ಬೆಂಗಳೂರು: ಕೋಟ್ಯಂತರ ರೂ.ಗಳ ಐಎಂಎ ಹಗರಣದ ಸಂಬಂಧ ಸಬ್‌ಇನ್ಸ್‌ಪೆಕ್ಟರ್ ಗೌರಿಶಂಕರ್ ಅವರನ್ನು ಕ್ರಿಮಿನಲ್ ಪ್ರಕರಣದಿಂದ ಆರೋಪ ಮುಕ್ತಗೊಳಿಸಿ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶ ಹೈಕೋರ್ಟ್ ಇಂದು ಎತ್ತಿ ಹಿಡಿದಿದೆ.
ವಿಚಾರಣಾ ನ್ಯಾಯಾಲಯ ಎಸ್‌ಐ ಗೌರಿಶಂಕರ್ ಅವರನ್ನು ದೋಷಮುಕ್ತಗೊಳಿಸಿ 2024ರ ಜು.15ರಂದು ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕ ಸದಸ್ಯಪೀಠ ಈ ಆದೇಶ ನೀಡಿದೆ.
ಅಲ್ಲದೆ, ಘಟನೆ ನಡೆದಾಗ ಆರೋಪಿ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಎಸ್‌ಐ ಆಗಿದ್ದರು. ಅವರನ್ನು ಆರೋಪಮುಕ್ತಗೊಳಿಸಿ ವಿಚಾರಣಾ ನ್ಯಾಯಾಲಯ ಹೊರಡಿಸಿರುವ ಆದೇಶ ಸಮಂಜಸವಾಗಿದೆ ಮತ್ತು ಅದು ಸುಪ್ರೀಂಕೋರ್ಟ್ ನೀಡಿರುವ ಆದೇಶಗಳಿಗೆ ಅನುಸಾರವಾಗಿಯೇ ಇದೆ. ಹಾಗಾಗಿ ಆ ಆದೇಶದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಆದೇಶಿಸಿದೆ.
ಜತೆಗೆ, ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಹೈಕೋರ್ಟ್, ಗೌರಿಶಂಕರ್ ವಿರುದ್ಧದ ಎಲ್ಲಾ ಆರೋಪಗಳನ್ನು ಪರಿಶೀಲಿಸಿದರೆ, ಡೈರಿಯಲ್ಲಿ ಗೌರಿ-ವಸೀಂ ಭಾಯ್ ಎನ್ನುವ ಪದ ಎಕ್ಸೆಲ್‌ಶೀಟ್‌ನಲ್ಲಿ ನಮೂದಾಗಿರುವುದು ಬಿಟ್ಟರೆ ಬೇರೆ ಯಾವುದೇ ಸಾಕ್ಷ್ಯಗಳು ಎಸ್‌ಐ ವಿರುದ್ಧ ಇಲ್ಲ. ಹಾಗಾಗಿ ಅವರ ವಿರುದ್ಧದ ಪ್ರಕರಣ ರದ್ದುಗೊಳಿಸಲಾಗುತ್ತಿದೆ ಎಂದು ಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ: ಕೋಟ್ಯಾಂತರ ರೂಪಾಯಿ ಹಣ ದುರ್ಬಳಕೆಯ ಐಎಂಎ ಹಗರಣದಲ್ಲಿ ಗೌರಿಶಂಕರ್ ಅವರನ್ನು ಸಿಬಿಐ 28ನೇ ಆರೋಪಿಯನ್ನಾಗಿ ಮಾಡಿ ಅವರ ವಿರುದ್ಧ ಪೂರಕ ಆರೋಪ ಪಟ್ಟಿಯನ್ನು ಸಲ್ಲಿಸಿತ್ತು. ಅದರಲ್ಲಿ ಗೌರಿಶಂಕರ್, ಐಎಂಎ ಸಂಸ್ಥಾಪಕ ಮೊಹಮ್ಮದ್ ಮನ್ಸೂರ್ ಖಾನ್ ಅವರಿಂದ ಹಲವು ಸಂದರ್ಭಗಳಲ್ಲಿ ಅಕ್ರಮವಾಗಿ ಹಣ ಪಡೆದಿದ್ದಾರೆಂದು ಆರೋಪಿಸಲಾಗಿತ್ತು. ಜತೆಗೆ ಐಎಂಎ ಕಂಪನಿ ವಿರುದ್ಧ ದಾಖಲಾಗಿರುವ ದೂರುಗಳ ಕುರಿತು ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ ಎಂದು ವಸೀಂ ಎಂಬವರಿಂದ ಹಣ ಪಡೆದಿದ್ದಾರೆಂದು ಹೇಳಲಾಗಿತ್ತು.
ಆ ಕ್ರಿಮಿನಲ್ ಪ್ರಕರಣದ ವಿಚಾರಣೆ ನಡೆಸಿದ್ದ ವಿಚಾರಣಾ ನ್ಯಾಯಾಲಯ, ಗೌರಿಶಂಕರ್ ವಿರುದ್ಧ ಮೇಲ್ನೋಟಕ್ಕೆ ಯಾವುದೇ ಸಾಕ್ಷ್ಯ ಲಭ್ಯವಾಗಿಲ್ಲ. ಅಲ್ಲದೆ ಎಸ್‌ಐ ನಿವಾಸದ ಮೇಲೆ ನಡೆಸಿದ ಶೋಧ ಕಾರ್ಯದಲ್ಲೂ ಸಹ ಯಾವುದೇ ಮಾಹಿತಿ ದೊರೆತಿಲ್ಲ. ಹಾಗಾಗಿ ಎಸ್‌ಐ ಗೌರಿಶಂಕರ್ ಅವರನ್ನು ಆರೋಪಮುಕ್ತಗೊಳಿಸಲಾಗುವುದು ಎಂದು ಆದೇಶ ನೀಡಿತ್ತು. ಅದನ್ನು ಪ್ರಶ್ನಿಸಿ ಸಿಬಿಐ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.
ಇದನ್ನೂ ಓದಿ: ಮುಡಾ ಪ್ರಕರಣ: ಸಿದ್ದರಾಮಯ್ಯ ವಿರುದ್ಧ ಸಿಬಿಐ ತನಿಖೆಗೆ ಕೋರಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್