ಗಂಗಾವತಿ: ರಜೆ ಕಳೆಯಲು ಸ್ನೇಹಿತರೊಂದಿಗೆ ಬಂದು, ಈಜಾಡಲು ಹೋಗಿದ್ದ ಸಂದರ್ಭದಲ್ಲಿ ತುಂಗಭದ್ರಾ ನದಿಯಲ್ಲಿ ಕೊಚ್ಚಿಹೋಗಿದ್ದ ಹೈದರಾಬಾದ್ನ ಖಾಸಗಿ ಆಸ್ಪತ್ರೆಯ ವೈದ್ಯೆ ಅನನ್ಯ ಮೋಹನ್ರಾವ್ ಅವರ ಮೃತದೇಹ ಗುರುವಾರ ಪತ್ತೆಯಾಗಿದೆ.
ಅನನ್ಯ ಮೋಹನ್ರಾವ್ ಅವರು ತಾಲೂಕಿನ ಸಣಾಪುರದ ಸಮೀಪ ತುಂಗಭದ್ರಾ ನದಿಯಲ್ಲಿ ಕೊಚ್ಚಿ ಹೋಗಿದ್ದರು. ಸುಮಾರು 16 ಗಂಟೆಗಳ ಶೋಧ ಕಾರ್ಯಾಚರಣೆ ಬಳಿಕ ಮೃತದೇಹವನ್ನು ನದಿಯಿಂದ ಮೇಲೆತ್ತಲಾಗಿದೆ.
ನದಿಯಲ್ಲಿನ ಕಲ್ಲು ಬಂಡೆಗಳ ಕೊರಕಲು ಸಂದಿಯಲ್ಲಿ ಮೃತದೇಹ ಸಿಲುಕಿಕೊಂಡಿತ್ತು. ಇದನ್ನು ಸ್ಥಳೀಯ ಈಜುಗಾರರು ಗಮನಿಸಿದ್ದಾರೆ. ಅಲ್ಲಿಗೆ ತೆರಳಿ ಪ್ರಯಾಸಪಟ್ಟು ಕೊರಕಲುಗಳ ಮಧ್ಯೆ ಸಿಲುಕಿದ್ದ ಶವವನ್ನು ಹರಸಾಹಸಪಟ್ಟು ಹೊರತಂದಿದ್ದಾರೆ.
ಮೃತದೇಹ ಹೊರಬರುತ್ತಿದ್ದಂತೆ ವೈದ್ಯೆಯ ಕುಟುಂಬಸ್ಥರ ರೋದನ ಮುಗಿಲು ಮುಟ್ಟಿತ್ತು. ಮಗಳು ನದಿಯಲ್ಲಿ ನಾಪತ್ತೆಯಾಗಿರುವ ವಿಚಾರ ತಿಳಿಯುತ್ತಿದ್ದಂತೆ, ಬುಧವಾರವೇ ಅನನ್ಯ ತಂದೆ, ತಾಯಿ ಹಾಗೂ ಕುಟುಂಬ ಸದಸ್ಯರು ಆಗಮಿಸಿದ್ದರು.
ಕುಟುಂಬಸ್ಥರ ಸಮ್ಮುಖದಲ್ಲಿಯೇ ಅನನ್ಯ ಮೃತದೇಹದ ಹುಡುಕಾಟ ನಡೆದಿತ್ತು. ಬಳಿಕ ನದಿಯ ದಡದಲ್ಲಿಯೇ ಶವದ ಮರಣೋತ್ತರ ಪರೀಕ್ಷೆ ಮುಗಿಸಿದ ವೈದ್ಯರು, ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿದರು. ಆ್ಯಂಬುಲೆನ್ಸ್ನಲ್ಲಿ ಅನನ್ಯ ಅವರ ಮೃತದೇಹವನ್ನು ಹೈದರಾಬಾದ್ಗೆ ಕೊಂಡೊಯ್ಯಲಾಯಿತು.
ಇದನ್ನೂ ಓದಿ: ತುಂಗಭದ್ರಾ ನದಿಯಲ್ಲಿ ಕೊಚ್ಚಿಹೋದ ತೆಲಂಗಾಣದ ವೈದ್ಯೆ; ಶವಕ್ಕಾಗಿ ಸತತ 10 ಗಂಟೆ ಕಾರ್ಯಾಚರಣೆ