ಹೈದರಾಬಾದ್: 16ನೇ ವಯಸ್ಸಿನಲ್ಲಿ 6 ಖಂಡಗಳ 20ಕ್ಕೂ ಹೆಚ್ಚು ಪರ್ವತಗಳನ್ನು ಹತ್ತುವ ಮೂಲಕ ಬಾಲಕನೊಬ್ಬ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದ್ದಾನೆ. ವಿಶ್ವನಾಥ್ ಕಾರ್ತಿಕೇಯ ಈ ದಾಖಲೆ ನಿರ್ಮಿಸಿದ ಬಾಲಕ.
ಹೈದರಾಬಾದ್‌ನ ಫಿರೋಜ್‌ಗುಡದ ಪಡಗಂಟಿ ರಾಜೇಂದರ್ ಪ್ರಸಾದ್ ಮತ್ತು ಲಕ್ಷ್ಮಿ ದಂಪತಿಯ ಪುತ್ರನಾಗಿರುವ ವಿಶ್ವನಾಥ್, ಕೇವಲ ನಾಲ್ಕು ವರ್ಷಗಳ ಅವಧಿಯಲ್ಲಿ ಪರ್ವತಾರೋಹಣದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಎರಡಲ್ಲೂ ಸ್ಥಾನ ಪಡೆಯುವ ಮೂಲಕ ದಾಖಲೆ ಬರೆದಿದ್ದಾನೆ.
ಬಾಲ್ಯದಿಂದಲೂ ಕಷ್ಟ ಎಂದರೆ ಏನು ಎಂದು ತಿಳಿಯದ ವಿಶ್ವನಾಥ್, ತನ್ನ ಸಹೋದರಿಯ ಪ್ರೇರಣೆಯಿಂದ ಈ ಸಾಧನೆ ಮಾಡಿರುವುದು ಗಮನಾರ್ಹ. ಸದ್ಯ ಮೌಂಟ್ ಎವರೆಸ್ಟ್ ಏರುವ ಗುರಿ ಹೊಂದಿದ್ದು, ವಿಶ್ವದ ಅತಿ ಎತ್ತರದ ಶಿಖರವನ್ನೇರಿದ ಅತ್ಯಂತ ಕಿರಿಯ ವ್ಯಕ್ತಿಗಳಲ್ಲಿ ಒಬ್ಬನಾಗಿ ತಮ್ಮ ಹೆಸರನ್ನು ದಾಖಲು ಮಾಡುವ ಗುರಿ ಹೊಂದಿದ್ದಾನೆ.
"2020ರಲ್ಲಿ ಈ ಪರ್ವತಾರೋಹಣ ಪ್ರಯಾಣ ಪ್ರಾರಂಭಿಸಿದ್ದು, ಈಗಾಗಲೇ 6 ಖಂಡಗಳ 20ಕ್ಕೂ ಹೆಚ್ಚು ಪರ್ವತಗಳನ್ನು ಹತ್ತಿರುವೆ. ಮೌಂಟ್ ಎವರೆಸ್ಟ್ ಪರ್ವತ ಏರುವುದು ನನ್ನ ಕನಸು. ಆ ಕನಸು ಈಡೇರಿದರೆ ಏಳು ಖಂಡಗಳಲ್ಲಿನ ಅತಿ ಎತ್ತರದ ಶಿಖರಗಳನ್ನು ಏರಿದ ಅತ್ಯಂತ ಕಿರಿಯ ಭಾರತೀಯ ಎಂಬ ಬಿರುದು ನನ್ನದಾಗಲಿದೆ" ಎನ್ನುತ್ತಾನೆ ವಿಶ್ವನಾಥ್.
6 ಖಂಡಗಳಲ್ಲಿ ಪರ್ವತಾರೋಹಣ: ಕಾರ್ತಿಕೇಯ ಈಗಾಗಲೇ ಉತ್ತರ ಅಮೆರಿಕದ ಡೆನಾಲಿ ಪರ್ವತ, ಯುರೋಪಿನ ಎಲ್ಬ್ರಸ್ ಪರ್ವತ, ಆಸ್ಟ್ರೇಲಿಯಾದ ಕೊಸ್ಸಿಯುಸ್ಕೊ ಪರ್ವತ, ದಕ್ಷಿಣ ಆಫ್ರಿಕಾದ ಕಿಲಿಮಂಜಾರೋ ಪರ್ವತ, ಅಂಟಾರ್ಕ್ಟಿಕಾದ ವಿನ್ಸನ್ ಮಾಸಿಫ್ ಪರ್ವತ, ಭಾರತದ ಕಾಂಗ್ ಯಾಟ್ಸೆ ಶಿಖರ (1 ಮತ್ತು 2) ಹಾಗೂ ಫ್ರೆಂಡ್‌ಶಿಪ್ ಪೀಕ್ ಪರ್ವತ, ನೇಪಾಳದ ಐಸ್‌ಲ್ಯಾಂಡ್ ಶಿಖರ ಸೇರಿದಂತೆ 6 ಖಂಡಗಳ 20ಕ್ಕೂ ಹೆಚ್ಚು ಅತಿ ಎತ್ತರದ ಪರ್ವತಗಳನ್ನು ಹತ್ತಿದ್ದಾನೆ. ಪರ್ವತಾರೋಹಣ ಪ್ರಯಾಣ ಆರಂಭವಾದ ಕೇವಲ ನಾಲ್ಕು ವರ್ಷಗಳಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ತನ್ನ ಹೆಸರನ್ನು ಬರೆದುಕೊಂಡಿರುವುದು ಗಮನಾರ್ಹ.
ಪರ್ವತಾರೋಹಣಕ್ಕೆ ಮಾತ್ರ ಸೀಮಿತವಾದ ಕಾರ್ತಿಕೇಯ ಒಬ್ಬ ವೇಟ್‌ಲಿಫ್ಟರ್ ಮತ್ತು ಉದಯೋನ್ಮುಖ ಪ್ರೇರಕ ಭಾಷಣಕಾರ ಕೂಡ ಹೌದು. ಶಾಲೆ ಮತ್ತು ಕಾಲೇಜುಗಳಲ್ಲಿ ಒತ್ತಡ ನಿರ್ವಹಣೆ, ಆತ್ಮವಿಶ್ವಾಸ ಮತ್ತು ಮಾನಸಿಕ ಸ್ಥಿರತೆಯ ಕುರಿತು ತರಗತಿಗಳನ್ನು ನೀಡುವುದು ಕಾರ್ತಿಕೇಯನ ಮತ್ತೊಂದು ಹವ್ಯಾಸವಾಗಿದೆ.
"ಆಗಸ್ಟ್ 15, 2022ರಂದು ಯುರೋಪಿನ ಮೌಂಟ್ ಎಲ್ಬ್ರಸ್‌ನಲ್ಲಿ ತ್ರಿವರ್ಣ ಧ್ವಜ ಹಾರಿಸಿದಾಗ ತನಗೆ ತುಂಬಾ ಸಂತೋಷವಾಯಿತು. ಕೇವಲ 24 ಗಂಟೆಗಳಲ್ಲಿ ಪೂರ್ವ ಮತ್ತು ಪಶ್ಚಿಮ ಎರಡೂ ಕಡೆಯಿಂದ ಪರ್ವತವನ್ನು ಹತ್ತುವ ಮೂಲಕ ದಾಖಲೆ ಬರೆದೆ. ಎತ್ತರದ ಪರ್ವತ ಪ್ರದೇಶಗಳಲ್ಲಿ ಗಾಳಿಯ ಕೊರತೆಯಿಂದ ಉಸಿರಾಡಲು ತುಂಬಾ ಕಷ್ಟ. ಇಂತಹ ಹಲವು ಸವಾಲುಗಳನ್ನು ಮೆಟ್ಟಿನಿಂತು ಏರಿದೆ. ಇದಕ್ಕೆ ಕುಟುಂಬ ಸದಸ್ಯರ ಪ್ರೋತ್ಸಾಹವೇ ಕಾರಣ. ಪರ್ವತಾರೋಹಣ ಮಾಡುವಂತೆ ಅವರು ಯಾವಾಗಲೂ ನನ್ನನ್ನು ಹುರುದುಂಬಿಸುತ್ತಿರುತ್ತಾರೆ. ಪರ್ವತಗಳು ನನಗೆ ಶಿಸ್ತು, ತಾಳ್ಮೆ ಮತ್ತು ದೃಢಸಂಕಲ್ಪದ ಶಕ್ತಿಯನ್ನು ಕಲಿಸಿವೆ. ನಾನು ಈ ಪಾಠಗಳನ್ನು ಮುಂದಕ್ಕೆ ಕೊಂಡೊಯ್ಯಲು ಮತ್ತು ನನ್ನ ದೇಶಕ್ಕೆ ಸೇವೆ ಸಲ್ಲಿಸಲು ಬಯಸುತ್ತೇನೆ. ಎವರೆಸ್ಟ್ ಹತ್ತುವುದು ನನ್ನ ಕನಸು. ನನ್ನ ದೇಶ ಹೆಮ್ಮೆಪಡುವಂತೆ ನಾನು ಮಾಡಲು ಬಯಸುತ್ತೇನೆ". - ಕಾರ್ತಿಕೇಯ, ಪರ್ವತಾರೋಹಿ