ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿ (ಎಂವಿಎ)ಯ ಹೀನಾಯ ಸೋಲಿನ ನಂತರ, ಕಾಂಗ್ರೆಸ್ ಪಕ್ಷದೊಳಗಿನ ಬಿರುಕು ಹೆಚ್ಛಾಗಲಾರಂಭಿಸಿದೆ. ಸೋಲಿನ ಹೊಣೆ ಹೊತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಮತ್ತು ಮುಂಬೈ ಅಧ್ಯಕ್ಷೆ ವರ್ಷಾ ಗಾಯಕ್ ವಾಡ್ ರಾಜೀನಾಮೆ ನೀಡಬೇಕು ಎಂದು ಪಕ್ಷದೊಳಗಡೆ ಒತ್ತಾಯ ಹೆಚ್ಚಾಗುತ್ತಿದೆ.
ಸೋಲಿನ ಬಗ್ಗೆ ಕಾಂಗ್ರೆಸ್ ನಾಯಕತ್ವವು ಪರಾಮರ್ಶೆ ನಡೆಸಿದ ನಂತರ ಪಕ್ಷದ ರಾಜ್ಯಾಧ್ಯಕ್ಷರು ಮತ್ತು ಕಾಂಗ್ರೆಸ್ ಉಸ್ತುವಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ಸಾಧ್ಯತೆಯಿದೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ರಾಜೀನಾಮೆ ನೀಡಿದ್ದಾರೆ ಎಂಬ ಊಹಾಪೋಹಗಳು ಸೋಮವಾರ ಬೆಳಗ್ಗೆಯಿಂದ ಕೇಳಿ ಬರುತ್ತಿದ್ದರೂ ರಾಜ್ಯ ಕಾಂಗ್ರೆಸ್ ಅದನ್ನು ನಿರಾಕರಿಸಿದೆ. ಪಟೋಲೆ ಅವರನ್ನು ದೆಹಲಿಗೆ ಕರೆಸಿಕೊಳ್ಳಲಾಗಿದ್ದು, ಅವರ ವಾದ ಆಲಿಸಿದ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.
ಮಹಾ ಕಾಂಗ್ರೆಸ್ನಲ್ಲಿ ಬಿರುಕು?: ಈ ಸೋಲಿನ ನಂತರ ಕಾಂಗ್ರೆಸ್ ಪಕ್ಷದಲ್ಲಿ ಬಿರುಕು ಉಂಟಾಗುವ ಎಲ್ಲ ಸಾಧ್ಯತೆಗಳಿವೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಕೇವಲ 16 ವಿಧಾನ ಸಭಾ ಸ್ಥಾನಗಳಲ್ಲಿ ಜಯಗಳಿಸಲು ಸಾಧ್ಯವಾಗಿದೆ. ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳೆಂದು ಪರಿಗಣಿಸಲ್ಪಟ್ಟಿದ್ದ ಹಿರಿಯ ಕಾಂಗ್ರೆಸ್ ಮುಖಂಡ ಬಾಳಾಸಾಹೇಬ್ ಥೋರಟ್ ಮತ್ತು ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಸೋತಿದ್ದಾರೆ.
ಕೇವಲ 208 ಮತಗಳಿಂದ ಗೆಲುವು: ಒಂದೊಮ್ಮೆ ಮಹಾ ವಿಕಾಸ್ ಅಘಾಡಿ (ಎಂವಿಎ) ಅಧಿಕಾರಕ್ಕೆ ಬಂದರೆ ನಾನೇ ಮುಖ್ಯಮಂತ್ರಿ ಎನ್ನುತ್ತಿದ್ದ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಕೇವಲ 208 ಮತಗಳ ಅಂತರದಿಂದ ಗೆದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಲಿಗೆ ಹೊಣೆ ಯಾರೆಂಬುದನ್ನು ಪಕ್ಷ ನಿರ್ಧರಿಸಬೇಕು ಮತ್ತು ಅದಕ್ಕೆ ಕಾರಣರಾದ ನಾಯಕರು ರಾಜೀನಾಮೆ ನೀಡಬೇಕು ಎಂಬ ಬೇಡಿಕೆ ಪಕ್ಷದೊಳಗಡೆ ಕೇಳಿ ಬರುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಈ ಅನಿರೀಕ್ಷಿತ ಮತ್ತು ಅವಮಾನಕರ ಸೋಲಿನ ನಂತರ, ಕಾಂಗ್ರೆಸ್ ನಾಯಕತ್ವವು ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಯೋಚಿಸಬೇಕೆಂದು ಒತ್ತಾಯಿಸಲಾಗುತ್ತಿದೆ.
ಸೀಟು ಹಂಚಿಕೆ ವಿಚಾರ ಚರ್ಚೆ ನಡೆಸದ ಬಗ್ಗೆ ಆಕ್ಷೇಪ: "ಪಕ್ಷದ ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಪ್ರಚಾರದಲ್ಲಿ ಹಿರಿಯ ನಾಯಕರನ್ನು ಸಮರ್ಪಕವಾಗಿ ಸೇರಿಸಲಾಗಿಲ್ಲ ಎಂದು ಮುಂಬೈ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮತ್ತು ಶಾಸಕ ಭಾಯ್ ಜಗತಾಪ್ ವಿಷಾದಿಸಿದ್ದಾರೆ. ಕಾಂಗ್ರೆಸ್ಸಿನ ಸಾಂಪ್ರದಾಯಿಕ ಭದ್ರಕೋಟೆಗಳೆಂದು ಪರಿಗಣಿಸಲ್ಪಟ್ಟ ವರ್ಸೊವಾ ಮತ್ತು ಬೈಕುಲ್ಲಾ ಕ್ಷೇತ್ರಗಳನ್ನು ತನ್ನ ಬಳಿಯೇ ಇಟ್ಟುಕೊಳ್ಳದೆ ಮಿತ್ರಪಕ್ಷಗಳಿಗೆ ಬಿಟ್ಟ ಕೊಡಲಾಯಿತು. ಮುಂಬೈನಲ್ಲಿ ಪಕ್ಷವು ಅತ್ಯಲ್ಪ ಸಂಖ್ಯೆಯ ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತು. ಲೋಕಸಭೆಯಲ್ಲಿ ಪಕ್ಷದ ಯಶಸ್ಸಿನ ನಂತರ ಸ್ಥಳೀಯ ನಾಯಕರು ತಮಗೆ ಬೇಕಾದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರು." ಎಂದು ಜಗತಾಪ್ ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಉತ್ತಮ ಪ್ರದರ್ಶನ ಮತ್ತು ರಾಜ್ಯದಲ್ಲಿ ಪಕ್ಷ ಮೊದಲ ಸ್ಥಾನ ಪಡೆದಿದ್ದಕ್ಕೆ ತಾವೇ ಕಾರಣರು ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷರು ಮತ್ತು ಮುಂಬೈ ಅಧ್ಯಕ್ಷರು ಮನ್ನಣೆ ಪಡೆದುಕೊಂಡಿದ್ದರು. ಹಾಗಿರುವಾಗ ಈಗ ರಾಜ್ಯ ಮತ್ತು ಮುಂಬೈನಲ್ಲಿ ಕಾಂಗ್ರೆಸ್ ಪಕ್ಷದ ಸೋಲಿನ ಜವಾಬ್ದಾರಿಯನ್ನು ಹೊತ್ತು ಮುಂಬೈ ಅಧ್ಯಕ್ಷ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲಿ ಎಂದು ಶಾಸಕ ಭಾಯ್ ಜಗತಾಪ್ ಒತ್ತಾಯಿಸಿದ್ದಾರೆ.
ಮಹಾ ವಿಕಾಸ್ ಅಘಾಡಿ (ಎಂವಿಎ)ಯ ಸ್ಥಾನ ಹಂಚಿಕೆ ಮತ್ತು ಮುಖ್ಯಮಂತ್ರಿ ಯಾರಾಗಬೇಕೆಂಬ ವಿಷಯದಲ್ಲಿನ ಗೊಂದಲಗಳು ಕಾಂಗ್ರೆಸ್ ಮೇಲೆ ಪರಿಣಾಮ ಬೀರಿರಬಹುದು ಎಂದು ಅವರು ಊಹಿಸಿದ್ದಾರೆ. ಪ್ರಮುಖ ಕಾಂಗ್ರೆಸ್ ನಾಯಕರಾದ ಚಂದ್ರಕಾಂತ್ ಹಂಡೋರ್, ಸುರೇಶ್ ಶೆಟ್ಟಿ, ಭಾಯ್ ಜಗತಾಪ್ ಮತ್ತು ಇತರ ಪ್ರಮುಖ ನಾಯಕರನ್ನು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಿಂದ ಹೊರಗಿಟ್ಟಿದ್ದರಿಂದ ಪಕ್ಷಕ್ಕೆ ಹಿನ್ನಡೆಯಾಗಿದೆ ಎಂದು ಜಗತಾಪ್ ಆರೋಪಿಸಿದ್ದಾರೆ. ಗಾಯಕವಾಡ್ ಅವರು ತಮಗೆ ಬೇಕಾದ ಅಭ್ಯರ್ಥಿಗಳಿಗಾಗಿ ಮಾತ್ರ ಪ್ರಯತ್ನಿಸಿದ್ದಾರೆ ಮತ್ತು ಇತರ ಅಭ್ಯರ್ಥಿಗಳನ್ನು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮುಂಬೈ ಅಧ್ಯಕ್ಷರಾಗಿ ಗಾಯಕವಾಡ್ ಅವರ ಉಪಸ್ಥಿತಿಯು ಪ್ರಚಾರದ ಉದ್ದಕ್ಕೂ ಸಾಕಷ್ಟು ಗೋಚರಿಸಲಿಲ್ಲ ಎಂದು ಜಗತಾಪ್ ಹೇಳಿದರು.
ಕಾಂಗ್ರೆಸ್ ನ ಮುಂದಿನ ನಡೆ ಏನು?: ಕಾಂಗ್ರೆಸ್ ಸೋಲಿನ ನಂತರ ಈಗ ಪಕ್ಷದಲ್ಲಿ ಒಡಕಿನ ಧ್ವನಿ ಕೇಳಿ ಬರುತ್ತಿದ್ದು, ಈ ನಿಟ್ಟಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ಏನು ಮಾಡಲಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಕಾಯುತ್ತಿದ್ದಾರೆ. ಫಲಿತಾಂಶದ ವರದಿಯನ್ನು ಪಕ್ಷದ ಹೈಕಮಾಂಡ್ಗೆ ಕಳುಹಿಸಲಾಗುವುದು ಮತ್ತು ಅವರೊಂದಿಗೆ ಚರ್ಚಿಸಲಾಗುವುದು ಎಂದು ಅವರು ಹೇಳಿದರು. ಸೋಲಿನ ಜವಾಬ್ದಾರಿಯನ್ನು ಶೀಘ್ರದಲ್ಲೇ ಕಾಂಗ್ರೆಸ್ ನಲ್ಲಿ ನಿಗದಿಪಡಿಸಲಾಗುವುದು ಮತ್ತು ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ : ಸಂವಿಧಾನದ ಪೀಠಿಕೆಯಲ್ಲಿ 'ಸಮಾಜವಾದಿ', 'ಜಾತ್ಯತೀತ' ಪದ ಸೇರ್ಪಡೆ ಸಿಂಧುತ್ವ ಪ್ರಶ್ನಿಸಿದ್ದ ಅರ್ಜಿ ವಜಾ