ಮಂಡ್ಯ:''ಮಂಡ್ಯ ಜಿಲ್ಲೆಯಲ್ಲಿ ಒಂದಷ್ಟು ನಾಯಕರು ಕಾಂಗ್ರೆಸ್ ಸೇರುತ್ತಾರೆ ಅಂತಾ ನಾನು ಮೊದಲೇ ಹೇಳಿದ್ದೆ. ಮುಂದಿನ 10 ದಿನಗಳ ಒಳಗೆ ಇದರ ಚಿತ್ರಣ ಗೊತ್ತಾಗುತ್ತದೆ. ಕಾಂಗ್ರೆಸ್‌ಗೆ ಬರುವವರು ಕಂಡಿಷನ್ ಹಾಕಿಲ್ಲ, ನಾವೂ ಹಾಕಿಲ್ಲ. ನಾರಾಯಣಗೌಡ ಪಕ್ಷಕ್ಕೆ ಬರ್ತಾರೆ ಅಂತಾನೂ ಹೇಳಲ್ಲ, ಬೇರೆಯವರು ಬರುವುದಿಲ್ಲ ಎಂದೂ ಹೇಳುವುದಿಲ್ಲ'' ಎಂದು ಸಚಿವ ಎನ್.ಚಲುವರಾಯಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಅವರು ಸಿಎಂ ಸಿದ್ದರಾಮಯ್ಯರ ಭೇಟಿ ಮಾಡಿರುವ ಕುರಿತಂತೆ ಮಾಧ್ಯಮದವರ ಪ್ರಶ್ನೆಗೆ ಸಚಿವ ಎನ್.ಚಲುವರಾಯಸ್ವಾಮಿ ಮಂಡ್ಯದಲ್ಲಿ ಗುರುವಾರ ಉತ್ತರಿಸಿದ್ದಾರೆ. ''ಜೆಡಿಎಸ್‌ನಿಂದಲೂ ಕಾಂಗ್ರೆಸ್‌ಗೆ ಕೆಲವರು ಬರುತ್ತಾರೆ. ಜೆಡಿಎಸ್ನಲ್ಲಿ ವಾತಾವರಣ ಸರಿ ಇಲ್ಲ ಎಂದು ನಾರಾಯಣಗೌಡ ಬಿಜೆಪಿಗೆ ಹೋದರು. ಈಗ ಬಿಜೆಪಿ-ಜೆಡಿಎಸ್ ಒಂದಾದ ಮೇಲೆ ನಾರಾಯಣಗೌಡ ಅಲ್ಲಿ ಹೇಗೆ ಇರುತ್ತಾರೆ'' ಎಂದು ಪ್ರಶ್ನಿಸಿದರು.
''ಮಂಡ್ಯದಲ್ಲಿ ಬಿಜೆಪಿಗಿಂತ ಜೆಡಿಎಸ್‌ಗೆ ಪ್ರಾಮುಖ್ಯತೆ. ಅದಕ್ಕೆ ಬಿಜೆಪಿಯವರಿಗೆ ಅಸಮಾಧಾನ ಆಗುತ್ತಿದೆ. ನಾವು ಅಪರೇಷನ್ ಹಸ್ತ ಮಾಡಿಲ್ಲ. ಎಲ್ಲರೂ ಅವರ ಪಕ್ಷದಲ್ಲಿ ಅಸಮಾಧಾನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೇರುತ್ತಿದ್ದಾರೆ. ನಾರಾಯಣಗೌಡ ಅವರಿಗೆ ಕಾಂಗ್ರೆಸ್‌ಗೆ ಬರಲು ಆಸಕ್ತಿ ಇದೆ'' ಎಂದು ಚಲುವರಾಯಸ್ವಾಮಿ ಹೇಳಿದರು. ಇತ್ತೀಚೆಗೆ ಮಾಜಿ ಸಚಿವ ನಾರಾಯಣಗೌಡ ಹಾಗೂ ಸಿಎಂ ಸಿದ್ದರಾಮಯ್ಯ ಒಟ್ಟಿಗೆ ಇರುವ ಫೋಟೋ ಒಂದು ವೈರಲ್ ಆಗಿತ್ತು.