ಬೆಂಗಳೂರು: ರಾಜ್ಯದಲ್ಲಿ ಹಲವಾರು ವರ್ಷಗಳಿಂದ ಅನುಷ್ಠಾನಕ್ಕೆ ತರಲಾಗದೇ ನೆನೆಗುದಿಗೆ ಬಿದ್ದಿರುವ ಮೇಕೆದಾಟು, ಮಹದಾಯಿ, ಭದ್ರಾ ಮೇಲ್ದಂಡೆ ಯೋಜನೆಗಳೂ ಸೇರಿದಂತೆ ಹಲವಾರು ನೀರಾವರಿ ಯೋಜನೆಗಳಿಗೆ ಕೇಂದ್ರ ಸರಕಾರದ ಒಪ್ಪಿಗೆ ಪಡೆಯುವ ಸಂಬಂಧ ಜಲಸಂಪನ್ಮೂಲ ಸಚಿವರಾಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ಕೇಂದ್ರ ಜಲಶಕ್ತಿ ಸಚಿವರ ಜೊತೆ ಮಹತ್ವದ ಮಾತುಕತೆ ನಡೆಸಲಿದ್ದಾರೆ.
ದೆಹಲಿಯಲ್ಲಿ ಇಂದು ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡುವ ಕುರಿತು ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿಗೆ ಪ್ರಯಾಣ ಬೆಳೆಸಿದ್ದು, ಬೆಳಗ್ಗೆ 11 ಗಂಟೆಗೆ ಸಮಯ ನಿಗದಿಯಾಗಿದೆ. ರಾಜ್ಯದ ಜಲ ಸಂಪನ್ಮೂಲ ಇಲಾಖೆ ಹಿರಿಯ ಅಧಿಕಾರಿಗಳು ನಿನ್ನೆಯೇ ದೆಹಲಿಗೆ ತೆರಳಿದ್ದು ಕೇಂದ್ರ ಜಲಶಕ್ತಿ ಸಚಿವರ ಭೇಟಿ ಸಂದರ್ಭದಲ್ಲಿ ನೀರಾವರಿ ಯೋಜನೆಗಳ ಬಗ್ಗೆ ಅಗತ್ಯ ಮಾಹಿತಿ ನೀಡುವ ಬಗ್ಗೆ ಸಿದ್ಧತೆ ಮಾಡಿಕೊಂಡಿದ್ದಾರೆ.
ರಾಜಸ್ಥಾನದ ಉದಯಪುರದಲ್ಲಿ ಇತ್ತೀಚೆಗೆ ನಡೆದ ಅಖಿಲ ಭಾರತ ನೀರಾವರಿ ಸಚಿವರ ಸಮ್ಮೇಳನದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕೇಂದ್ರ ಜಲ ಶಕ್ತಿ ಸಚಿವ ಸಿ.ಆರ್. ಪಾಟೀಲ್ ಬಳಿ ರಾಜ್ಯದ ನೀರಾವರಿ ಸಮಸ್ಯೆಗಳನ್ನು ಪ್ರಸ್ತಾಪಿಸಿ ಈ ಬಗ್ಗೆ ಚರ್ಚೆಗೆ ಕಾಲಾವಕಾಶ ಕೋರಿದ್ದರು. ಅದರಂತೆ ಕೇಂದ್ರ ಸಚಿವರು ಫೆ.25 ರ ಬೆಳಗ್ಗೆ 11 ಗಂಟೆಗೆ ಭೇಟಿಗೆ ಸಮಯ ನೀಡಿದ್ದಾರೆ.
ಮೇಕೆದಾಟು ಯೋಜನೆ: ಕೇಂದ್ರ ಜಲಶಕ್ತಿ ಸಚಿವರ ಭೇಟಿ ಸಂದರ್ಭದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಸಮತೋಲನ ಜಲಾಶಯ ನಿರ್ಮಿಸುವ ಮೇಕೆದಾಟು ಯೋಜನೆಗೆ ಕೇಂದ್ರ ಸರಕಾರದ ಅನುಮೋದನೆ ಪಡೆಯುವ ಬಗ್ಗೆ ಪ್ರಮುಖವಾಗಿ ಪ್ರಸ್ಥಾಪಿಸಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ಮೇಕೆದಾಟು ಯೋಜನೆಯು ರಾಮನಗರ ಜಿಲ್ಲೆಯ ಕನಕಪುರ ಬಳಿ ಕಾವೇರಿ ನದಿಗೆ ಸಮತೋಲನ ಜಲಾಶಯ ನಿರ್ಮಿಸುವುದಾಗಿದೆ. ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದಿಸುವ ಉದ್ದೇಶ ಹೊಂದಲಾಗಿದೆ. ಮೇಕೆದಾಟು ಜಲಾಶಯದಲ್ಲಿ ಸುಮಾರು 67 ಟಿಎಂಸಿ ನೀರು ಸಂಗ್ರಹಿಸಿ ಬೆಂಗಳೂರು ನಗರಕ್ಕೆ 4.75 ಟಿಎಂಸಿ ಯಷ್ಟು ಕುಡಿಯುವ ನೀರು ಸರಬರಾಜು ಮಾಡುವ ಯೋಚನೆ ಇದೆ. ಹಾಗೆಯೇ ಮಳೆಗಾಲದಲ್ಲಿ ಕಾವೇರಿ ಜಲಾಶಯ ತುಂಬಿ ಸಮುದ್ರಕ್ಕೆ ವ್ಯರ್ಥವಾಗಿ ಹರಿಯುವ ನೀರನ್ನು ಮೇಕೆದಾಟು ಜಲಾಶಯದಲ್ಲಿ ಸಂಗ್ರಹಿಸಿ ಸಂಕಷ್ಟಕಾಲದಲ್ಲಿ ತಮಿಳುನಾಡಿಗೆ ಕಾವೇರಿ ನೀರು ಬಿಡಲೂ ಈ ಯೋಜನೆ ಸಹಾಯಕವಾಗಲಿದೆ.
ಸುಮಾರು 12 ಸಾವಿರ ಎಕರೆ ಭೂಮಿ ಮೇಕೆದಾಟು ಯೋಜನೆಗೆ ಅಗತ್ಯವಾಗಿದ್ದು 9 ಸಾವಿರ ಕೋಟಿ ರೂಪಾಯಿ ವೆಚ್ಚದ ಯೋಜನೆ ಇದಾಗಿದೆ. ಮೇಕೆದಾಟು ಯೋಜನೆ ಬಗ್ಗೆ ರಾಜ್ಯ ಸರಕಾರವು ಈಗಾಗಲೇ ವಿವರವಾದ ಯೋಜನಾ ವರದಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿದ್ದು ಅನುಮತಿಗಾಗಿ ಕಾಯುತ್ತಿದೆ. ಕೇಂದ್ರ ಸರಕಾರವು ಯೋಜನೆಯ ಕಡತವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಿಂದ ಕೇಂದ್ರ ಜಲ ಆಯೋಗದ ಚರ್ಚೆಗಾಗಿ ಕಳಿಸಿದೆ.
ಮೇಕೆದಾಟು ಯೋಜನೆಗೆ ಹೆಚ್ಚಿನ ಅರಣ್ಯ ಪ್ರದೇಶ ಅಗತ್ಯವಿರುವುದರಿಂದ ಕೇಂದ್ರ ಸರಕಾರದ ಅರಣ್ಯ ಮತ್ತು ಪರಿಸರ ಇಲಾಖೆ ಅನುಮತಿ ಪಡೆಯಬೇಕಾಗಿದೆ. ಕೇಂದ್ರ ಜಲಶಕ್ತಿ ಇಲಾಖೆ ಮತ್ತು ಅರಣ್ಯ ಮತ್ತು ಪರಿಸರ ಇಲಾಖೆ ಮೇಕೆದಾಟು ಯೋಜನೆಗೆ ಗ್ರೀನ್ ಸಿಗ್ನಲ್ ತೋರಿದ ನಂತರ ಯೋಜನೆ ವೇಗ ಪಡೆಯಲಿದೆ.