WPL, RCB: ಮಹಿಳಾ ಪ್ರೀಮಿಯರ್ ಲೀಗ್(ಡಬ್ಲ್ಯೂಪಿಎಲ್)ನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ನಾಯಕಿ ಸ್ಮೃತಿ ಮಂಧಾನ ಅವರ ಅದ್ಭುತ ಆಟ ಎಲ್ಲರ ಮನಗೆದ್ದಿತು. ಭರ್ಜರಿ ಅರ್ಧ ಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎಂಟು ವಿಕೆಟ್‌ಗಳಿಂದ ಮಣಿಸಿದೆ. ಇದರೊಂದಿಗೆ ಆರ್‌ಸಿಬಿ ಗೆಲುವಿನ ಓಟ ಮುಂದುವರೆಸಿತು.
ಡೆಲ್ಲಿ 19.3 ಓವರ್‌ಗಳಲ್ಲಿ 141 ರನ್‌ಗಳಿಗೆ ಸರ್ವ ಪತನಗೊಂಡಿತು. ಆರ್‌ಸಿಬಿ 16.2 ಓವರ್‌ಗಳಲ್ಲಿ ಕೇವಲ ಎರಡು ವಿಕೆಟ್‌ಗಳು ಕಳೆದುಕೊಂಡು ಗೆಲುವಿನ ದಡ ತಲುಪಿತು.
ಶತಕದ ಜೊತೆಯಾಟ: ಸ್ಮೃತಿ ಮಂಧಾನ ಮತ್ತು ಡ್ಯಾನಿ ವ್ಯಾಟ್ ಮೊದಲ ವಿಕೆಟ್‌ಗೆ 107 ರನ್‌ಗಳ ಜೊತೆಯಾಟವಾಡಿದರು. ಇದಾದ ನಂತರ ದೆಹಲಿ ಸೋಲಿನತ್ತ ಸಾಗಿತು. ಮಂಧಾನ ಅರ್ಧಶತಕ ಗಳಿಸಿ ಮುನ್ನಡೆದರು. ಆದರೆ ವ್ಯಾಟ್ ಅರ್ಧಶತಕ ಗಳಿಸುವ ಅವಕಾಶದಿಂದ ವಂಚಿತರಾದರು. ಅರುಂಧತಿ ರೆಡ್ಡಿ ಬೌಲಿಂಗ್‌ನಲ್ಲಿ ಜೆಮಿಮಾ ರೊಡ್ರಿಗಸ್ ಅವರಿಗೆ ಕ್ಯಾಚಿತ್ತು ಔಟಾದರು.
ಬಲಗೈ ಬ್ಯಾಟರ್ ವ್ಯಾಟ್ 33 ಎಸೆತಗಳಲ್ಲಿ ಏಳು ಬೌಂಡರಿಗಳ ಸಹಾಯದಿಂದ 42 ರನ್ ಗಳಿಸಿದರು. ತಂಡಕ್ಕೆ ಗೆಲ್ಲಲು ಒಂಬತ್ತು ರನ್‌ಗಳು ಬೇಕಾಗಿದ್ದಾಗ ಮಂಧಾನ ಔಟಾದರು. ಅವರು 47 ಎಸೆತಗಳಲ್ಲಿ 10 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳಿಂದ 81 ರನ್ ಪೇರಿಸಿದರು. ಇದಾದ ಬಳಿಕ ಬಂದ ಆಲಿಸ್ ಪೆರ್ರಿ ಮತ್ತು ರಿಚಾ ಘೋಷ್ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
ಸ್ಮೃತಿ ಮಂಧಾನ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಆರ್‌ಸಿಬಿ ಪರ ರೇಣುಕಾ ಠಾಕೂರ್ ಮತ್ತು ಜಾರ್ಜಿಯಾ ವೇರ್‌ಹ್ಯಾಮ್ ತಲಾ 3 ವಿಕೆಟ್ ಪಡೆದು ದೆಹಲಿ ತಂಡ ದೊಡ್ಡ ಸ್ಕೋರ್ ದಾಖಲಿಸುವುದನ್ನು ತಡೆದರು.
ದೆಹಲಿ ಪರ ಜೆಮಿಮಾ ರೊಡ್ರಿಗಸ್ 22 ಎಸೆತಗಳಲ್ಲಿ 34 ರನ್ ಗಳಿಸಿದರು. ಜೆಮಿಮಾ ಮತ್ತು ನಾಯಕಿ ಮೆಗ್ ಲ್ಯಾನಿಂಗ್ ನಡುವಿನ ಜೊತೆಯಾಟ ಹೊರತುಪಡಿಸಿದರೆ ಡೆಲ್ಲಿಗೆ ಬೇರಾವುದೇ ದೊಡ್ಡ ಮೊತ್ತದ ಜೊತೆಯಾಟ ಮೂಡಿಬರಲೇ ಇಲ್ಲ. ಆರ್‌ಸಿಬಿ ಪರ ರೇಣುಕಾ ಮತ್ತು ಜಾರ್ಜಿಯಾ ಹೊರತುಪಡಿಸಿ, ಕಿಮ್ ಗಾರ್ತ್ ಮತ್ತು ಏಕ್ತಾ ಬಿಶ್ತ್ ತಲಾ ಎರಡು ವಿಕೆಟ್ ಪಡೆದರು.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್‌ಸಿಬಿ ಉತ್ತಮ ಆರಂಭ ಪಡೆದಿತ್ತು. ಮೊದಲ ಓವರ್‌ನಲ್ಲಿಯೇ ದೆಹಲಿ ತಂಡಕ್ಕೆ ಆರ್‌ಸಿಬಿ ಆಘಾತ ನೀಡಿತು. ಶೆಫಾಲಿ ವರ್ಮಾ ಮೊದಲ ಓವರ್‌ನಲ್ಲಿ ವಿಕೆಟ್ ಕಳೆದುಕೊಂಡರು. ರೇಣುಕಾ ಸಿಂಗ್ ಸ್ಮೃತಿ ಮಂಧಾನ ಅವರಿಗೆ ಕ್ಯಾಚ್ ನೀಡುವ ಮೂಲಕ ಪೆವಲಿಯನ್ ಹಾದಿ ಹಿಡಿದರು. ಇದರ ನಂತರ ರೊಡ್ರಿಗಸ್ ಮತ್ತು ಲ್ಯಾನಿಂಗ್ ನಡುವೆ ಉತ್ತಮ ಜೊತೆಯಾಟ ಸಾಗಿತು. ಆರು ಓವರ್‌ಗಳು ಮುಗಿಯುವ ವೇಳೆಗೆ ಡೆಲ್ಲಿ ಒಂದು ವಿಕೆಟ್ ನಷ್ಟಕ್ಕೆ 55 ರನ್ ಗಳಿಸಿತು. ಎರಡನೇ ವಿಕೆಟ್‌ಗೆ ರೊಡ್ರಿಗಸ್ ಮತ್ತು ಲ್ಯಾನಿಂಗ್ 59 ರನ್ ಸೇರಿಸಿದರು.
ಆರಂಭಿಕ ಹಿನ್ನಡೆಯ ನಂತರ ಆರ್‌ಸಿಬಿ ಬೌಲರ್‌ಗಳು ಪವರ್‌ಪ್ಲೇನಲ್ಲಿ ಬೇರೆ ಯಾವುದೇ ಯಶಸ್ಸನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಆದರೆ ದೆಹಲಿಯ ಉತ್ತಮ ಆಟ ಹೆಚ್ಚು ಕಾಲ ಉಳಿಯಲಿಲ್ಲ. ದೆಹಲಿಯ ಬ್ಯಾಟಿಂಗ್ ಕುಸಿತ ಕಂಡಿದ್ದು, 100 ರನ್‌ಗಳಿಗಿಂತ ಕಡಿಮೆ ಅಂತರದಲ್ಲಿ ಐದು ವಿಕೆಟ್‌ಗಳನ್ನು ಕಳೆದುಕೊಂಡಿತು.
ಜೆಮಿಮಾ 22 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ಸಹಾಯದಿಂದ 34 ರನ್ ಗಳಿಸಿ ಔಟಾದರು. ಆದರೆ ನಾಯಕಿ ಮೆಗ್ ಲ್ಯಾನಿಂಗ್ 19 ಎಸೆತಗಳಲ್ಲಿ ಮೂರು ಬೌಂಡರಿಗಳ ಸಹಾಯದಿಂದ 17 ರನ್ ಗಳಿಸಿದರು. ಇಲ್ಲಿಂದ ದೆಹಲಿ ತಂಡದ ವಿಕೆಟ್‌ಗಳು ಉರುಳುವುದು ನಿಲ್ಲಲಿಲ್ಲ. ಅನ್ನಾಬೆಲ್ ಸದರ್ಲ್ಯಾಂಡ್ 19, ಮರಿಜಾನ್ನೆ ಕಾಪ್ 12, ಸಾರಾ ಬ್ರೈಸ್ 23, ಮತ್ತು ಶಿಖಾ ಪಾಂಡೆ 14 ರನ್ ಗಳಿಸಿ ತಂಡವನ್ನು 141 ರನ್ ಗಳಿಸಲು ಸಹಾಯ ಮಾಡಿದರು.
ಇದನ್ನೂ ಓದಿ: ಮತ್ತೊಮ್ಮೆ ಫ್ಯಾನ್ಸ್ ಹೃದಯ ಗೆದ್ದ RCB; '12th ಮ್ಯಾನ್ ಆರ್ಮಿಗೆ ವಿಶೇಷ ಗೌರವ!