ಕೊಪ್ಪಳ: ಹತ್ತು ವರ್ಷದ ಹಿಂದೆ ಗಂಗಾವತಿ ತಾಲೂಕಿನ ಮರುಕುಂಬಿ ಗ್ರಾಮದಲ್ಲಿ ನಡೆದ ಜಾತಿ ಸಂಘರ್ಷ ಪ್ರಕರಣದಲ್ಲಿ 101 ಜನ ಅಪರಾಧಿಗಳಲ್ಲಿ 98 ಜನರಿಗೆ ಜೀವಾವಧಿ ಶಿಕ್ಷೆ, ತಲಾ ಐದು ಸಾವಿರ ರೂ. ದಂಡ ವಿಧಿಸಿ ಇಲ್ಲಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗುರುವಾರ ಐತಿಹಾಸಿಕ ತೀರ್ಪು ನೀಡಿತು.
ಗಂಗಾವತಿ ತಾಲೂಕಿನ ಮರುಕುಂಬಿಯಲ್ಲಿ 2014ರ ಅಕ್ಟೋಬರ್ 28ರಂದು ನಡೆದ ಜಾತಿ ಸಂಘರ್ಷ ಪ್ರಕರಣ ಇದಾಗಿದೆ. ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಚಂದ್ರಶೇಖರ ಸಿ. ಈ ಆದೇಶ ನೀಡಿದ್ದಾರೆ. ಜಾತಿ ಸಂಘರ್ಷ ಪ್ರಕರಣದಲ್ಲಿ 101 ಜನರ ವಿರುದ್ಧ ತೀರ್ಪು ಬಂದ ದೇಶದ ಮೊದಲ ಪ್ರಕರಣ ಇದಾಗಿದೆ.
101 ಆರೋಪಿಗಳ ವಿರುದ್ಧ ಸೋಮವಾರ (ಅ.21) ನ್ಯಾಯಾಲಯದಲ್ಲಿ ಆರೋಪ ಸಾಬೀತಾಗಿತ್ತು. ಇವರಲ್ಲಿ ಮೂವರು ಅಪರಾಧಿಗಳು ಪರಿಶಿಷ್ಠ ಜಾತಿ, ಪಂಗಡಕ್ಕೆ ಸೇರಿದವರಾಗಿದ್ದರಿಂದ ಇವರಿಗೆ ಜಾತಿ ನಿಂದನೆ ಕೇಸ್ ಅನ್ವಯವಾಗಿಲ್ಲ. ಈ ಮೂವರು ಅಪರಾಧಿಗಳಿಗೆ ಐದು ವರ್ಷ ಜೈಲು ಹಾಗೂ 2 ಸಾವಿರ ರೂ. ದಂಡ ವಿಧಿಸಲಾಗಿದೆ. ಹೀಗಾಗಿ, ಶಿಕ್ಷೆ ಪ್ರಮಾಣ ಕಡಿಮೆಯಾಗಿದ್ದು, ಜೀವಾವಧಿ ಶಿಕ್ಷೆ ಆದೇಶದಿಂದ ವಿನಾಯಿತಿ ಸಿಕ್ಕಿದೆ. ಆದರೆ, ಗಲಬೆ ಹಬ್ಬಿಸಿದ ಕಾರಣ ನೀಡಿ ಐದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.