ಬೆಳಗಾವಿ: ಬೆಳಗಾವಿ ಸೋಲಿನ ಹೊಣೆಯನ್ನು ಯಾರೂ ಹೊರಬೇಕಿಲ್ಲ. ಅಭ್ಯರ್ಥಿಯೂ ಅವರೇ, ಉಸ್ತುವಾರಿ ವಹಿಸಿಕೊಂಡಿದ್ದೂ ಅವರೇ. ಅದನ್ನು ಯಾರ ಮೇಲೂ ಹೊರಿಸುವ ಪ್ರಶ್ನೆ ಬರುವುದಿಲ್ಲ. ನಮ್ಮ ಮಗಳು ಅಭ್ಯರ್ಥಿ ಆಗಿದ್ದಕ್ಕೆ ನಾನು ಜವಾಬ್ದಾರಿ. ಹಾಗಾಗಿ, ಇಲ್ಲಿ ಯಾರು ಉಸ್ತುವಾರಿ ವಹಿಸಿಕೊಂಡಿದ್ದರೋ ಅವರೇ ಸೋಲಿನ ಜವಾಬ್ದಾರಿ ಹೊರಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಪರೋಕ್ಷವಾಗಿ ಲಕ್ಷ್ಮೀ ಹೆಬ್ಬಾಳ್ಕರ್ಗೆ ಟಾಂಗ್ ಕೊಟ್ಟರು.
ಬೆಳಗಾವಿ ಕಾಂಗ್ರೆಸ್ ಭವನದಲ್ಲಿಂದು ಮಾತನಾಡಿದ ಅವರು, ಕಳೆದ ಆರು ಚುನಾವಣೆಗಳಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಗೆಲ್ಲಲು ಯಾಕೆ ಸಾಧ್ಯವಾಗುತ್ತಿಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಕಳೆದ ಬಾರಿಯೂ ಗೆಲ್ಲುವ ಅವಕಾಶವಿತ್ತು. ಗೆಲ್ಲಲು ಬಹಳ ಹತ್ತಿರ ಬಂದಿದ್ದೆವು. ಈ ಬಾರಿಯೂ ನೂರಕ್ಕೆ ನೂರು ಗೆಲ್ಲುವ ಲೆಕ್ಕಾಚಾರ ಹಾಕಿದ್ದೆವು. ಆದರೆ, ಯಾರು ವಿರೋಧಿಸಿದರು, ಒಳ ಏಟು ಕೊಟ್ಟರು, ಪರವಾಗಿ ಯಾರು ಕೆಲಸ ಮಾಡಿದರು ಎಂಬುದು ಕೊನೆವರೆಗೂ ಗೊತ್ತಾಗಲಿಲ್ಲ ಎಂದರು.
ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಲಾಗದ ಸಚಿವರ ವಿರುದ್ಧ ಕ್ರಮವಾಗಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅಭ್ಯರ್ಥಿ ಸರಿ ಇಲ್ಲ ಎಂದರೆ ಸಚಿವರು ಏನು ಮಾಡಬೇಕು. ನಾನು ಡೈರೆಕ್ಟರ್ ಬಗ್ಗೆ ಹೇಳಿದ್ದೆ. ನೀವು ಡಿ.ಕೆ.ಶಿವಕುಮಾರ್‌ಗೆ ತೋರಿಸಿದ್ದೀರಿ. ಡೈರೆಕ್ಟರ್ ಎಂದರೆ ಅಭ್ಯರ್ಥಿ, ಅವರು ಸರಿ ಇರಬೇಕು. ವರ್ತನೆ ಸರಿ ಇರಬೇಕು. ಎಲ್ಲಾ ರೀತಿ ಸಮರ್ಥರಿರಬೇಕು. ಹಾಗಾದಾಗ ಒಂದು ಸಿನಿಮಾ ಸಕ್ಸಸ್ ಆಗುತ್ತದೆ. ಇದನ್ನು ಡಿ.ಕೆ.ಶಿವಕುಮಾರ್‌ಗೆ ನಾನು ಹೇಳಿದ್ದಲ್ಲ. ಮೊದಲು ಅಭ್ಯರ್ಥಿ, ಆಮೇಲೆ ಪಕ್ಷ ಸೇರಿ ಎಲ್ಲಾ ಕೌಂಟ್ ಆಗುತ್ತವೆ. 10ರಲ್ಲಿ 7 ಪಾಯಿಂಟ್ಗಳಲ್ಲಿ ಪಾಸ್ ಆಗಬೇಕಿತ್ತು. ಆ 7 ಪಾಯಿಂಟ್ಸ್ ಏನು ಎನ್ನುವುದನ್ನು ಸಿಕ್ಕಾಗ ಮೇಡಂ ಅವರಿಗೆ ಹೇಳುತ್ತೇನೆ ಎಂದು ಹೇಳಿದರು.
ಫಲಿತಾಂಶದ ಬಳಿಕ ತಮ್ಮ ಶಾಸಕರ ಬಗ್ಗೆ ಅಸಮಾಧಾನ ಹೊರಹಾಕಿದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅವಶ್ಯಕತೆ ಇತ್ತು, ಹಾಗಾಗಿ ಹೇಳಿದ್ದೇವೆ. ನಾವು ಸಮೀಪದಿಂದ ಚುನಾವಣೆ ಮಾಡಿದ್ದೇವೆ. ಅಲ್ಲಿ ಸಮಸ್ಯೆ ಆಗಿದ್ದು ನಮ್ಮ ಗಮನಕ್ಕೆ ಬಂದಿದೆ, ಹಾಗಾಗಿ ಹೇಳಿದ್ದೇವೆ. ಅದನ್ನು ಅವರಿಗೆ ಕೌಂಟರ್, ನೈಜ ವರದಿ, ಸವಾಲು, ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟಿದ್ದಾರೆ ಅಂದುಕೊಳ್ಳಬಹುದು. ಅಲ್ಲದೇ ಸಾಕಷ್ಟು ಪತ್ರಿಕೆಗಳಲ್ಲಿ ನಾನಾ ರೀತಿ ವಿಶ್ಲೇಷಣೆ ಮಾಡಲಾಗುತ್ತಿದೆ. ಲಕ್ಷ್ಮಣ ಸವದಿ, ಮಹೇಂದ್ರ ತಮ್ಮಣ್ಣವರ ಅವರಿಂದ ನಮಗೆ ಸಮಸ್ಯೆ, ಅಡೆತಡೆ ಆಗಿದೆ ಎಂಬುದು ವರದಿ ಮಾಡಿದ್ದಾರೆ. ಆ ರೀತಿ ಆಗಿಲ್ಲ ಎಂಬ ಬಗ್ಗೆ ಅವರೇ ಹೇಳಬೇಕು ಎಂದು ಕುಟುಕಿದರು.