ನಮ್ಮ ಪಕ್ಷದಿಂದಲೇ ಅವರಿಗೆ ಬಿ ಪಾರಂ ಕೊಡಬೇಕು, ಕೊನೆಕ್ಷಣದಲ್ಲಿ ಎನ್ಡಿಎ ಅಭ್ಯರ್ಥಿಯನ್ನೇ ಬಿಜೆಪಿಯಿಂದಲೇ ಆಗಲಿ ಎಂಬ ತೀರ್ಮಾನಕ್ಕೆ ಕುಮಾರಸ್ವಾಮಿ ಬಂದರು. ಅವೆಲ್ಲ ಮುಗಿದ ಅಧ್ಯಾಯ. ಈಗ ಕಾಂಗ್ರೆಸ್ನಲ್ಲಿ ಅಸಮಾಧಾನಿತರು ಯಾರಿದ್ದಾರೆ ಎಂಬುದು ಅವರಿಗೆ ಗೊತ್ತಿದೆ. ಮೊದಲು ಅವರನ್ನ ಸಮಾಧಾನಪಡಿಸಿ, ಮೂರು ವರ್ಷ ಸರ್ಕಾರ ಉಳಿಸಿಕೊಳ್ಳಲಿ ಎಂದಿದ್ದಾರೆ.
ಇದನ್ನೂ ಓದಿ : ಚನ್ನಪಟ್ಟಣ ಬೈ ಎಲೆಕ್ಷನ್: ಸಿ ಪಿ ಯೋಗೇಶ್ವರ್ ಗೆಲುವಿಗೆ ಪ್ರಮುಖ ಕಾರಣಗಳಿವು!