ಬೆಳಗಾವಿ : ಹಿಂದವಿ ಸ್ವರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರಿಗೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ವಿಶೇಷ ಗೌರವವಿದೆ. ಅವರ ಪರಾಕ್ರಮ, ಸಾಹಸವನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಒಂದಿಲ್ಲೊಂದು ಕಾರ್ಯಕ್ರಮಗಳು ಇಲ್ಲಿ ನಡೆಯುತ್ತಲೇ ಇರುತ್ತವೆ. ಈಗ ಹಳೆಯ ಕಾಲದ ಶಸ್ತ್ರಾಸ್ತ್ರಗಳ ಪ್ರದರ್ಶನವು ಶಿವಾಜಿ ಚರಿತ್ರೆ ಕಟ್ಟಿಕೊಡುತ್ತಿದೆ. ಹೇಗಿದೆ ಪ್ರದರ್ಶನ..? ಯಾವೆಲ್ಲಾ ಶಸ್ತ್ರಗಳಿವೆ..? ಎಂಬುದರ ಕುರಿತು ಈಟಿವಿ ಭಾರತದ ವಿಶೇಷ ವರದಿ ಇಲ್ಲಿದೆ.
![EXHIBITION OF WEAPONS OF SHIVAJI PERIOD IN BELAGAVI](https://etvbharatimages.akamaized.net/etvbharat/prod-images/12-02-2025/23524878_abhi.jpg)
ಛತ್ರಪತಿ ಶಿವಾಜಿ ಕಾಲದ ಕತ್ತಿ-ಗುರಾಣಿಗಳು, ಸೇನಾ ಹಡಗುಗಳ ಮಾದರಿಗಳು, ಅಂಚೆ ಸ್ಟಾಂಪ್ಗಳು ಮತ್ತು ನಾಣ್ಯಗಳು, ರಂಗೋಲಿಯಲ್ಲಿ ಅರಳಿದ ಸುಂದರ ಚಿತ್ರಗಳು ಮರಾಠಾ ಸಾಮ್ರಾಜ್ಯದ ವೈಭವವನ್ನು ಅನಾವರಣಗೊಳಿಸಿವೆ.
ಬೆಳಗಾವಿಯ ಮರಾಠಾ ಮಂದಿರದಲ್ಲಿ ರೋಟರಿ ಕ್ಲಬ್ ಬೆಳಗಾವಿ ಸೌತ್ ವತಿಯಿಂದ ಫೆ.11-14ರ ವರೆಗೆ 4 ದಿನಗಳ ಕಾಲ "ಶಿವಕಾಲೀನ (ಶಿವಾಜಿ ಕಾಲದ) ಶಸ್ತ್ರ ಪ್ರದರ್ಶನ" ಏರ್ಪಡಿಸಲಾಗಿದೆ. ಮೊದಲ ದಿನವೇ ಸಾರ್ವಜನಿಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಮೊದಲಿಗೆ ಪ್ರದರ್ಶನಕ್ಕೆ ಕಾಲಿಡುತ್ತಿದ್ದಂತೆ ರಂಗೋಲಿಯಲ್ಲಿ ಬಿಡಿಸಿರುವ ಶಿವಾಜಿ ಮಹಾರಾಜ, ಸಂಭಾಜಿ ಮಹಾರಾಜ, ಸರ ಸೇನಾಧಿಪತಿ ತಾನಾಜಿ ಮಾಲುಸರೆ, ಬಾಜಿಪ್ರಭು ದೇಶಪಾಂಡೆ, ಬಾಲ ಶಿವಾಜಿ, ಮಹಾರಾಣಿ ಜೀಜಾಮಾತಾ ಸೇರಿ ಮತ್ತಿತರ ಚಿತ್ರಗಳು ಕಣ್ಮನ ಸೆಳೆಯುತ್ತಿವೆ. ನಾಶಿಕ್ ಸಾಯಿ ಆರ್ಟ್ಸ್ ಕಲಾವಿದರು ಈ ಚಿತ್ರ ಬಿಡಿಸಲು ಸುಮಾರು 40 ಗಂಟೆ ಸಮಯ ತೆಗೆದುಕೊಂಡಿದ್ದಾರೆ.
![EXHIBITION OF WEAPONS OF SHIVAJI PERIOD IN BELAGAVI](https://etvbharatimages.akamaized.net/etvbharat/prod-images/12-02-2025/23524878_shiva.jpg)
500ಕ್ಕೂ ಅಧಿಕ ಶಸ್ತ್ರಗಳು : ಮುಂದೆ ಹೋಗುತ್ತಿದ್ದಂತೆ ಶಿವಾಜಿ ಸಾಮ್ರಾಜ್ಯದ ಶಸ್ತ್ರಾಗಾರಕ್ಕೆ ಪ್ರವೇಶಿಸಿದ ಅನುಭವ ಆಗುತ್ತದೆ. ವಿವಿಧ ಪ್ರಕಾರದ ಖಡ್ಗ(ತಲವಾರ್), ಬಿಲ್ಲು, ತ್ರಿಶೂಲ್, ಬಿಲ್ಲು-ಬಾಣ, ಕಟಾರ್, ಡಾಲ್, ತಲವಾರ್ಗಳು, ಕೊಡ್ಲಿ, ತೋಪು, ಹ್ಯಾಂಡ್ ಪಿಸ್ತೂಲ್, ಹುಲಿ ಉಗುರು, ಭರ್ಜಿಗಳು, ಈಟಿಗಳು, ರಕ್ಷಾ ಕವಚ, ತೋಪು, ಹ್ಯಾಂಡ್ ಗನ್ ಸೇರಿ ಒಂದಾ ಎರಡಾ..? ವಿಜಯನಗರ, ಬ್ರಿಟಿಷ್, ಮೊಘಲರ, ಶಿವಾಜಿ ಮಹಾರಾಜರ ಕಾಲದಲ್ಲಿ ಸೈನಿಕರು, ಸೇನಾಧಿಪತಿಗಳು ಬಳಸಿದ ನೈಜ ಶಸ್ತ್ರಗಳು ಇಲ್ಲಿವೆ. ಮಹಾರಾಷ್ಟ್ರದ ಪುಣೆಯಿಂದ ತರಿಸಿರುವ 500ಕ್ಕೂ ಅಧಿಕ ಆಯುಧಗಳನ್ನು 62 ಪ್ರೇಮ್ಗಳಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಇನ್ನು, ಡಚ್ಚ ಕಲಾವಿದನ ಕುಂಚದಲ್ಲಿ ಅರಳಿದ ಶಿವಾಜಿ ಮಹಾರಾಜರ ಹಳೆಯ ಭಾವಚಿತ್ರ ಈ ಪ್ರದರ್ಶನದ ಕೇಂದ್ರಬಿಂದುವಾಗಿದೆ.
![EXHIBITION OF WEAPONS OF SHIVAJI PERIOD IN BELAGAVI](https://etvbharatimages.akamaized.net/etvbharat/prod-images/12-02-2025/23524878_hgfdas.jpg)
ಸೇನಾ ಹಡಗುಗಳ ಮಾದರಿಗಳು : ಅದೇ ರೀತಿ ಸತಾರಾದಿಂದ ಸೇನಾ ಹಡಗುಗಳ ಮಾದರಿ ತರಿಸಲಾಗಿದೆ. ಶಿವಾಜಿ ಬಳಸಿದ ಗಲಬತ್, ಗುರಾಬ್, ಪಾಲ್ ಹಡಗುಗಳಿವೆ. ಚೋಲಾ, ಪೋರ್ಚುಗೀಸ್, ಬ್ರಿಟಿಷ್ ಕಾಲದ ಸೇನಾ ಹಡಗು, ಅದೇ ರೀತಿ ಈಗಿನ ಭಾರತೀಯ ನೌಕಾದಳಕ್ಕೆ ಸೇರಿದ ಐಎನ್ಎಸ್ ವಿಕ್ರಾಂತ, ಐಎನ್ಎಸ್ ವಿಶಾಖಪಟ್ಟಣಂ ಮಾದರಿಗಳನ್ನು ಜನರು ಪ್ರದರ್ಶನದಲ್ಲಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಒಟ್ಟು 640 ಮಾದರಿಯ ನೌಕಾಸೇನೆ ಹಡಗುಗಳ ಮಾದರಿಗಳನ್ನು ಸಿದ್ಧಪಡಿಸಿರುವುದು ವಿಶೇಷ.
![EXHIBITION OF WEAPONS OF SHIVAJI PERIOD IN BELAGAVI](https://etvbharatimages.akamaized.net/etvbharat/prod-images/12-02-2025/23524878_hjtrsd.jpg)
ಹಳೆ ಕಾಲದ ನಾಣ್ಯಗಳು : ಪ್ರದರ್ಶನ ನಡೆಯುತ್ತಿರುವ ಸ್ಥಳದ ಮಧ್ಯಭಾಗದಲ್ಲಿ ಸಿಂಹಾಸನದ ಮೇಲೆ ಕುಳಿತು ರಾಜ್ಯಭಾರ ನಡೆಸುತ್ತಿರುವ ಶಿವಾಜಿ ಮಹಾರಾಜರ ಸುಂದರ ಪ್ರತಿಮೆ ವೀಕ್ಷಕರನ್ನು ಸೆಳೆಯುತ್ತಿದ್ದು, ಜನ ಭಕ್ತಿ ಭಾವದಿಂದ ಕೈ ಮುಗಿಯುತ್ತಿದ್ದಾರೆ. ಅದರ ಮುಂಭಾಗದಲ್ಲಿ ಶಿವಾಜಿ ಬಳಸಿದ ನಾಣ್ಯಗಳು ಹಾಗೂ ಮೊಘಲ್, ಬ್ರಿಟಿಷ್, ಮರಾಠಾ ಸಾಮ್ರಾಜ್ಯಗಳ ಕಾಲದ ನಾಣ್ಯಗಳು ಎಲ್ಲರನ್ನು ಹಳೆಯ ಕಾಲಕ್ಕೆ ಕೊಂಡೊಯ್ಯುತ್ತಿವೆ..
ಮೋಡಿ ಭಾಷೆಯಲ್ಲಿ ಪತ್ರಗಳು : ಶಿವಾಜಿ ಮಹಾರಾಜ ಕಾಲದ ಅಂಚೆ ಪತ್ರ ಮತ್ತು ಸ್ಟಾಂಪ್ಗಳು. ಅದೇ ರೀತಿ ಕೊಲ್ಹಾಪುರ, ಇಂಧೋರ್, ಗ್ವಾಲಿಯರ್, ಕುರಂದವಾಡ, ಭೋರ್, ಜವಾರ, ಮೀರಜ್, ಸಾಂಗ್ಲಿ ಸಂಸ್ಥಾನಗಳು ಸೇರಿದಂತೆ ಬ್ರಿಟಿಷ್, ಪೋರ್ಚುಗೀಸ್ ಕಾಲದಲ್ಲಿ ನಡೆದ ಪತ್ರ ವ್ಯವಹಾರಕ್ಕೆ ಸಂಬಂಧಿಸಿದಂತೆ ಮೋಡಿ ಭಾಷೆಯಲ್ಲಿರುವ 1230 ಪತ್ರಗಳು ಇತಿಹಾಸಕ್ಕೆ ಸಾಕ್ಷಿಯಾಗಿವೆ.
ಪ್ರತಿಯೊಂದು ಫ್ರೇಮ್ ಮುಂದೆ ಕ್ಯೂಆರ್ ಕೋಡ್ ಅಳವಡಿಸಲಾಗಿದೆ. ಮೊಬೈಲಿನಲ್ಲಿ ಅದನ್ನು ಸ್ಕ್ಯಾನ್ ಮಾಡಿದರೆ, ಆ ಶಸ್ತ್ರದ ಹೆಸರೇನು..? ಅದನ್ನು ಯಾರ ಬಳಸಿದ್ದರು..? ಎಂಬುದು ಸೇರಿ ಎಲ್ಲಾ ಮಾಹಿತಿ ಬರುತ್ತದೆ.
ಶಾಲಾ ಮಕ್ಕಳಿಗೆ ಉಚಿತ ಪ್ರವೇಶ : ರೋಟರಿ ಕ್ಲಬ್ ಬೆಳಗಾವಿ ಸೌತ್ ಕಾರ್ಯದರ್ಶಿ ಭೂಷಣ ಮೋಹಿರೆ ಈಟಿವಿ ಭಾರತ ಜೊತೆಗೆ ಮಾತನಾಡಿ, "ನಮ್ಮ ಧರ್ಮ, ಸಂಸ್ಕೃತಿ ಉಳಿವಿಗಾಗಿ ಶಿವಾಜಿ ಮಹಾರಾಜರ ಹೋರಾಟ ಅಪ್ರತಿಮವಾಗಿದೆ. ಇಂದಿನ ಯುವ ಪೀಳಿಗೆಗೆ ಅಂದಿನ ಕಾಲಘಟ್ಟ ಪರಿಚಯಿಸುವ ಪ್ರಯತ್ನ ನಮ್ಮದಾಗಿದೆ. ಶಿವಾಜಿ ಅವರ ಸೇನಾಧಿಪತಿಗಳು, ಮಂತ್ರಿಗಳ ವಂಶಜರಿಂದ ಸಂಗ್ರಹಿಸಿರುವ ಆಯುಧಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದೇವೆ. ಪ್ರದರ್ಶನ ವೀಕ್ಷಿಸಲು ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಇನ್ನು ವಯಸ್ಕರರಿಗೆ ಶುಲ್ಕ ನಿಗದಿಪಡಿಸಿದ್ದು, ಒಬ್ಬ ವ್ಯಕ್ತಿಗೆ 30 ರೂ. ವಿಧಿಸಲಾಗಿದೆ" ಎಂದು ವಿವರಿಸಿದರು.
ಸರ್ದಾರ ಯೆಸಾಜಿ ಕಂಕ್ ಕತ್ತಿ : "ಮೊಘಲರು ಶಿವಾಜಿ ಸೈನ್ಯದ ಮೇಲೆ ದಂಡೆತ್ತಿ ಬಂದಾಗ ನಮ್ಮ ಬಳಿ ಆನೆ ಸೇರಿ ದೊಡ್ಡ ಶಸ್ತ್ರಾಸ್ತ್ರಗಳಿವೆ. ನೀವು ಹೇಗೆ ನಮ್ಮ ಎದುರು ಯುದ್ಧ ಮಾಡುತ್ತೀರಿ ಎಂದು ಪ್ರಶ್ನಿಸುತ್ತಾರೆ. ಆಗ ಶಿವಾಜಿ ಅವರು ನಮ್ಮ ಹತ್ತಿರ ಆನೆಗಳು ಇಲ್ಲದಿರಬಹುದು. ಆದರೆ, ಆನೆಯನ್ನು ಕ್ಷಣಮಾತ್ರದಲ್ಲಿ ಹೊಡೆದುರುಳಿಸಬಲ್ಲ ಸಾಮರ್ಥ್ಯ ಹೊಂದಿರುವ ಅಪ್ರತಿಮ ವೀರರು ಇದ್ದಾರೆ ಎಂದು ಉತ್ತರಿಸುತ್ತಾರೆ. ಆಗ, ಸರ್ದಾರ ಯೆಸಾಜಿ ಕಂಕ್ ಅವರು ತಮ್ಮ ಮುಂದೆ ಬಂದು ನಿಲ್ಲುವ ಆನೆಯ ಸೊಂಡಿಲನ್ನು ಕತ್ತಿಯಿಂದ ಒಂದೇ ಏಟಿಗೆ ಕತ್ತರಿಸಿ ಬಿಡುತ್ತಾರೆ. ಆ ಕತ್ತಿಯನ್ನೂ ಪ್ರದರ್ಶನದಲ್ಲಿ ಇಡಲಾಗಿದೆ. ಅದೇ ರೀತಿ ಸರ ಸೇನಾಧಿಪತಿ ತಾನಾಜಿ ಮಾಲುಸರೆ ಕೊಂಡಾಣ ಕೋಟೆ ಗೆದ್ದ ವೇಳೆ ಅವರಿಗೆ ಶಿವಾಜಿ ಮಹಾರಾಜರು ಕಾಣಿಕೆ ನೀಡಿದ್ದ ಪವಿತ್ರ ಮಾಲೆಯನ್ನು ಶನಿವಾರ ಪ್ರದರ್ಶನಕ್ಕೆ ತೆಗೆದುಕೊಂಡು ಬರುತ್ತಿದ್ದೇವೆ. ಹಾಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವಂತೆ" ರೋಟರಿ ಕ್ಲಬ್ ಬೆಳಗಾವಿ ಸೌತ್ ನೀಲೇಶ ಪಾಟೀಲ ಕೋರಿದ್ದಾರೆ.
ಸ್ಕ್ಯಾನರ್ ಮೂಲಕವೂ ಶಸ್ತ್ರಗಳ ಮಾಹಿತಿ : ಪ್ರದರ್ಶನಕ್ಕೆ ಬಂದಿದ್ದ ಯುವತಿ ಅನುರಾಧಾ ಭಂಡಾರಿ ಮಾತನಾಡಿ, "ಪುಸ್ತಕಗಳಲ್ಲಿ ಶಸ್ತ್ರಾಸ್ತ್ರಗಳ ಕುರಿತು ಓದಿದ್ದೆವು. ಆದರೆ ಇಲ್ಲಿಗೆ ಬಂದ ಮೇಲೆ ನಿಜವಾದ ಆಯುಧಗಳ ಪರಿಚಯ ನಮಗೆ ಆಯಿತು. ಹಳೆ ಕಾಲದ ಆಯುಧ, ಶಸ್ತ್ರಗಳನ್ನು ನೋಡಿ ತುಂಬಾ ಸಂತೋಷವಾಯಿತು. ಪ್ರತಿಯೊಂದು ಶಸ್ತ್ರದ ಮುಂದೆ ಸಂಕ್ಷಿಪ್ತವಾಗಿ ಮಾಹಿತಿ ನೀಡಲಾಗಿದೆ. ಜೊತೆಗೆ ಸ್ಕ್ಯಾನರ್ ಕೂಡ ಇದೆ. ಆ ಮೂಲಕವೂ ಹೆಚ್ಚಿನ ಮಾಹಿತಿ ತಿಳಿಯಬಹುದಾಗಿದೆ. ಇನ್ನು ಅವೆಂಜರ್, ಐರನ್ ಮ್ಯಾನ್ ಸೂಪರ್ ಹೀರೋ ಅಂದುಕೊಳ್ಳುತ್ತೇವೆ. ಆದರೆ, ನಮ್ಮ ದೇಶದ ಸಂಸ್ಕೃತಿ ಉಳಿಸಲು ಮತ್ತು ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಹೋರಾಡಿದವರು ನಮ್ಮ ನಿಜವಾದ ಹೀರೋಗಳು ಎಂಬುದನ್ನು ನಾವು ಮರೆಯಬಾರದು" ಎಂದರು.
ಇದನ್ನೂ ಓದಿ: HAL ನಿರ್ಮಿತ ಲಘು ಯುದ್ಧ ಹೆಲಿಕಾಪ್ಟರ್ಗೆ ಹೆಚ್ಚಿದ ಬೇಡಿಕೆ: ಮುಂದಿನ ಆರು ತಿಂಗಳಲ್ಲಿ 2.5 ಲಕ್ಷ ಕೋಟಿ ವಹಿವಾಟು