ಬೆಂಗಳೂರು: ಬಾಡಿಗೆಗೆ ಕಾರು ಪಡೆದಿದ್ದ ಯುವಕರ ಮೇಲೆ ಹಲ್ಲೆ ಮಾಡಿ ಸುಲಿಗೆ ಮಾಡಿದ್ದ ಮೂವರು ಆರೋಪಿಗಳನ್ನು ಚಂದ್ರಾಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಿತಿನ್, ಶಶಾಂಕ್ ಹಾಗೂ ವಿನೋದ್ ಬಂಧಿತ ಆರೋಪಿಗಳು.
ಕಳೆದ ವಾರ ಮಡಿಕೇರಿ ಪ್ರವಾಸಕ್ಕೆ ಹೋಗಲು ಐವರು ಯುವಕರು ಆರೋಪಿ ವಿನೋದ್‌ನಿಂದ ಕಾರು ಬಾಡಿಗೆಗೆ ಪಡೆದಿದ್ದರು. ಕಾರನ್ನು ಮರಳಿಸಲು ಬಂದಾಗ ಇಬ್ಬರು ಯುವಕರನ್ನು ನಾಗರಭಾವಿಯಲ್ಲಿರುವ ತನ್ನ ಕಚೇರಿಗೆ ಕರೆದೊಯ್ದಿದ್ದ ವಿನೋದ್, 'ನೀವು ಗಂಟೆಗೆ 100 ಕಿ.ಮೀ ವೇಗದ ಮಿತಿಯನ್ನು 120 ಬಾರಿ ಉಲ್ಲಂಘಿಸಿದ್ದೀರಿ. ಇದಕ್ಕಾಗಿ 1.20 ಲಕ್ಷ ರೂ. ದಂಡದ ಹಣ ಪಾವತಿಸಬೇಕು' ಎಂದಿದ್ದ. ತಾವು ನಿಯಮ ಉಲ್ಲಂಘಿಸಿರುವ ಚಲನ್ ತೋರಿಸಿ ಎಂದಾಗ ಮೂವರು ಆರೋಪಿಗಳು ಸೇರಿ ಚಾಕು ತೋರಿಸಿ ಬೆದರಿಸಿ, ಹಲ್ಲೆ ಮಾಡಿದ್ದಾರೆ ಎಂದು ದೂರಲಾಗಿದೆ.
ಅಲ್ಲದೇ, ಯುವಕರನ್ನು ಸಮೀಪದ ಮೊಬೈಲ್ ಅಂಗಡಿಯೊಂದಕ್ಕೆ ಕರೆದೊಯ್ದು ಆರೋಪಿಗಳು ಅಲ್ಲಿದ್ದ ಕ್ಯೂಆರ್ ಕೋಡ್‌ಗೆ ಒಟ್ಟು 50 ಸಾವಿರ ರೂ. ಹಣ ಪಾವತಿಸಿಕೊಂಡಿದ್ದಾರೆ. ಬಳಿಕ ಅವರ ಲ್ಯಾಪ್‌ಟಾಪ್‌ಗಳನ್ನು ಕಿತ್ತುಕೊಂಡು ಮಧ್ಯರಾತ್ರಿ ಯುವಕರನ್ನು ಅವರವರ ಮನೆಗೆ ಡ್ರಾಪ್ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆ ಬಗ್ಗೆ ಚಂದ್ರಾಲೇಔಟ್ ಠಾಣೆಗೆ ಯುವಕರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸದ್ಯ ಮೂವರು ಆರೋಪಿಗಳನ್ನು ಬಂಧಿಸಿದ್ದು ಹೆಚ್ಚಿನ ವಿಚಾರಣೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಡಿಸಿಪಿ ಎಸ್.ಗಿರೀಶ್ ಪ್ರತಿಕ್ರಿಯೆ: "ಪಶ್ಚಿಮ ಬಂಗಾಳ ಮೂಲದ ಬೆಂಗಳೂರಿನಲ್ಲಿ ನೆಲೆಸಿರುವ ವಿದ್ಯಾರ್ಥಿಗಳು ಪ್ರವಾಸಕ್ಕೆಂದು ಕಾರನ್ನ ಬಾಡಿಗೆಗೆ ಪಡೆದಿದ್ದರು. ವಾಪಸ್ ಬಂದ ಬಳಿಕ ಆರೋಪಿಗಳು, ನೀವು ಸಂಚಾರಿ ದಂಡ ಉಲ್ಲಂಘಿಸಿದ್ದೀರಿ, 1.20 ಲಕ್ಷ ರೂ. ದಂಡ ಪಾವತಿಸಬೇಕು ಎಂದು 60 ಸಾವಿರ ರೂ. ವಸೂಲಿ ಮಾಡಿದ್ದಾರೆ. ಉಳಿದ 60 ಸಾವಿರ ರೂ. ಕೊಡುವಂತೆ ಒತ್ತಡ ಹಾಕಿದಾಗ ವಿದ್ಯಾರ್ಥಿಗಳು ಬಂದು ಚಂದ್ರಾಲೇಔಟ್ ಠಾಣೆಗೆ ದೂರು ನೀಡಿದ್ದರು. ಅದರ ಅನ್ವಯ ಆರೋಪಿಗಳನ್ನ ಬಂಧಿಸಲಾಗಿದೆ. ದೂರುದಾರ ವಿದ್ಯಾರ್ಥಿಗಳು ಯಾವುದೇ ಸಂಚಾರಿ ನಿಯಮ ಉಲ್ಲಂಘಿಸಿಲ್ಲದಿದ್ದರೂ, ಸಹ ಸುಳ್ಳು ಹೇಳಿ ಹಣ ಸುಲಿಗೆ ಮಾಡಿರುವುದು ಕಂಡು ಬಂದಿದೆ. ಆರೋಪಿಗಳನ್ನು ಹೆಚ್ಚಿನ ತನಿಖೆಗೆ ಒಳಪಡಿಸಲಾಗುತ್ತಿದೆ" ಎಂದು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮೋದಿ ಸ್ಕೀಮ್ನಿಂದ ₹1 ಲಕ್ಷ ಕೊಡಿಸುವುದಾಗಿ ಹೇಳಿ ಮಹಿಳೆಗೆ ಚಿನ್ನದ ಬಳೆ ವಂಚನೆ ಆರೋಪ