ಮೈಸೂರು : ನಾವು ಜೆಡಿಎಸ್ ಬಿಡುವುದಿಲ್ಲ, ಜೆಡಿಎಸ್ ನಮ್ಮದು. ರಾಜ್ಯಕ್ಕೆ 3ನೇ ಶಕ್ತಿ ಬೇಕಾಗಿದೆ. ಹಾಗಾಗಿ ಜಿ. ಟಿ ದೇವೇಗೌಡರ ಜತೆ ಮಾತನಾಡಿ ನಮ್ಮ ಸಂಪರ್ಕದಲ್ಲಿರುವ ಶಾಸಕರ ತೀರ್ಮಾನದಂತೆ ಚರ್ಚಿಸಿ ಮುಂದುವರೆಯುತ್ತೇನೆ ಎಂದು ಮಾಜಿ ಸಚಿವ ಸಿ. ಎಂ ಇಬ್ರಾಹಿಂ ಹೇಳಿದ್ದಾರೆ.
ಜೆಡಿಎಸ್ ಶಾಸಕ ಜಿ. ಟಿ ದೇವೇಗೌಡ ಅವರಿಗೆ ಹುಟ್ಟುಹಬ್ಬದ ಶುಭಾಶಯ ಹೇಳಲು ಮೈಸೂರಿಗೆ ಆಗಮಿಸಿ, ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ರಾಜ್ಯದಲ್ಲಿ ಹಾಗೂ ಮೈಸೂರು ಜಿಲ್ಲೆಯಲ್ಲಿ ಶಾಸಕ ಜಿ. ಟಿ ದೇವೇಗೌಡರಿಗೆ ಅವರದ್ದೇ ಆದ ಶಕ್ತಿಯಿದೆ. ಅವರ ಜತೆ ಫೋನ್ನಲ್ಲಿ ಮಾತನಾಡಿದ್ದೆ. ಈಗ ನೇರವಾಗಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಹೇಳಿ ಮಾತನಾಡಲು ಬಂದಿದ್ದೇನೆ ಎಂದಿದ್ದಾರೆ.
ನಾವು ಜೆಡಿಎಸ್ ಬಿಡುವುದಿಲ್ಲ, ಜೆಡಿಎಸ್ ನಮ್ಮದೇ. ನಾವೇ ಅದರ ನೇತೃತ್ವ ತೆಗೆದುಕೊಳ್ಳುತ್ತೇವೆ. ರಾಜ್ಯಕ್ಕೆ ಮೂರನೇ ಶಕ್ತಿ ಬೇಕಾಗಿದೆ. ಹಾಗಾಗಿ ನಾವೆಲ್ಲಾ ಜಿ. ಟಿ ದೇವೇಗೌಡರ ಜತೆ ಮಾತನಾಡುತ್ತೇವೆ. ನಮ್ಮ ಸಂಪರ್ಕದಲ್ಲಿರುವ ಶಾಸಕರುಗಳ ತೀರ್ಮಾನದಂತೆ ಮುಂದಿನ ತೀರ್ಮಾನ ಮಾಡುತ್ತೇವೆ ಎಂದು ಹೇಳಿದ್ದಾರೆ.
ದೇವೇಗೌಡರಿಗೆ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಇಲ್ಲ: ಜೆಡಿಎಸ್ನಿಂದ ಅನೇಕರು ನೋವು ಉಂಡಿದ್ದಾರೆ. ಈ ಮಧ್ಯೆ ಕುಮಾರಸ್ವಾಮಿ ಸರಿಯಾಗುತ್ತಾರೆ ಎಂದುಕೊಂಡಿದ್ದೆವು. ಆದರೆ, ಕುಮಾರಸ್ವಾಮಿ ಮಗ 20 ಸಾವಿರಕ್ಕೂ ಹೆಚ್ಚಿನ ಅಂತರದಿಂದ ಸೋತಿದ್ದಾರೆ. ಈಗ ಕುಮಾರಸ್ವಾಮಿ ಬಿಜೆಪಿ ಜತೆ ಸೇರಿದ್ದೇ ಅವರಿಗೆ ಈ ರೀತಿಯ ಸೋಲಾಗಿದೆ ಎಂದು ಅನ್ನಿಸುತ್ತಿದೆ. ಈಗ ಬಿಜೆಪಿ ಜತೆ ಜೆಡಿಎಸ್ ಮದುವೆಯಾಗಿ ಅರ್ಧ ದಾರಿಯಲ್ಲಿ ಜೆಡಿಎಸ್ ನಿಂತಿದೆ. ದೇವೇಗೌಡರಿಗೆ ಈ ವಯಸ್ಸಿನಲ್ಲಿ ಈ ರೀತಿ ಆಗಬಾರದಿತ್ತು. ಹೆಚ್. ಡಿ ದೇವೇಗೌಡರಿಗೆ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಇಲ್ಲ. ಈಗ ಜೆಡಿಎಸ್ ಮನೆಗೆ ಬೆಂಕಿ ಬಿದ್ದಿದೆ ಎಂದರು.
ಮುಡಾ ವಿಚಾರದಲ್ಲಿ ಬಿಜೆಪಿಯವರು ಸೈಟು ಕೊಟ್ರು. ಜಾಗ ನಮ್ಮದಾದರೆ ಕೊಡಿ, ಇಲ್ಲ ಅಂದರೆ ಬೇಡ ಎನ್ನಬಹುದಿತ್ತು. ಆದರೆ ಸಿಎಂ ಸಿದ್ದರಾಮಯ್ಯ ಸೈಟ್ ತೆಗೆದುಕೊಂಡಿದ್ದು, ಈಗ ಬಿಜೆಪಿಯವರು ಅದೇ ವಿಚಾರ ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಈ ನೆಲದ ಮೇಕೆದಾಟು, ಮಹದಾಯಿ ಯೋಜನೆ ಬಗ್ಗೆ ಮೋದಿಯವರನ್ನ ಕೇಳಲಿ ಎಂದು ಹೇಳಿದರು.
ಇದನ್ನೂ ಓದಿ : ಟಗರು ಮೇಲೆ ಪ್ರೀತಿ ಅಲ್ಲ, ಹೊಗಳುಭಟ್ಟರು ಸಿದ್ದರಾಮಯ್ಯನ ಹಾಳು ಮಾಡಿದ್ದಾರೆ: ಸಿ.ಎಂ. ಇಬ್ರಾಹಿಂ - Ibrahim Reaction On CM