ಹೈದರಾಬಾದ್: ರಾಜ್ಯದಲ್ಲಿ ನಿರ್ಮಾಣವಾಗುತ್ತಿರುವ ಯುವ ಭಾರತ ಕೌಶಲ್ಯ ವಿಶ್ವವಿದ್ಯಾಲಯಕ್ಕಾಗಿ ಅದಾನಿ ಸಂಸ್ಥೆಯಿಂದ 100 ಕೋಟಿ ದೇಣಿಗೆಯನ್ನು ರಾಜ್ಯ ಸರ್ಕಾರ ಸ್ವೀಕಾರ ಮಾಡುವುದಿಲ್ಲ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಕೌಶಲ್ಯ ವಿವಿಗೆ ಅದಾನಿ ದೇಣಿಗೆ ನೀಡುವುದಾಗಿ ಘೋಷಿಸಿದಾಗಿನಿಂದಲೂ ಸಿಎಂ ವಿರುದ್ಧ ಅನಗತ್ಯ ಚರ್ಚೆಗಳು ಕೇಳಿ ಬರುತ್ತಿದ್ದು, ಈ ಬಗ್ಗೆ ಪತ್ರಿಕಾ ಗೋಷ್ಠಿ ನಡೆಸಿರುವ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.
ತೆಲಂಗಾಣ ಸರ್ಕಾರ ಅದಾನಿ ಸಂಸ್ಥೆ ಸೇರಿದಂತೆ ಯಾವುದೇ ಸಂಸ್ಥೆಯಿಂದ ಒಂದು ಪೈಸೆಯನ್ನು ಇದುವರೆಗೂ ಸ್ವೀಕಾರ ಮಾಡಿಲ್ಲ ಎಂದು ಹೇಳಿದ್ದಾರೆ.
ನಾನು ಮತ್ತು ನನ್ನ ಸಚಿವ ಸಂಪುಟ ಸದಸ್ಯರು ಅನಗತ್ಯ ಚರ್ಚೆಗೆ ಒಳಗಾಗಿದ್ದು, ಇಂತಹ ಪರಿಸ್ಥಿತಿಯಿಂದಾಗಿ ರಾಜ್ಯ ಸರ್ಕಾರ ಅಥವಾ ನನ್ನ ಇಮೇಜ್ ಹಾನಿಯಾಗುತ್ತಿದೆ. ಇದೇ ಕಾರಣದಿಂದ ರಾಜ್ಯ ಸರ್ಕಾರದ ಪರವಾಗಿ ನಮ್ಮ ಅಧಿಕಾರಿ ಜಯೇಶ್ ರಂಜನ್ ಅದಾನಿ ಅವರಿಗೆ ಪತ್ರ ಬರೆದಿದ್ದಾರೆ.
ಸದ್ಯದ ಪರಿಸ್ಥಿತಿ ಮತ್ತು ವಿವಾದಗಳಿಂದಾಗಿ ತೆಲಂಗಾಣ ಸರ್ಕಾರವೂ ಅದಾನಿ ಅವರ 100 ಕೋಟಿ ರೂ ದೇಣಿಗೆಯನ್ನು ನಾವು ಸ್ವೀಕರಿಸುವುದಿಲ್ಲ. ಈ ಸಂಬಂಧ ಸ್ಪಷ್ಟವಾಗಿ ಅದಾನಿ ಫೌಂಡೆಶನ್ ಅವರಿಗೆ ಪತ್ರ ಬರೆದಿದ್ದು, ವಿಶ್ವವಿದ್ಯಾಲಯಕ್ಕೆ 100 ರೂ ಕೋಟಿ ವರ್ಗಾವಣೆ ಮಾಡದಂತೆ ಮನವಿ ಮಾಡಿದ್ದೇವೆ ಎಂದರು.
ಈ ಮೊದಲು ಅದಾನಿ 100 ಕೋಟಿ ರೂ. ದೇಣಿಗೆ ನೀಡುವುದಾಗಿ ಘೋಷಣೆ ಮಾಡಿದ್ದರು. ಹೀಗಾಗಿ ಈ ಬಗ್ಗೆ ಸಾಕಷ್ಟು ಚರ್ಚೆಗಳು -ಪರ ವಿರೋಧಗಳು ಕೇಳಿ ಬಂದಿದ್ದವು. ಈ ಎಲ್ಲ ಚರ್ಚೆಗಳಿಗೆ ಸುದ್ದಿಗೋಷ್ಠಿ ಮೂಲಕ ರೇವಂತ್ ರೆಡ್ಡಿ ಉತ್ತರಕೊಡುವ ಪ್ರಯತ್ನ ಮಾಡಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಪರಿಸ್ಥಿತಿ ಹಾಳಾಗಲು ರಾಜ್ಯ ಸರ್ಕಾರವೇ ಕಾರಣ: ಪ್ರಿಯಾಂಕಾ ಗಾಂಧಿ ಆರೋಪ