ಕರ್ನಾಟಕ

karnataka

By ETV Bharat Karnataka Team

Published : 4 hours ago

ETV Bharat / state

'ಬಿಜೆಪಿಯವರು ನೀತಿ ಪಾಠ ಹೇಳುವುದು, ನರಿಗಳು ಪಾಠ ಮಾಡುವುದು ಒಂದೇ': ಸಚಿವ ಪ್ರಿಯಾಂಕ್​ ಖರ್ಗೆ - Minister Priyank Kharge

ರಾಜ್ಯ ಬಿಜೆಪಿಯಲ್ಲಿ ಒಳ ಜಗಳವಿದೆ. ಅವರು ಪಾಠ ಮಾಡುವುದು, ನರಿಗಳು ಪಾಠ ಮಾಡುವುದು ಒಂದೇ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.

ಸಚಿವ ಪ್ರಿಯಾಂಕ ಖರ್ಗೆ
ಸಚಿವ ಪ್ರಿಯಾಂಕ ಖರ್ಗೆ (ETV Bharat)

ಬೆಂಗಳೂರು: "ಬಿಜೆಪಿಯವರು ನೀತಿ ಪಾಠ ಹೇಳುವುದು, ನರಿಗಳು ಪಾಠ ಮಾಡುವುದು ಒಂದೇ" ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.‌

ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, "ರಾಜ್ಯದಲ್ಲಿ ಬಿಜೆಪಿ ಸಂಪೂರ್ಣ ಬಿಕ್ಕಟ್ಟಿನಲ್ಲಿದೆ. ಪಕ್ಷದಲ್ಲಿ ಒಳಜಗಳ, ನಾಯಕತ್ವ ಕೊರತೆ ಎದ್ದು ಕಾಣುತ್ತಿದೆ. ನಾವು ಕನ್ನಡಿಗರ ಪರವಾಗಿ ಕೆಲಸ ಮಾಡುತ್ತಿದ್ದೇವೆ. ಅದರಿಂದ ಮೋದಿ ಸರ್ಕಾರಕ್ಕೆ ಪದೇ ಪದೆ ಮುಜುಗರವಾಗುತ್ತಿದೆ.‌ ಬಿಜೆಪಿಯವರು ನಮ್ಮ ನಾಯಕರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಬಿಜೆಪಿ ಒಂದು ಎಸ್​ಒಪಿ ಮಾಡಿದೆ. ಮೊದಲು ಸಿಬಿಐ ಕಳಿಸುತ್ತಾರೆ. ಐಟಿ ಕಳಿಸುತ್ತಾರೆ. ಬಳಿಕ ಇ.ಡಿ ಕಳಿಸುತ್ತಾರೆ. ಇದಾದ ಬಳಿಕ ಆಗಿಲ್ಲ ಅಂದರೆ ರಾಜ್ಯಪಾಲರ ಕಚೇರಿ ಬಳಸುತ್ತಾರೆ. ಬಿಜೆಪಿಯವರ ವಿಧಾನ ಬ್ಲ್ಯಾಕ್ ಮೇಲ್. ಖಾಸಗಿ ಕಂಪನಿಗಳನ್ನು ಹಾಗೂ ವಿಪಕ್ಷಗಳನ್ನು ಬ್ಲ್ಯಾಕ್ ಮೇಲ್​ ಮಾಡುತ್ತಾರೆ" ಎಂದು ದೂರಿದರು.

"ಚುನಾವಣಾ ಬಾಂಡ್​ ಹೆಸರಲ್ಲಿ ಸುಲಿಗೆ ನಡೆದಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಚುನಾವಣಾ ಬಾಂಡ್​ನ್ನು ಮನಿ ಬಿಲ್ ಎಂದು ಜಾರಿಗೆ ತರಲಾಗಿದೆ. ಇದಕ್ಕೆ ಕ್ಯಾಪ್ ಹಾಕಬೇಕು ಎಂದು ನಾವು ಆವಾಗಲೇ ಹೇಳಿದ್ದೇವೆ. ಎಸ್​ಬಿಐ ಮೂಲಕ ಬಾಂಡ್​ ವಹಿವಾಟು ನಡೆಯುತ್ತದೆ. ಎಸ್​ಬಿಐ ಕೇಂದ್ರ ಹಣಕಾಸು ಸಚಿವಾಲಯದ ಕೆಳಗೆ ಬರುತ್ತದೆ.‌ 12,000 ಕೋಟಿ ರೂ. ಚುನಾವಣಾ ಬಾಂಡ್ ರಾಜಕೀಯ ಪಕ್ಷಗಳಿಗೆ ಹೋಗಿದ್ದು, ಇದರಲ್ಲಿ ಬಹುಪಾಲು ಬಿಜೆಪಿಗೆ ಹೋಗಿದೆ. 2,500 ಕೋಟಿ ಬಾಂಡ್​ಗಳು ಅವರು ನೀಡಿದ ಅಂಕಿಅಂಶದಲ್ಲಿ ನಾಪತ್ತೆಯಾಗಿವೆ. ಟಾಪ್ 30 ಡೋನರ್ಸ್​ಗಳಲ್ಲಿ ಬಹುತೇಕರ ಮೇಲೆ ಐಟಿ, ಇ.ಡಿ. ದಾಳಿ ಆಗಿದೆ. ಸುಮಾರು 17 ಕಂಪನಿಗಳಿಂದ ಬಿಜೆಪಿಗೆ ಸುಮಾರು 4,000 ಕೋಟಿ ರೂ.ಗೂ ಅಧಿಕ ಬಾಂಡ್ ಬಂದಿದೆ. ರೇಡ್ ಮಾಡಿದ ತಕ್ಷಣ ಬಾಂಡ್ ಖರೀದಿ ಹೆಚ್ಚಾಗುತ್ತದೆ" ಎಂದು ಸಚಿವ ಖರ್ಗೆ ಆರೋಪಿಸಿದರು.‌

"ಈ ಬಾಂಡ್ ಅಕ್ರಮ ಸಂಬಂಧ ಎನ್ ಜಿಒ ಕೋರ್ಟ್​ಗೆ ಹೋಗಿದೆ. ಈ ಸಂಬಂಧ ಜನಪ್ರತಿನಿಧಿ ಕೋರ್ಟ್ ಸೂಚನೆ ಮೇರೆಗೆ ಸಚಿವೆ ನಿರ್ಮಲಾ ಸೀತಾರಾಮನ್, ಜೆ.ಪಿ. ನಡ್ಡಾ, ಬಿ.ವೈ. ವಿಜಯೇಂದ್ರ, ಇ.ಡಿ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಾಗಿದೆ. ಸಿದ್ದರಾಮಯ್ಯರಿಗೆ ರಾಜೀನಾಮೆ ಕೊಡಲು ಹೇಳುತ್ತಿದ್ದಾರೆ. ಆದರೆ, ಈಗ ಬಿಜೆಪಿ ನಾಯಕರ ಮೇಲೆನೇ ಎಫ್ ಐಆರ್ ದಾಖಲಾಗಿದೆ. ನೀವು ಹಾಗಾದರೆ ಖಾಲಿ ಮಾಡಬೇಕಲ್ವಾ?. ಬಾಂಡ್ ಖರೀದಿ ಮಾಡಿದ 33 ಕಂಪನಿಗಳಿಗೆ ಯಾವುದೇ ಲಾಭ ಇಲ್ಲ. ಆದರೂ ಈ ಕಂಪನಿಗಳು 576 ಕೋಟಿ ಬಾಂಡ್ ಖರೀದಿ ಮಾಡಿವೆ. ಈ 33 ಕಂಪನಿಗಳ ಒಟ್ಟು ನಷ್ಟವೇ ಸುಮಾರು 1 ಲಕ್ಷ ಕೋಟಿ ರೂ. ಆಗಿದೆ" ಎಂದು ಹೇಳಿದರು.

"ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ದೊಡ್ಡ ವ್ಯಕ್ತಿ ಇದ್ದಾರೆ. ಅವರು ರಾಜ್ಯಕ್ಕೆ ದೊಡ್ಡ ಕೊಡುಗೆ ಏನಾದರು ಕೊಟ್ಟಿದ್ದಾರಾ?. ರಾಹುಲ್, ಸೋನಿಯಾ ಗಾಂಧಿ ವಿರುದ್ಧ ಮನಿ ಲಾಂಡ್ರಿಂಗ್ ಕೇಸ್ ಇದೆ. ಅವರನ್ನು ಒಳಕ್ಕೆ ಹಾಕಬೇಕು ಎಂದಿದ್ದಾರೆ. ಮೋದಿ ಸರ್ಕಾರದ 23 ಮಂತ್ರಿಗಳ ಮೇಲೆ ಎಫ್ಐಆರ್ ಇದೆ. ಹೆಚ್​ಡಿಕೆ ಸೇರಿ 23 ಸಚಿವರ ಮೇಲೆ ಎಫ್ಐಆರ್​ ಇದೆ. ನಿಮ್ಮ ನಾಯಕ ಯಡಿಯೂರಪ್ಪ ಮೇಲೆನೇ ಪೊಕ್ಸೊ ಪ್ರಕರಣ ಇದೆಯಲ್ಲ. ಆ ಬಗ್ಗೆ ಏನು ಮಾತನಾಡುತ್ತೀರ?. ಯಡಿಯೂರಪ್ಪ ಮೇಲೆ ಯಾವುದೇ ಬಿಜೆಪಿ ನಾಯಕರು ಮಾತನಾಡುತ್ತಿಲ್ಲ ಏಕೆ?" ಎಂದು ಪ್ರಶ್ನಿಸಿದರು.

"ಮುನಿರತ್ನ ಬಗ್ಗೆ ಏಕೆ ಮಾತನಾಡುತ್ತಿಲ್ಲ?. ಅವರನ್ನೇ ನೀವು ಸಮರ್ಥಿಸಿಕೊಂಡಿದ್ದೀರ. ನಿಮಗೆ ನಾಚಿಕೆ ಆಗಬೇಕು. ಇದು ನಿಮ್ಮ ಸಂಸ್ಕೃತಿನಾ?. ಏಕೆ ನಿಮ್ಮದೂ ಸಿಡಿ ಇದೆಯಾ?.‌ ಮಾತನಾಡಲು ಭಯನಾ?. ನಿಮಗೆ ಏಕೆ ಮುನಿರತ್ನ ಕಂಡರೇ ಭಯ?. ಅವರನ್ನು ಪಕ್ಷದಿಂದ ವಜಾ ಮಾಡಿ ಮೊದಲು. ಮೊದಲು ನಿಮ್ಮದು ಸರಿ ಮಾಡಿ. ರಾಜ್ಯಪಾಲರಿಂದ ಆಟ ಆಡಿಸುತ್ತಿದ್ದೀರ. ನಾವು ಎಲ್ಲವನ್ನೂ ಎದುರಿಸುತ್ತೇವೆ. ನಮ್ಮನ್ನು ಹೆದರಿಸುವುದಕ್ಕೆ ಹೋಗಬೇಡಿ. ನಾವು ಹೆದರಲ್ಲ. ನಿಮ್ಮ ಮನೆಯನ್ನು ಸರಿಪಡಿಸಿ. ನಿಮ್ಮಿಂದ ಆಗುತ್ತಿರುವ ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆಗೆ ನಾವು ಅಂಜುವವರಲ್ಲ, ಬಗ್ಗುವವರಲ್ಲ, ಜಗ್ಗುವವರಲ್ಲ" ಎಂದರು.

ಲೋಕಾಯುಕ್ತ ಎಡಿಜಿಪಿ ಮೇಲೆ ಹೆಚ್​ ಡಿ ಕುಮಾರಸ್ವಾಮಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, "ಏಕೆ ಆರೋಪ ಮಾಡುತ್ತಿದ್ದಾರೆ ಗೊತ್ತಿಲ್ಲ. ನಿಮ್ಮ ಪರವಾಗಿ ಮಾಡಿದರೆ ಒಳ್ಳೆಯವರು ಅಂತಾರೆ, ಇಲ್ಲವಾದರೆ ಅವರು ಕೆಟ್ಟವರಾಗುತ್ತಾರಾ?. ಕುಮಾರಸ್ವಾಮಿಯವರು ಒಬ್ಬ ಮಾಜಿ ಸಿಎಂ, ಕೇಂದ್ರ ಸಚಿವರಾಗಿದ್ದಾರೆ. ಅವರದೇ ಆದ ಗೌರವ ಇದೆ. ಏಕೆ ಈ ರೀತಿ ಆರೋಪ ಮಾಡಬೇಕು" ಎಂದು ಪ್ರಶ್ನಿಸಿದರು.

ಇದನ್ನೂ ಓದಿ:'ಹಂದಿ' ಪದ ಬಳಕೆ ವಿಚಾರ: ಎಡಿಜಿಪಿ ಬರ್ನಾರ್ಡ್ ಷಾ ಅವರ ವಾಕ್ಯ ಹೇಳಿದ್ದಾರೆ ಅಷ್ಟೇ- ಸಿಎಂ - CM Siddaramaiah

ABOUT THE AUTHOR

...view details