ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಮುಂಗಾರು ಮಳೆ ಚುರುಕು: ಯಾವ ಜಿಲ್ಲೆಗಳಲ್ಲಿ ಅಲರ್ಟ್ ಘೋಷಣೆ? - Karnataka Rain Forecast

ರಾಜ್ಯದಲ್ಲಿ ಮುಂಗಾರು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಲ ಜಿಲ್ಲೆಗಳಲ್ಲಿ ಜೂನ್ 22, 23 ಮತ್ತು 24 ರಂದು ಹವಾಮಾನ ಇಲಾಖೆ ಅಲರ್ಟ್ ಘೋಷಿಸಿದೆ.

ಮುಂಗಾರು ಮಳೆ
ಮುಂಗಾರು ಮಳೆ (IANS)

By ETV Bharat Karnataka Team

Published : Jun 20, 2024, 4:39 PM IST

ಬೆಂಗಳೂರು:ರಾಜ್ಯದಲ್ಲಿ ಮುಂಗಾರು ಮಳೆ ಮುಂದುವರೆದಿದೆ. ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂದೂ ಕೂಡ ಅಲರ್ಟ್ ಜಾರಿಗೊಳಿಸಲಾಗಿದೆ. ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಇಂದು ಯೆಲ್ಲೋ, ನಾಳೆ ಆರೆಂಜ್, ಜೂನ್ 22 ರಂದು ರೆಡ್, 23 ಮತ್ತು 24 ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಉತ್ತರ ಒಳನಾಡಿನ ಬೆಳಗಾವಿ ಜಿಲ್ಲೆಗೆ ಜೂನ್ 23, 24 ರಂದು ಆರೆಂಜ್, ಧಾರವಾಡ ಜಿಲ್ಲೆಗೆ ಜೂನ್ 22 ರಂದು ಯೆಲ್ಲೋ 23, 24 ರಂದು ಆರೆಂಜ್, ಹಾವೇರಿ ಜಿಲ್ಲೆಗೆ ಜೂನ್ 22 ರಂದು ಯೆಲ್ಲೋ, 23 ಮತ್ತು 24 ರಂದು ಆರೆಂಜ್ ಅಲರ್ಟ್ ನೀಡಲಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ದಾವಣಗೆರೆ, ಚಾಮರಾಜನಗರಕ್ಕೆ ಜೂನ್ 23 ರಂದು ಯೆಲ್ಲೋ, ಅಲರ್ಟ್ ನೀಡಲಾಗಿದೆ. ಚಿಕ್ಕಮಗಳೂರು ಇಂದು ಮತ್ತು ನಾಳೆ ಯೆಲ್ಲೋ, ಜೂನ್ 22, 23, 24 ಆರೆಂಜ್ ಅಲರ್ಟ್ ನೀಡಲಾಗಿದೆ. ಹಾಸನ ಜಿಲ್ಲೆಗೆ ಜೂನ್ 22 ರಂದು ಆರೆಂಜ್ ಮತ್ತು ಜೂನ್ 23 ಮತ್ತು 24 ರಂದು ಯೆಲ್ಲೋ, ಕೊಡಗು ಜಿಲ್ಲೆಗೆ ಜೂನ್ 22 ರಿಂದ ಜೂನ್ 24 ರಂದು ಮೂರು ದಿನಗಳ ಕಾಲ ಆರೆಂಜ್, ಮೈಸೂರಿಗೆ ಜೂನ್ 22 ಮತ್ತು 24 ಕ್ಕೆ ಯೆಲ್ಲೋ, ಜೂನ್ 23 ರಂದು ಆರೆಂಜ್, ಶಿವಮೊಗ್ಗ ಜಿಲ್ಲೆಗೆ ಜೂನ್ 20 ಮತ್ತು 21 ರಂದು ಯೆಲ್ಲೋ ಮತ್ತು ಜೂನ್ 22 ರಿಂದ 24ರ ವರೆಗೆ ಮೂರು ದಿನ ಆರೆಂಜ್ ಅಲರ್ಟ್ ನೀಡಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ. ದಕ್ಷಿಣ ಒಳಗಿನ ಕರ್ನಾಟಕದ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳ ಮೇಲೆ ಪ್ರತ್ಯೇಕ ಸ್ಥಳಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರು ನಗರ ಮತ್ತು ಸುತ್ತಮುತ್ತ ಮುಂದಿನ 24 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಕೆಲವೊಮ್ಮೆ ಮೇಲ್ಮೈ ಗಾಳಿ ಪ್ರಬಲವಾಗಿರುವ ಸಾಧ್ಯತೆಯಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30 ಡಿಗ್ರಿ ಮತ್ತು 22 ಡಿಗ್ರಿ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬುಧವಾರ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತೀ ಹೆಚ್ಚು ಮಳೆ:ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರದಲ್ಲಿ ಬುಧವಾರ ಅತೀ ಹೆಚ್ಚು ಮಳೆಯಾಗಿದೆ (5 ಸೆಂಟಿಮೀಟರ್). ಉಳಿದಂತೆ ಉಡುಪಿ ಜಿಲ್ಲೆಯ ಕೋಟ ಹಾಗೂ ಕುಂದಾಪುರದಲ್ಲಿ 4, ಉತ್ತರ ಕನ್ನಡ ಜಿಲ್ಲೆಯ ಗೇರುಸೊಪ್ಪದಲ್ಲಿ 4, ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ, ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ, ಚಿಕ್ಕಮಗಳೂರು ಜಿಲ್ಲೆಯ ಕಮ್ಮರಡಿಯಲ್ಲಿ 3 ಸೆಂಟಿಮೀಟರ್ ಮಳೆ ಬಿದ್ದಿದೆ ಎಂದು ಮಾಹಿತಿ ನೀಡಿದೆ.

ನೈಋತ್ಯ ಮುಂಗಾರು ಸದ್ಯ ರಾಜ್ಯದಲ್ಲಿ ದುರ್ಬಲವಾಗಿದೆ. ಕರಾವಳಿಯ ಹಲವು ಕಡೆಗಳಲ್ಲಿ, ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ, ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಬಲವಾದ ಗಾಳಿಯ ಒಮ್ಮುಖವಾಗಿರುವುದರಿಂದ ಪಶ್ಚಿಮ ಘಟ್ಟಗಳ ಕರಾವಳಿ ಮತ್ತು ಪಕ್ಕದ ಜಿಲ್ಲೆಗಳಲ್ಲಿ ಜೂನ್ 23 ರಂದು ಭಾರೀ ಮಳೆಯಾಗುವ ಸಾಧ್ಯತೆಯಿದೆ. ಬಲವಾದ ಗಾಳಿ ಮತ್ತು ಭೂಕುಸಿತದ ಸಾಧ್ಯತೆ ಸಹ ಇದೆ ಎಂದು ಬೆಂಗಳೂರು ಹವಾಮಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ರಾಜವೇಲ್ ಮಾಣಿಕ್ಕಂ ಹೇಳಿದ್ದಾರೆ.

ಇದನ್ನೂ ಓದಿ: ಅಂದಾಜಿಸಿದಂತೆ ಬಾರದ ಮಾನ್ಸೂನ್​​: ದೇಶದಲ್ಲಿ ಶೇ 20 ರಷ್ಟು ಮಳೆ ಕೊರತೆ: IMD ಮಹತ್ವದ ಮಾಹಿತಿ - RECEIVED 20PERCENT LESS RAINFALL

ABOUT THE AUTHOR

...view details