ಮೈಸೂರು: ಸಾಮಾಜಿಕ ಹೋರಾಟಗಾರ ಹಾಗೂ ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಇಂದು ಮೈಸೂರಿನ ಲೋಕಾಯುಕ್ತ ಕಚೇರಿಗೆ ಭೇಟಿ ನೀಡಿ ದೂರು ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಎಂ.ಲಕ್ಷ್ಮಣ್, "ಘನ ನ್ಯಾಯಾಲಯದ ಆದೇಶದ ಪ್ರಕಾರ ಮೈಸೂರಿನ ಲೋಕಾಯುಕ್ತ ಅಧಿಕಾರಿಗಳು ಸಿಎಂ ವಿರುದ್ಧ ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಲೋಕಾಯುಕ್ತ ತನಿಖೆ ನಡೆಸಿ ಅಂತಿಮ ವರದಿ ನೀಡುತ್ತದೆ. ಆದರೆ ದೂರುದಾರ ಸ್ನೇಹಮಹಿ ಕೃಷ್ಣ ದಿನನಿತ್ಯ ಲೋಕಾಯುಕ್ತ ಕಚೇರಿ ಬಳಿ ಬಂದು ಮುಖ್ಯಮಂತ್ರಿಗಳು ಸಾಕ್ಷ್ಯನಾಶ ಮಾಡುತ್ತಿದ್ದಾರೆ ಎಂದು ಮಾಧ್ಯಮಗಳ ಎದುರು ಆರೋಪ ಮಾಡುತ್ತಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
"ನಾನು ದಿನನಿತ್ಯ ಲೋಕಾಯುಕ್ತ ಕಚೇರಿಗೆ ಬರುತ್ತೇನೆ ಎಂದು ಸುಳ್ಳು ದೂರು ನೀಡಿದ್ದಾರೆ. ಅದಕ್ಕಾಗಿ ನಾವು ಅವರ ವಿರುದ್ಧ ಒಂದು ದೂರು ನೀಡಿದ್ದೇವೆ. ಸ್ನೇಹಮಯಿ ಕೃಷ್ಣ ಮಾಧ್ಯಮಗಳ ಮೂಲಕ ಹೇಳಿಕೆ ನೀಡುತ್ತಾ ಲೋಕಾಯುಕ್ತ ಪೊಲೀಸರನ್ನು ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್‌ನವರು ಸ್ನೇಹಮಯಿ ಕೃಷ್ಣ ಅವರ ಸಹಾಯದಿಂದ ತನಿಖೆಯ ದಾರಿ ತಪ್ಪಿಸುತ್ತಿದ್ದಾರೆ. ಹೀಗಾಗಿ ದೂರು ನೀಡಿದ್ದೇವೆ, ದಯಮಾಡಿ ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು" ಎಂದು ಆಗ್ರಹಿಸಿದರು.