ಬೆಳಗಾವಿ:ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಇತ್ತೀಚಿಗೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಅರುಣ ಕೋಪರ್ಡೆ ಅವರ ಮೃತದೇಹದ ಅಂತ್ಯಕ್ರಿಯೆಯನ್ನು ಬೆಳಗಾವಿಯ ಸದಾಶಿವನಗರದಲ್ಲಿ ಶುಕ್ರವಾರ ನೆರವೇರಿಸಲಾಯಿತು.
ಅದೇ ರೀತಿ, ಮತ್ತೋರ್ವ ದುರ್ದೈವಿ ಮಹಾದೇವಿ ಬಾವನೂರ ಅವರ ಮೃತದೇಹವನ್ನು ತವರೂರಾದ ಹುಬ್ಬಳ್ಳಿ ತಾಲೂಕಿನ ನೂಲಿ ಗ್ರಾಮಕ್ಕೆ ಕೊಂಡೊಯ್ದು ಅಂತ್ಯಸಂಸ್ಕಾರ ನೆರವೇರಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.
ಅರುಣ ಕೋಪರ್ಡೆ ಅವರ ಪತ್ನಿ ಗಾಯಾಳು ಕಾಂಚನ್ ಬಿಟ್ಟಿಟ್ಟ ಭೀಕರತೆ (ETV Bharat) ದೆಹಲಿಯಿಂದ ವಿಮಾನದ ಮೂಲಕ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದ ಅರುಣ ಕೋಪರ್ಡೆ ಮತ್ತು ಮಹಾದೇವಿ ಬಾವನೂರ ಅವರ ಶವಗಳನ್ನು ಜಿಲ್ಲಾಡಳಿತ ಸ್ವೀಕರಿಸಿತು. ಬಳಿಕ ಜಿಲ್ಲಾಸ್ಪತ್ರೆ ಶವಾಗಾರಕ್ಕೆ ರವಾನಿಸಲಾಯಿತು. ಮರಣೋತ್ತರ ಪರೀಕ್ಷೆಯ ಬಳಿಕ ಅರುಣ ಕೋಪರ್ಡೆ ಅವರ ಮೃತದೇಹವನ್ನು ಶೆಟ್ಟಿ ಗಲ್ಲಿಯ ಅವರ ಮನೆಗೆ ಕರೆತರಲಾಯಿತು. ಮನೆ ಎದುರು ಪೂಜೆ ಸಲ್ಲಿಸಿದ ನಂತರ ಸದಾಶಿವ ನಗರದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಿದರು. ಈ ವೇಳೆ ಪತ್ನಿ, ಪುತ್ರ ಸೇರಿದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಮಹಾದೇವಿ ಬಾವನೂರ ಅವರ ಮೃತದೇಹಕ್ಕೆ ಶಿವಾಜಿ ನಗರದ ಅವರ ನಿವಾಸದೆದುರು ಆರತಿ ಬೆಳಗಿ ಪೂಜೆ ಸಲ್ಲಿಸಲಾಯಿತು. ನೋವು ತಾಳಲಾರದೆ ಮನೆಯವರು, ಸ್ನೇಹಿತರು ಕಣ್ಣೀರಿಟ್ಟರು. ಆ ಬಳಿಕ ಕುಟುಂಬಸ್ಥರು ಮೃತದೇಹವನ್ನು ತವರೂರು ನೂಲಿಗೆ ತೆಗೆದುಕೊಂಡು ಹೋಗಿದ್ದಾರೆ.
ಅದೇ ರೀತಿ, ವಡಗಾವಿಯ ಜ್ಯೋತಿ ಹತ್ತರವಾಟ ಮತ್ತು ಅವರ ಪುತ್ರಿ ಮೇಘಾ ಹತ್ತರವಾಟ ಅವರ ಮೃತದೇಹಗಳನ್ನು ತಡರಾತ್ರಿ ಗೋವಾ ಮೂಲಕ ಬೆಳಗಾವಿಗೆ ತರಲಾಯಿತು.
"ನನ್ನ ಜೀವ ಉಳಿಸಿ ನಮ್ಮೆಜಮಾನ್ರು ಜೀವ ಬಿಟ್ಟರು":ಅರುಣ ಕೋಪರ್ಡೆ ಅವರ ಪತ್ನಿ ಗಾಯಾಳು ಕಾಂಚನ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, "ಜ.28ರಂದು ರಾತ್ರಿ ಎಲ್ಲರೂ ಪುಣ್ಯಸ್ನಾನಕ್ಕೆ ಹೊರಟಿದ್ದೆವು. ಏಕಾಏಕಿ ಜನರ ಚೀರಾಟ ಶುರುವಾಯಿತು. ಸ್ನಾನಕ್ಕೆ ಹೋದವರು ಮರಳಿ ನಮ್ಮತ್ತ ಓಡಿಬಂದರು. ತಳ್ಳಿಕೊಂಡು ಹೋಗುವಾಗ ನಾವು ಕೆಳಗೆ ಬಿದ್ದವು. 50ಕ್ಕೂ ಹೆಚ್ಚು ಜನರ ಗುಂಪು ನಮ್ಮ ಮೇಲೆ ಬಿತ್ತು. ನನ್ನ ಪತಿ ಅರುಣ ಅವರು ನನ್ನ ರಕ್ಷಣೆಗೆ ಧಾವಿಸಿದರು. ಅವರ ಮೇಲೂ ಜನ ಬಿದ್ದರು. ಕೆಲಕಾಲ ಉಸಿರುಗಟ್ಟಿತು. ಕಾಪಾಡಿ, ಕಾಪಾಡಿ ಎಂದು ಇಬ್ಬರೂ ಚೀರಾಡಿದೆವು. ಆಗ ಯಾರೂ ನಮ್ಮ ಸಹಾಯಕ್ಕೆ ಬರಲಿಲ್ಲ. ಬದಲಾಗಿ ಎಲ್ಲರೂ ನಮ್ಮ ಫೋಟೋ, ವೀಡಿಯೋ ತೆಗೆಯುವಲ್ಲಿ ಬ್ಯುಸಿಯಾಗಿದ್ದರು. ನನ್ನ ಕಾಪಾಡಲು ಬಂದ ನಮ್ಮ ಯಜಮಾನರೇ ಜೀವ ಕಳೆದುಕೊಂಡರು" ಎನ್ನುತ್ತಾ ಕಣ್ಣೀರು ಹಾಕಿದರು.
ಅರುಣ ಕೋಪರ್ಡೆ ಹಾಗೂ ಮಹಾದೇವಿ ಬಾವನೂರ ಅವರ ಮೃತದೇಹ (ETV Bharat) "ನಾವು ಬದುಕಿ ಬಂದಿದ್ದೇ ಪವಾಡ": ಮತ್ತೋರ್ವ ಗಾಯಾಳು ಸರೋಜಾ ನಡುವಿನಹಳ್ಳಿ ಮಾತನಾಡಿ, "ಪ್ರಯಾಗ್ರಾಜ್ದ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಬೇಕೆಂದು ಜ.28ರಂದು ರಾತ್ರಿ 12 ಗಂಟೆಗೆ ನಡೆದುಕೊಂಡು ಹೋಗುತ್ತಿದ್ದಾಗ ಸ್ನಾನ ಮುಗಿಸಿ ಲಕ್ಷಾಂತರ ಜನರು ನಮ್ಮ ಎದುಗಡೆಯಿಂದ ಬರುತ್ತಿದ್ದರು. ಜನರು ಮುಖಾಮುಖಿಯಾಗಿ ಒಬ್ಬರನ್ನೊಬ್ಬರು ತಳ್ಳಲು ಆರಂಭಿಸಿದರು. ಎಲ್ಲರೂ ಗಾಬರಿಯಿಂದ ಓಡುವ ರಭಸದಲ್ಲಿದ್ದರು. ತುಳಿದುಕೊಂಡೇ ಹೋಗುತ್ತಿದ್ದರು. ಕಿರುಚಾಡಿದರೂ ಯಾರೂ ರಕ್ಷಣೆಗೆ ಬರಲಿಲ್ಲ. ಕಾಲ್ತುಳಿತದ ವೇಳೆ ಎಲ್ಲರ ಮೈ ಮೇಲಿದ್ದ ಬಟ್ಟೆಗಳು, ಬಂಗಾರದ ಆಭರಣಗಳು, ಮೊಬೈಲ್, ಬ್ಯಾಗ್‌ಗಳನ್ನು ಮರೆತು ಜೀವ ಉಳಿಸಿಕೊಳ್ಳಲು ಓಡಬೇಕಾಯಿತು. ಕಾಲ್ತುಳಿತ 12 ಗಂಟೆಗೆ ನಡೆಯಿತು. ಅನೇಕರು ಉಸಿರುಗಟ್ಟಿಯೇ ಮೃತಪಟ್ಟರು. ಬಟ್ಟೆ, ಚಪ್ಪಲಿ, ಬ್ಯಾಗ್‌ಗಳ ರಾಶಿ ಅಲ್ಲಿ ಬಿದ್ದಿತ್ತು. ನಾವೆಲ್ಲಾ ಬದುಕಿ ಬಂದಿರುವುದೇ ದೊಡ್ಡ ಪವಾಡ" ಎಂದು ಕರಾಳ ಘಟನೆಯನ್ನು ವಿವರಿಸಿದರು.
ಇದನ್ನೂ ಓದಿ:ಮೃತರ ಕುಟುಂಬಸ್ಥರ ಜೊತೆ ನಾವಿದ್ದೇವೆ: ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅಭಯ
ಇದನ್ನೂ ಓದಿ:ಮಹಾಕುಂಭ ಮೇಳ ಕಾಲ್ತುಳಿತ: ಬೆಳಗಾವಿಗೆ ಆಗಮಿಸಿದ ಇಬ್ಬರ ಮೃತದೇಹಗಳು - ಕುಟುಂಬಸ್ಥರ ಆಕ್ರಂದನ