ಮಂಗಳೂರು: "ಕರಾವಳಿ ಭಾಗಗಳಲ್ಲಿ ಬೆಟ್ಟ ಕಡಿದು ಮನೆಗಳನ್ನು ನಿರ್ಮಿಸಿರುವುದರಿಂದ ಭೂಕುಸಿತಗಳು ತೀವ್ರತರದಲ್ಲಿ ನಡೆಯುತ್ತಲೇ ಬಂದಿದೆ. ಗ್ರಾ.ಪಂ ಅಧಿಕಾರಿಗಳ ಮೂಲಕ ಅಪಾಯಕಾರಿ ಪಾಯಿಂಟ್ಗಳನ್ನು ಸರ್ವೆ ನಡೆಸಲು ಸೂಚಿಸಲಾಗಿದೆ" ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಉಳ್ಳಾಲದಲ್ಲಿಕಂಪೌಂಡ್ ಉರುಳಿ ಬಿದ್ದು, ಮನೆ ಕುಸಿದು ನಾಲ್ವರು ಸಾವನ್ನಪ್ಪಿದ ಘಟನಾ ಸ್ಥಳಕ್ಕೆಪೂರ್ವನಿಯೋಜಿತ ತಮ್ಮ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಬೆಂಗಳೂರಿನಿಂದ ಬುಧವಾರ ಸಂಜೆ ಆಗಮಿಸಿ ಪರಿಶೀಲಿಸಿದರು. ಈ ವೇಳೆ, ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ತೀವ್ರತರದಲ್ಲಿ ಅಪಾಯ ಇರುವ ಸ್ಥಳಗಳಲ್ಲಿ ತುರ್ತು ಪರಿಹಾರ ಕ್ರಮಕ್ಕೆ ಆದೇಶಿಸಲಾಗಿದೆ. ಜಿಲ್ಲಾಧಿಕಾರಿ ಹಾಗೂ ಕಂದಾಯ ಅಧಿಕಾರಿಗಳೊಂದಿಗೆ ನಡೆಸುವ ಸಭೆಯಲ್ಲಿ ಈ ಕುರಿತು ಆದೇಶಿಸುವುದಾಗಿ ಮಾಹಿತಿ ನೀಡಿದರು.
"ಕರಾವಳಿ ಭಾಗಗಳಲ್ಲಿ ಬೆಟ್ಟ ಕಡಿದು ಮನೆಗಳನ್ನು ನಿರ್ಮಿಸಿರುವುದರಿಂದ ಭೂಕುಸಿತಗಳು ತೀವ್ರತರದಲ್ಲಿ ನಡೆಯುತ್ತಲೇ ಬಂದಿದೆ. ಜನ ಅನಿವಾರ್ಯವಾಗಿ ಕಟ್ಟುತ್ತಾರೆ. ಆದರೆ ಕಟ್ಟುವಾಗ ಅಡಿಪಾಯವನ್ನು ಗಟ್ಟಿಯಾಗಿಸಿ, ನೆರೆಮನೆಯ ಕಂಪೌಂಡ್ ವಾಲ್ಗಳು 20 ಫೀಟ್ ಎತ್ತರವಿದ್ದರೂ ಸುರಕ್ಷತಾ ಕ್ರಮವಹಿಸದೆ ಕಟ್ಟುತ್ತಿದ್ದಾರೆ. ಎಲ್ಲ ಕಡೆಗಳಲ್ಲಿ ಇಂತಹ ವ್ಯವಸ್ಥೆ ಇದ್ದರೂ 1000 ಮನೆಗಳಲ್ಲಿ 999 ಮನೆಗಳು ಏನೂ ಆಗುವುದಿಲ್ಲ. ಒಂದು ಮನೆಯಲ್ಲಿ ಇಂತಹ ಅನಾಹುತ ಸಂಭವಿಸಿದಾಗ ಎಲ್ಲರೂ ಎಚ್ಚೆತ್ತುಕೊಳ್ಳುವ ವ್ಯವಸ್ಥೆಗಳಾಗುತ್ತಿದೆ. ಈ ನಿಟ್ಟಿನಲ್ಲಿ ಸುರಕ್ಷಾ ಕ್ರಮಗಳನ್ನು ಅನುಸರಿಸಿ ಮನೆ ನಿರ್ಮಿಸಿದಲ್ಲಿ ಎಲ್ಲರೂ ಸುರಕ್ಷಿತ. ಮದನಿನಗರ ದುರಂತ ಕುರಿತು ಅಪಾರ ನೋವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಕ್ಷಣ ಸ್ಥಳಕ್ಕೆ ತೆರಳಲು ಆದೇಶಿಸಿದ ಹಿನ್ನೆಲೆಯಲ್ಲಿ ಭೇಟಿ ನೀಡಿದ್ದೇನೆ. ಸ್ಥಳದಲ್ಲಿರುವ ಅಪಾಯಕಾರಿ ಪ್ರದೇಶಕ್ಕೆ ತಕ್ಷಣ ಪರಿಹಾರ ಕ್ರಮಕ್ಕೆ ಅಧಿಕಾರಿಗಳು ಹಾಗೂ ಇಂಜಿನಿಯರ್ ಅವರಲ್ಲಿ ತಿಳಿಸಲಾಗಿದೆ ಎಂದರು.