ಬೆಂಗಳೂರು:"ಅಡಿಕೆ ಬೆಳೆಯ ಎಲೆಚುಕ್ಕಿ ರೋಗ ಮತ್ತು ಹಳದಿ ರೋಗಕ್ಕೆ ಸರ್ಕಾರದಿಂದ ವಿಶೇಷ ಪರಿಹಾರದ ಪ್ಯಾಕೇಜ್ ಘೋಷಿಸಲು ಸಾಧ್ಯವಿಲ್ಲ. ಪರಿಹಾರ ಕೊಡುವ ವ್ಯವಸ್ಥೆ ಸರ್ಕಾರದಲ್ಲಿ ಇಲ್ಲದ ಕಾರಣ ಕೇಂದ್ರಕ್ಕೆ ಪರಿಹಾರ ಕೊಡುವ ಬಗ್ಗೆ ಪತ್ರ ಬರೆದಿದ್ದೇವೆ" ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿದರು. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿಂದು ಅಡಿಕೆ ಬೆಳೆಯ ಎಲೆಚುಕ್ಕಿ ರೋಗ ಮತ್ತು ಹಳದಿ ರೋಗಕ್ಕೆ ಸರ್ಕಾರದಿಂದ ವಿಶೇಷ ಪರಿಹಾರದ ಪ್ಯಾಕೇಜ್ ಘೋಷಣೆ ಮಾಡಬೇಕು ಎಂಬ ಬಿಜೆಪಿ ಸದಸ್ಯ ಪ್ರತಾಪ್ ಸಿಂಹ ನಾಯಕ್ ಪ್ರಶ್ನೆಗೆ ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಪರವಾಗಿ ಕೃಷಿ ಸಚಿವರು ಉತ್ತರಿಸಿದರು.
"7 ರಿಂದ 8 ಜಿಲ್ಲೆಗಳಲ್ಲಿ ಎಲೆಚುಕ್ಕಿ, ಹಳದಿ ರೋಗ ಸಮಸ್ಯೆ ಇರುವುದು ಸತ್ಯ. ಸಮಸ್ಯೆಗಳ ಕುರಿತು ಚರ್ಚಿಸಿ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. 2.50 ಕೋಟಿ ಹಣ ಹಳದಿ ರೋಗ ನಿಯಂತ್ರಣಕ್ಕೆ ವಿನಿಯೋಗಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮವಹಿಸಲಾಗಿದೆ. ಎಲೆಚುಕ್ಕಿ ರೋಗದಿಂದ 53,977 ಹೆಕ್ಟೇರ್ ಪ್ರದೇಶ ಹಾನಿಗಿಡಾಗಿದೆ. 11,0181.13 ಲಕ್ಷ ಆರ್ಥಿಕ ನಷ್ಟ ಉಂಟಾಗಿದೆ. ಹಳದಿ ರೋಗದಿಂದ 13,767 ಹೆಕ್ಟೇರ್ ಪ್ರದೇಶ ಹಾನಿಯಾಗಿದೆ. 56,233.25 ಲಕ್ಷ ಆರ್ಥಿಕ ನಷ್ಟವಾಗಿದೆ. ಅಡಿಕೆ ಬೆಳೆಗಾರರಿಗೆ ಎಲೆಚುಕ್ಕಿ ನಿಯಂತ್ರಣಕ್ಕೆ ಪ್ರತಿ ಹೆಕ್ಟೇರ್ಗೆ 4 ಸಾವಿರಗಳಂತೆ 1.5 ಹೆಕ್ಟೇರ್‌ವರೆಗೆ 6 ಸಾವಿರ ಮೊತ್ತದ ಔಷಧಿ ನಿಡಿಲಾಗುತ್ತಿದೆ. ಶಿವಮೊಗ್ಗ ತೋಟಗಾರಿಕೆ ವಿವಿಯಿಂದ ನಿಯಂತ್ರಣ ಸಂಬಂಧ ಸಂಶೋಧನೆಗಳನ್ನು ಮಾಡಿಸಲಾಗುತ್ತಿದೆ. ಪರಿಹಾರ ಕೊಡುವ ವ್ಯವಸ್ಥೆ ಸರ್ಕಾರದಲ್ಲಿಲ್ಲ. ಕೇಂದ್ರಕ್ಕೆ ಪರಿಹಾರ ಕೊಡುವ ಬಗ್ಗೆ ಪತ್ರ ಬರೆದಿದ್ದೇವೆ" ಎಂದು ಮಾಹಿತಿ ನೀಡಿದರು.
ನಗರಾಭಿವೃದ್ಧಿ ಇಲಾಖೆಯಲ್ಲಿ ಅಕ್ರಮವಾಗಿದ್ದರೆ ತನಿಖೆ:ನಗರಾಭಿವೃದ್ಧಿ ಇಲಾಖೆಯಲ್ಲಿ ಯಾವುದಾದರೂ ಅಕ್ರಮ ನಡೆದಿರುವ ಬಗ್ಗೆ ಮಾಹಿತಿ ಕೊಟ್ಟರೆ ಸೂಕ್ತ ತನಿಖೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ತಿಳಿಸಿದರು. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಎಸ್.ವಿ.ಸಂಕನೂರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಗದಗ-ಬೆಟಗೇರಿ ಅವಳಿ ನಗರದ 1ರಿಂದ 35 ವಾರ್ಡ್ಗಳ ಪೈಕಿ 8 ವಾರ್ಡ್ಗೆ ಸರಾಸರಿ 2 ದಿನಗಳಿಗೊಮ್ಮೆ ಉಳಿದ 27 ವಾರ್ಡ್ಗೆ 7ರಿಂದ 8 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ ಎಂದರು.