ಕಲಬುರಗಿ:ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಹೇಳಿರುವ ಸಂಸದ ಉಮೇಶ್ ಜಾಧವ್ ಅವರಿಗೆ ಬಿಜೆಪಿ ಸರ್ಕಾರ ಇದ್ದಾಗ ಜಿಲ್ಲೆಯಲ್ಲಿ ಇದೇ ಅವಧಿಯಲ್ಲಿ 28 ಕೊಲೆಗಳಾಗಿದ್ದವು ಎಂದು ಅಂಕಿ ಅಂಶಗಳ ನೀಡುವ ಮೂಲಕ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ವೇಳೆ ಸಂಸದ ಉಮೇಶ್ ಜಾಧವ್ ಅವರು 'ಪ್ರಿಯಾಂಕ್ ಉಸ್ತುವಾರಿ ಸಚಿವರಾದ ನಂತರ ಜಿಲ್ಲೆಯಲ್ಲಿ 13 ಕೊಲೆಗಳಾಗಿವೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ' ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿ ಪ್ರಿಯಾಂಕ್ ಖರ್ಗೆ ''ಬಹುತೇಕ ಕೊಲೆಗಳಲ್ಲಿ ಅವರ ಚಿರಪರಿಚಿತರೇ ಆರೋಪಿಗಳಾಗಿದ್ದಾರೆ. ಅಫಜಲ್ಪುರ ತಾಲೂಕಿನಲ್ಲಿ ನಮ್ಮ ಸರ್ಕಾರದ ಅಧಿಕಾರಿಯ ಮೇಲೆ ಟ್ರಾಕ್ಟರ್ ಹತ್ತಿಸಿದ್ದವರು ಯಾರು?'' ಎಂದು ತಿರುಗೇಟು ನೀಡಿದ್ದಾರೆ.
ಮುಂದುವರೆದು, ಬಿಜೆಪಿ ಸರ್ಕಾರದ ಅವಧಿಯಲ್ಲಿ 28 ಕೊಲೆಗಳಾಗಿದ್ದವು ಎಂದು ಪುನರುಚ್ಚರಿಸಿದ ಸಚಿವರು, ''ಗುಜರಾತ್ನಲ್ಲಿ ಕಳೆದ ವರ್ಷದ ಅವಧಿಯಲ್ಲಿ 2,209 ಅತ್ಯಾಚಾರ ನಡೆದಿದ್ದು, 36 ಗ್ಯಾಂಗ್ ರೇಪ್ಗಳಾಗಿವೆ. ಇದಕ್ಕೆ ಸುವ್ಯವಸ್ಥೆ ಕುಸಿದಿದೆ ಎನ್ನಬಹುದು. ಬಿಜೆಪಿ ಅಧಿಕಾರವಿದ್ದಾಗಲೇ ಎಬಿವಿಪಿ ಕಾರ್ಯಕರ್ತರು ಕೇಂದ್ರ ಸಚಿವ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರ ಕಾರಿಗೆ ಅಡ್ಡಹಾಕಿದ್ದರು. ಬಿಜೆಪಿ ಅಧಿಕಾರದಲ್ಲಿ ಆಳಂದದ ಲಾಡ್ಲೆ ಮಶಾಖ ದರ್ಗಾದಲ್ಲಿ ಪೂಜೆ ಮಾಡುವ ವಿಚಾರದಲ್ಲಿ ಗಲಾಟೆಗಳಾಗಿದ್ದವು. ಆಗ ಕಾನೂನು ಸುವ್ಯವಸ್ಥೆ ಕುಸಿದಿತ್ತು. ಈ ಸಲ ಅಂತಹ ಯಾವುದೇ ಘಟನೆ ನಡೆಯದಂತೆ ನೋಡಿಕೊಂಡಿದ್ದೇವೆ'' ಎಂದು ಟಾಂಗ್ ನೀಡಿದರು.
ಅಪರಂಜಿ ಎಲ್ಲಿ?:ಚಿತ್ತಾಪುರದ ಅಪರಂಜಿ ಈಗ ಎಲ್ಲಿ? ಎಂದು ಜಾಧವ್ರನ್ನು ಪ್ರಶ್ನಿಸಿದ ಸಚಿವರು, ''ಅಪಘಾತವನ್ನು ಹಲ್ಲೆ ಎಂದು ಬಿಂಬಿಸಲಾಗಿತ್ತು. ಪೊಲೀಸ್ ತನಿಖೆ ನಂತರ ಅದು ಸುಳ್ಳು ಎಂದು ಸಾಬೀತಾಗಿತ್ತು. ಆ ನಂತರ ಜಾಧವ್ರ ಅಪರಂಜಿ ನಾಪತ್ತೆಯಾಗಿದ್ದಾನೆ'' ಎಂದು ಕುಟುಕಿದರು. ''ನಮ್ಮ ಸರ್ಕಾರದಲ್ಲಿ ರೌಡಿಗಳನ್ನು ನಿಯಂತ್ರಣ ಮಾಡಿರುವುದಕ್ಕೆ ಬಿಜೆಪಿಗರಿಗೆ ಸಂಕಷ್ಟವಾಗಿದೆ'' ಎಂದ ಖರ್ಗೆ, ''ಕಾನೂನು ಸುವ್ಯವಸ್ಥೆ ಕುಸಿದಿಲ್ಲ ಎನ್ನುವುದಕ್ಕೆ ಹಲವಾರು ಉದಾಹರಣೆಗಳಿವೆ'' ಎಂದು ಹೇಳಿದರು.
''ಸಂಸದರಾಗಿ ಜಾಧವ ಏನು ಅಭಿವೃದ್ದಿ ಮಾಡಿದ್ದಾರೆ ಹೇಳಲಿ. ಸಿಯುಕೆಗೆ ಸುಣ್ಣ ಬಣ್ಣ ಬಳಿಸಿಲ್ಲ, ರೇಲ್ವೆ ವಲಯ, ಟೆಕ್ಸ್ಟೈಲ್ ಪಾರ್ಕ್ ಮುಂತಾದ ಯೋಜನೆಗಳು ವಾಪಸ್ ಹೋಗಿವೆ. ಈ ಸಲದ ರೇಲ್ವೆ ಬಜೆಟ್ನಲ್ಲಿ ಕಲಬುರಗಿಗೆ ಕೇವಲ ಒಂದು ಸಾವಿರ ರೂಪಾಯಿ ಮೀಸಲಿಟ್ಟಿದ್ದಾರೆ. ಇವತ್ತು ವಂದೇ ಭಾರತ್ ಡಕೋಟಾ ರೇಲ್ವೆಗೆ ಉದ್ಘಾಟನೆ ಮಾಡಿದ್ದಾರೆ. ಜಾಧವ್ ವಾಸ್ತವದ ಮೇಲೆ ಮಾತನಾಡಲಿ'' ಎಂದು ಕುಟುಕಿದರು.