ಬೆಂಗಳೂರು:ನಗರದ ಅರಮನೆ ಮೈದಾನದಲ್ಲಿ 2025 ರ ಫೆ.12 ರಿಂದ ಫೆ.14ರ ವರೆಗೆ ಜಾಗತಿಕ ಹೂಡಿಕೆದಾರರ ಸಮಾವೇಶ ಆಯೋಜನೆ ಮಾಡಲು ನಿರ್ಧರಿಸಲಾಗಿದೆ. ಇದಕ್ಕೆ 75 ಕೋಟಿಗೆ ಹೆಚ್ಚುವರಿಯಾಗಿ 15 ಕೋಟಿ ಒದಗಿಸಲು ಇಂದಿನ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ. ಸಮಾವೇಶದ ನಾಲೆಡ್ಜ್ ಪಾರ್ಟನರ್ ಆಗಿ ಬಾಸ್ಟನ್ ಕನ್ಸ್ಟ್ರಕ್ಷನ್ ಇಂಡಿಯಾ ಕಂಪನಿಯನ್ನು ಆಯ್ಕೆ ಮಾಡಲಾಗಿದೆ ಎಂದು ಕಾನೂನು ಸಚಿವ ಹೆಚ್.ಕೆ ಪಾಟೀಲ್ ತಿಳಿಸಿದ್ದಾರೆ.
ಚುನಾವಣೆ ನಂತರ ವಿಧಾನಸೌಧದಲ್ಲಿ ಮೊದಲ ಸಚಿವ ಸಂಪುಟ ಸಭೆ ನಡೆಯಿತು. ಸಂಪುಟ ಸಭೆ ನಂತರ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ವಾಣಿಜ್ಯ ಮತ್ತು ಕೈಗಾರಿಕೆಯಡಿ ಇನ್ವೆಸ್ಟ್ ಕರ್ನಾಟಕ 2025 ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ಅರಮನೆ ಮೈದಾನದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ. 2025 ರ ಫೆ.12 ರಿಂದ ಫೆ.14ರ ವರೆಗೆ ಆಯೋಜನೆ ಮಾಡಲು 75 ಕೋಟಿ ಒದಗಿಸಿದ್ದು, ಹೆಚ್ಚುವರಿಯಾಗಿ 15 ಕೋಟಿ ಒದಗಿಸಲು ಇಂದಿನ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ. ಬಂಡವಾಳ ಹೂಡಿಕೆ ಆಕರ್ಷಣೆಗೆ ನಾಲೆಡ್ಜ್ ಪಾರ್ಟನರ್ ಆಯ್ಕೆ ಕುರಿತು ಕರೆದ ಟೆಂಡರ್ನಲ್ಲಿ 21 ಕೋಟಿ ರೂ. ಟೆಂಡರ್ ಕೋಟ್ ಮಾಡಿದ್ದ ಬಾಸ್ಟನ್ ಕನ್ಸ್ಟ್ರಕ್ಷನ್ ಇಂಡಿಯಾ ಕಂಪನಿಯವರಿಗೆ ಟೆಂಡರ್ ಕೊಡಲಾಗಿದೆ. ಒಂದೇ ಟೆಂಡರ್ ಬಂದಿದ್ದ ಕಾರಣಕ್ಕೆ ಅವರಿಗೆ ಟೆಂಡರ್ ನೀಡಲಾಗಿದೆ ಎಂದರು.
ಹಿಂದಿನ ಸಚಿವ ಸಂಪುಟದಲ್ಲಿ 147 ಟೆಂಡರ್ಗಳಿಗೆ ಆಡಳಿತಾತ್ಮಕ ಮಂಜೂರಾತಿ ನೀಡಿದ್ದು, ಇವುಗಳಲ್ಲಿ ಎಷ್ಟು ಟೆಂಡರ್ ಕರೆದು ಕೆಲಸ ಪ್ರಾರಂಭ ಮಾಡಲಾಗಿದೆ ಎನ್ನುವ ಅವಲೋಕನ ನಡೆಸಲಾಯಿತು. ಇದರಲ್ಲಿ 94 ಪ್ರಸ್ತಾವಗಳಿಗೆ ಟೆಂಡರ್ ಆಹ್ವಾನಿಸಲಾಗಿದೆ. 19 ಟೆಂಡರ್ ಪರಿಶೀಲನೆಯಲ್ಲಿವೆ. 18 ಟೆಂಡರ್ಗಳಿಗೆ ಕಾರ್ಯಾದೇಶ ನೀಡಲಾಗಿದೆ. 7 ಟೆಂಡರ್ ಕಾಮಗಾರಿ ಮುಕ್ತಾಯಗೊಂಡಿದೆ. 53 ಟೆಂಡರ್ ಕರೆಯಲು ಬಾಕಿ ಇವೆ, ಸಂಪುಟ ಇವುಗಳನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದು, ಅನುಮೋದನೆ ಕೊಟ್ಟಿರುವುದಕ್ಕೆಲ್ಲಾ ಟೆಂಡರ್ ಕರೆದು ಕೆಲಸ ಆರಂಭಿಸಲು ಸಿಎಂ ಸೂಚನೆ ನೀಡಿದರು ಎಂದು ತಿಳಿಸಿದರು.
ಆರೋಗ್ಯ ಇಲಾಖೆಯಡಿ ಅರೆ ವೈದ್ಯಕೀಯ ಸಿಬ್ಬಂದಿ ಹಾಗೂ ವಾಹನ ಚಾಲಕರ ವಿಲೀನ ಕುರಿತು ಕೆಎಟಿ ತೀರ್ಪಿನಂತೆ ಇಬ್ಬರು ಅಧಿಕಾರಿಗಳ ಹುದ್ದೆ ವಿಲೀನಗೊಳಿಸಲು ಸಂಪುಟ ಒಪ್ಪಿದೆ. ಕಾರ್ಮಿಕ ಇಲಾಖೆಯಡಿ ವೈದ್ಯಕೀಯ ಗುತ್ತಿಗೆ ಇಲಾಖೆ ಸೇವಾ ಸಕ್ರಮಾತಿಗೆ ಚರ್ಚೆಯಾಗಿ ಮುಂದೂಡಿಕೆ ಮಾಡಲಾಗಿದೆ. ಕಾನೂನು ಅಭಿಪ್ರಾಯ ಪಡೆಯಲು ನಿರ್ಧರಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ಕೋರ್ಟ್ ಕಟ್ಟಡ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.