ಬೆಂಗಳೂರು: ''ಮುಡಾ ಪ್ರಕರಣದಲ್ಲಿ ಇ.ಡಿಯವರ (ಜಾರಿ ನಿರ್ದೇಶನಾಲಯ) ಪತ್ರಿಕಾ ಪ್ರಕಟಣೆಯು ರಾಜಕೀಯ ಪ್ರೇರಿತವಾಗಿದೆ'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ''ಇ.ಡಿಯವರ ಪತ್ರಿಕಾ ಪ್ರಕಟಣೆಗೂ, ನನಗೂ ಸಂಬಂಧವಿಲ್ಲ. ಬಿಜೆಪಿಯವರು ಈ ಪತ್ರಿಕಾ ಪ್ರಕಟಣೆಯನ್ನು ಅನಗತ್ಯವಾಗಿ ಇ.ಡಿ ಮೂಲಕ ಬಿಡುಗಡೆ ಮಾಡಿಸಿದ್ದಾರೆ'' ಎಂದು ದೂರಿದರು.
ಹಣ ದುರುಪಯೋಗದ ಪ್ರಶ್ನೆ ಇಲ್ಲ : ಮುಡಾ ಮತ್ತು ವಾಲ್ಮೀಕಿ ನಿಗಮದ ಹಗರಣದ ಪ್ರತಿಪಕ್ಷಗಳ ಆರೋಪ ಹಾಗೂ ರಾಜ್ಯದ ತೆರಿಗೆ ಹಣದಲ್ಲಿ ನಾಳಿನ ಸಮಾರಂಭ ನಡೆಸುತ್ತಿರುವ ಬಗ್ಗೆ ಆರೋಪಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ''ಹಣ ದುರುಪಯೋಗ ಆಗಿರುವ ಪ್ರಶ್ನೆಯೇ ಇಲ್ಲ'' ಎಂದು ತಿಳಿಸಿದರು.
ಇದನ್ನೂ ಓದಿ: ಹಿಂದೆ ಧರ್ಮಸಿಂಗ್, ಸಿದ್ದರಾಮಯ್ಯ ಕಾಲದಲ್ಲೂ ತ್ಯಾಗ ಮಾಡಿದ್ದೇನೆ: ಡಿಸಿಎಂ ಡಿಕೆಶಿ ತ್ಯಾಗದ ಮಾತು
ತಪ್ಪಿತಸ್ಥರ ವಿರುದ್ಧ ಕ್ರಮ: ವಿಜಯಪುರದಲ್ಲಿ ಕಾರ್ಮಿಕರ ಮೇಲೆ ಹಲ್ಲೆ ನಡೆದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ''ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ‍್ಳಲಾಗುವುದು'' ಎಂದರು.
ಮೈಕ್ರೋ ಫೈನಾನ್ಸ್ ದಂಧೆ- ಕಾನೂನು ರೀತ್ಯ ಕ್ರಮ: ಮೈಸೂರು ಚಾಮರಾಜನಗರ ಜಿಲ್ಲೆಗಳ ಗ್ರಾಮೀಣ ಭಾಗದಲ್ಲಿ ಮೈಕ್ರೋ ಫೈನಾನ್ಸ್ ದಂಧೆ ಹೆಚ್ಚಿದ್ದು, ಜನರಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ಮಾತನಾಡಿ, ''ಜನರಿಗೆ ಕಿರುಕುಳ ನೀಡುವ ಮೈಕ್ರೋ ಫೈನಾನ್ಸ್ ದಂಧೆ ನಡೆಸುತ್ತಿರುವ ಸಂಸ್ಥೆಯ ವಿರುದ್ಧ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು'' ಎಂದು ಸಿಎಂ ಹೇಳಿದರು.
ಇದನ್ನೂ ಓದಿ: ಗೋಹತ್ಯೆ ಪ್ರಕರಣ ಹೆಚ್ಚಳವನ್ನು ಗಂಭೀರವಾಗಿ ಪರಿಗಣಿಸಿದ್ದು, ಕ್ರಮಕ್ಕೆ ಸೂಚನೆ ನೀಡಲಾಗಿದೆ: ಸಚಿವ ಜಿ.ಪರಮೇಶ್ವರ್