ಬೆಂಗಳೂರು: ಫೇಕ್ಬುಕ್ ಲೈವ್ ಮಾಡಿ ಅತ್ತೆ ಮುಂದೆಯೇ ಹೆಂಡತಿಯನ್ನು ಚಾಕುವಿನಿಂದ ಹತ್ಯೆಗೈದು ಪರಾರಿಯಾಗಿದ್ದ ಆರೋಪಿ ಬಂಧನ ಭೀತಿಯಿಂದ ಮನೆಯ ಟೆರೇಸ್ನಿಂದ ಜಿಗಿದು ಸಾವನ್ನಪ್ಪಿದ್ದಾನೆ. ತಬರೇಜ್ ಪಾಷಾ ಸಾವನ್ನಪ್ಪಿದ ಆರೋಪಿ.
"ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆಗಸ್ಟ್ 2ರಂದು ಚಾಮರಾಜಪೇಟೆಯಲ್ಲಿರುವ ಪತ್ನಿ ಫಾತೀಮಾಳ ಮನೆಗೆ ತೆರಳಿ ಅತ್ತೆ ಮುಂದೆಯೇ ಮನಬಂದಂತೆ ಚುಚ್ಚಿ ಹತ್ಯೆ ಮಾಡಿದ್ದ. ದುಷ್ಕೃತ್ಯದ ದೃಶ್ಯವನ್ನು ಫೇಸ್ಬುಕ್ ಲೈವ್ನಲ್ಲಿ ಸೆರೆಹಿಡಿದು ಪರಾರಿಯಾಗಿದ್ದ. ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದರು. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಕೋಲಾರಕ್ಕೆ ತೆರಳಿದ್ದ ಆರೋಪಿ ನಾಲ್ಕು ದಿನ ಮಸೀದಿಯೊಂದರಲ್ಲಿ ಆಶ್ರಯ ಪಡೆದು ಸೋಮವಾರ ಆತನ ಚಿಕ್ಕಮ್ಮನ ಮನೆಗೆ ಬಂದಿದ್ದ. ಕೋಲಾರದಲ್ಲಿ ಆರೋಪಿ ಇರುವುದರ ಮಾಹಿತಿ ಸಂಗ್ರಹಿಸಿದ ನಮ್ಮ ತಂಡ ಸ್ಥಳಕ್ಕೆ ತೆರಳಿತ್ತು. ಬಂಧನ ಭೀತಿಯಿಂದ ಪಾರಾಗಲು ಮನೆಯ ಟೆರೇಸ್ನಿಂದ ಜಿಗಿದ ಆರೋಪಿ ಸ್ಥಳದಲ್ಲೇ ಅಸ್ವಸ್ಥನಾಗಿದ್ದಾನೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ" ಎಂದು ಪೊಲೀಸರು ತಿಳಿಸಿದ್ದಾರೆ.