ಆಗ್ರಾ(ಉತ್ತರ ಪ್ರದೇಶ): ತರಬೇತಿಯ ಸಮಯದಲ್ಲಿ ಪ್ಯಾರಾಚ್ಯೂಟ್ ತೆರೆದುಕೊಳ್ಳದ ಕಾರಣ ಮೇಲಿಂದ ಬಿದ್ದು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ವಾಯುಸೇನಾ ಯೋಧರೊಬ್ಬರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿರುವ ಪ್ಯಾರ್ಯಾಟ್ರೂಪರ್ ತರಬೇತಿ ಶಾಲೆಯಲ್ಲಿ ಇಂದು ನಡೆದಿದೆ.
ಘಟನೆಯಲ್ಲಿ ಮೃತಪಟ್ಟವರನ್ನು ಮಂಜುನಾಥ್ ಎಂದು ಗುರುತಿಸಲಾಗಿದೆ. ಇವರು ವಾಯುಸೇನೆಯಲ್ಲಿ ಜ್ಯೂನಿಯರ್ ವಾರೆಂಟ್ ಆಫೀಸರ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ಘಟನೆಯ ಬಗ್ಗೆ ಮಾಹಿತಿ ತಿಳಿದ ತಕ್ಷಣ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿತು. ಅವಘಡದ ಬಗ್ಗೆ ಪೊಲೀಸರು ಖಚಿತಪಡಿಸಿದ್ದು, ಮೃತರ ಕುಟುಂಬಸ್ಥರಿಗೆ ಮಾಹಿತಿ ರವಾನಿಸಿದ್ದಾರೆ.
![Soldier's parachute not open during parajumping in Agra; painful death falling on ground](https://etvbharatimages.akamaized.net/etvbharat/prod-images/08-02-2025/23497675_thumbnadddd.jpg)
ಆಗ್ರಾದ ಮಾಲ್ಪುರಾ ಪ್ರದೇಶದಲ್ಲಿರುವ ಪ್ಯಾರಾ ಜಂಪಿಂಗ್ ವಲಯದಲ್ಲಿ 12 ಜನ ಸಿಬ್ಬಂದಿ ವಿಮಾನದಿಂದ ಪ್ಯಾರಾಚ್ಯೂಟ್ ಜೊತೆ ಜಿಗಿದಿದ್ದರು. ನಂತರ 11 ಜನ ಸೈನಿಕರು ಹಿಂತಿರುಗಿದ್ದರು. ಆದರೆ ಒಬ್ಬ ಮಂಜುನಾಥ್ ವಾಪಸ್ ಬಂದಿರಲಿಲ್ಲ. ಬಳಿಕ ಶೋಧ ಕಾರ್ಯ ನಡೆಸಿದಾಗ, ಸುತೇಂಡಿ ಗ್ರಾಮದ ಬಳಿಯ ಹೊಲದಲ್ಲಿ ಕೆಳಗೆ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣ ಆಂಬ್ಯುಲೆನ್ಸ್ ಮೂಲಕ ವಾಯುಪಡೆಯ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ವೈದ್ಯರು ಪರಿಶೀಲನೆ ನಡೆಸಿ, ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ವಿಮಾನದಿಂದ ಹಾರಿದ ಬಳಿಕ ಪ್ಯಾರಾಚೂಟ್ ತೆರೆಯಲು ವಿಫಲವಾಗಿದ್ದರಿಂದ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
![Soldier's parachute not open during parajumping in Agra; painful death falling on ground](https://etvbharatimages.akamaized.net/etvbharat/prod-images/08-02-2025/23497675_thum.jpg)
ಈ ಕುರಿತು ಠಾಣೆಯ ಉಸ್ತುವಾರಿ ಇನ್ಸ್‌ಪೆಕ್ಟರ್ ಪ್ರಮೋದ್ ಶರ್ಮಾ ದೃಢಪಡಿಸಿದ್ದಾರೆ. ಘಟನೆಯ ಬಗ್ಗೆ ಮೃತರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದೆ. ಈ ವಿಷಯದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.
ಇದನ್ನೂ ಓದಿ: ಪ್ರಯಾಗ್ರಾಜ್ನಿಂದ ಹಿಂತಿರುಗುತ್ತಿದ್ದ ಬೆಳಗಾವಿಯ ನಾಲ್ವರ ಸಾವು: ಮೃತದೇಹ ಸ್ಥಳಾಂತರಿಸಲು ಒತ್ತಾಯ