ಮೈಸೂರು: ರೈತರಿಗಾಗಿ, ಕಾವೇರಿ ನೀರಿಗಾಗಿ ಹೋರಾಟ ಮಾಡಿದರೆ ನಾವೇ ಅವರ ಹೋರಾಟ ಬೆಂಬಲಿಸಿ ನಿಂತುಕೊಳ್ಳುತ್ತಿದ್ದೆವು. ಆದರೆ, ಈಗ ಯಾವ ಪುರುಷಾರ್ಥಕ್ಕಾಗಿ ಬಂದ್ ಹಾಗೂ ಹೋರಾಟವನ್ನು ಬಿಜೆಪಿ, ಜೆಡಿಎಸ್ನವರು ಮಾಡುತ್ತಿದ್ದಾರೆ. ಅವರಿಗೆ ನಾಚಿಕೆಯಾಗಬೇಕು ಎಂದು ಮೈಸೂರಿನಲ್ಲಿ ಸಚಿವ ಚಲುವರಾಯಸ್ವಾಮಿ ಕುಟುಕಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿ ಜೆಡಿಎಸ್ ಮುಖಂಡರು ಬಾಯಿಗೆ ಬಂದ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ನಾವು ಸಹ ಮಂಡ್ಯದ ಮಣ್ಣಿನ ಮಕ್ಕಳು. ನಮಗೂ ಮಾತನಾಡಲು ನಾಲಿಗೆ ಇದೆ. ಹಿಂದುತ್ವ ಅವರಿಗಿಂತ ನಮಗೆ ಜಾಸ್ತಿ ಇದೆ. ಅವರಿಗಿಂತ ದೇಶಭಕ್ತಿಯೂ ಜಾಸ್ತಿ ಇದೆ. ಮಂಡ್ಯವನ್ನ ಮಂಗಳೂರು ಮಾಡಲು ನಾವು ಬಿಡುವುದಿಲ್ಲ. ಜನರೇ ಬಂದ್ ವಿರುದ್ಧ ತಿರುಗಿ ಬೀಳುತ್ತಾರೆ ಎಂದು ಸಚಿವರು ವಾಗ್ದಾಳಿ ನಡೆಸಿದರು.
ಕುಮಾರಸ್ವಾಮಿಯಿಂದ ನಾನು ಲೀಡರ್ ಆಗಿಲ್ಲ:ಕುಮಾರಸ್ವಾಮಿ ಬಳಿ ನಾನು ವಿನಯದ ಬಗ್ಗೆ ಕೇಳಿಸಿಕೊಳ್ಳುವ ಅಗತ್ಯವಿಲ್ಲ. ಅವರಿಂದ ನಾನು ಲೀಡರ್ ಆಗಿಲ್ಲ. ಎಚ್ ಡಿ.ದೇವೇಗೌಡರ ಮೇಲಿನ ಗೌರವದಿಂದ ಸುಮ್ಮನೆ ಇದ್ದೇನೆ. ದೇವೇಗೌಡರ ಹೆಸರು ಕುಮಾರಸ್ವಾಮಿ ಜೊತೆ ಇಲ್ಲದಿದ್ದರೆ ಸರಿಯಾಗಿ ಉತ್ತರ ಕೊಡುತ್ತಿದ್ದೆನು. ಚಲುವರಾಯಸ್ವಾಮಿ ಏನು ಕುಮಾರಸ್ವಾಮಿ ಮನೆಯ ಋಣದಲ್ಲಿ ಇದ್ದೇವೆಯಾ. ನಾವು ಅವರ ಆಸ್ತಿ ತಿಂದಿದ್ದೇವಾ, ಮಾತನಾಡುವುದಕ್ಕೆ ಗೌರವ ಬೇಕು. ಕುಮಾರಸ್ವಾಮಿ ಕೈಯಲ್ಲಿ ನನ್ನ ಹಣೆ ಬರಹ ಬರೆಯಲು ಸಾಧ್ಯವೇ ಎಂದು ಕಿಡಿಕಾರಿದರು.