ಹುಬ್ಬಳ್ಳಿ (ಧಾರವಾಡ):ಸಿದ್ದರಾಮಯ್ಯ ತಮ್ಮ ಮುಖ್ಯಮಂತ್ರಿ ಸ್ಥಾನವನ್ನು ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಬಿಟ್ಟುಕೊಡಬೇಕು ಎಂಬುದರ ಬಗ್ಗೆ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಪಕ್ಷದ ನಾಯಕರು, ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಕುಳಿತು ತೀರ್ಮಾನ ಮಾಡುತ್ತಾರೆ. ಯಾವುದೇ ಗೊಂದಲವಿಲ್ಲ, ಹಾಗಾಗಿ ಈ ವಿಚಾರದಲ್ಲಿ ಬಾಯಿ ತೂರಿಸೋ ಅವಶ್ಯಕತೆಯೇನಿದೆ? ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿದರು.
ಕಳೆದ ದಿನ ನಗರದಲ್ಲಿ ಮಾತನಾಡಿದ ಅವರು, ಸ್ವಾಮೀಜಿ ತಮ್ಮ ಸಂತೋಷಕ್ಕೆ ಹೇಳಿದ್ದಾರೆ. ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಆಗೋ ಕಾಲ ಬಂದಾಗ ಆಗುತ್ತದೆ. ಪಕ್ಷ ನಿರ್ಧರಿಸುತ್ತದೆ. ಪಕ್ಷ ಅಧಿಕಾರಕ್ಕೆ ಬರಲು ವರಿಷ್ಠರು ಸಹಾಯ ಮಾಡಿದ್ದಾರೆ. ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ಅವರ ಉದ್ದೇಶ ಒಳ್ಳೆ ಆಡಳಿತ ಕೊಡಬೇಕು ಅನ್ನೋದು. ಸ್ವಾಮೀಜಿಗಳು ಅವರ ಅಭಿಪ್ರಾಯ ಹೇಳಿದ್ದಾರೆ. ನಮಲ್ಲಿ ಅಂತಹ ಗೊಂದಲ ಇಲ್ಲ. ಪಕ್ಷದ ನಾಯಕರು, ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಕುಳಿತು ತೀರ್ಮಾನ ಮಾಡುತ್ತಾರೆ. ನಾವು ಟಿವಿಯವರಿಗೆ ಆಹಾರ ಆಗೋ ಬದಲು ಸುಮ್ಮನಿದ್ದರೆ ಒಳ್ಳೆಯದು. ಸದ್ಯಕ್ಕೆ ಯಾವುದೇ ಗೊಂದಲಗಳಿಲ್ಲ ಎಂದರು.
ಚನ್ನಪಟ್ಟಣದಲ್ಲಿ (ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ) ಡಿ.ಕೆ ಶಿವಕುಮಾರ್ ಸ್ಪರ್ಧೆ ಮಾಡೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನನಗೂ ರಿಪೋರ್ಟ್ ಕೇಳಿದ್ದಾರೆ. ನಾನಿನ್ನೂ ಸಭೆ ನಡೆಸಿಲ್ಲ. ಮೀಟಿಂಗ್ ಮಾಡಿ ವರದಿ ಕೊಡುತ್ತೇನೆ. ಆ ಮೇಲೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ತೀರ್ಮಾನ ಮಾಡುತ್ತಾರೆ. ಸೋತಿದ್ದೇವೆ, ಗೆಲ್ಲಬೇಕು ಅನ್ನೋದಿದೆ. ದೊಡ್ಡವರ ಸೀಟ್ ಅದು, ಅವರು ಕೇಂದ್ರದಲ್ಲಿ ಮಂತ್ರಿ ಆಗಿದ್ದಾರೆ. ನಾವು ಅವರ ವಿರುದ್ಧ ತೊಡೆ ತಟ್ಟೋಕೆ ಆಗುತ್ತಾ?. ಜನರ ಮಧ್ಯೆ ಹೋಗುತ್ತೇವೆ. ಏನಾಗುತ್ತದೆಯೆಂಬುದನ್ನು ನೋಡೋಣ.