ಮೈಸೂರು : ನನ್ನನ್ನ ಅರೆಸ್ಟ್ ಮಾಡುತ್ತಾರೆ, ಬಿಡಿಸಿಕೊಡಿ ಎಂದು ಯಾರ ಬಳಿಯೂ ಕೇಳಿಲ್ಲ . ರೇವಣ್ಣನವರೇ ದಯವಿಟ್ಟು ಕ್ಷಮಿಸಿ. ನನ್ನನ್ನ ಯಾರು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ರೇವಣ್ಣನವರ ಹೇಳಿಕೆ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಅವರನ್ನೇ ಕೇಳುತ್ತೇನೆ ಎಂದು ಶಾಸಕ ಜಿ. ಟಿ ದೇವೇಗೌಡ ಹೇಳಿದರು.
ಇಂದು ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಜಿಟಿಡಿ, ನಿನ್ನೆ ಬೆಂಗಳೂರಿನಲ್ಲಿ ಶಾಸಕ ಹೆಚ್. ಡಿ ರೇವಣ್ಣ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ನನ್ನ ಮೇಲೆ ಹಾಗೂ ನನ್ನ ಮಗ ಹರೀಶ್ಗೌಡನ ಮೇಲೆ ಯಾವುದೇ ಕೇಸ್ ಇಲ್ಲ. ಬಂಧಿಸುವಂತಹ ವಿಷಯವೇ ಬಂದಿಲ್ಲ ಎಂದರು.
ಸಿಎಂ ಸಿದ್ದರಾಮಯ್ಯ ಅವರು ಜಿ. ಟಿ ದೇವೇಗೌಡರನ್ನ ಬಂಧಿಸಿ ಎಂದು ಹೇಳಿದ್ದರು ಎಂಬ ಮಾಧ್ಯಮದವರ ಪ್ರಶ್ನೆಗೆ, ಸಿದ್ದರಾಮಯ್ಯ ಸೇರಿದಂತೆ ಯಾವ ಸರ್ಕಾರದಲ್ಲಿ ಯಾವ ಮುಖ್ಯಮಂತ್ರಿಗಳು ಜಿ. ಟಿ ದೇವೇಗೌಡರನ್ನ ಬಂಧಿಸಿ, ಕೇಸ್ ಹಾಕಿ, ಅರೆಸ್ಟ್ ಮಾಡಿ ಎಂದು ಹೇಳಿಲ್ಲ. ಯಾವ ಕೇಸ್ ಇದೆ ಹೇಳಲಿ. ಕೇಸ್ ಇದ್ರೆ ತಾನೆ ಅರೆಸ್ಟ್ ಮಾಡಬೇಕು. ಸಿದ್ದರಾಮಯ್ಯ ಆ ರೀತಿ ಹೇಳಲು ಸಾಧ್ಯವೇ ಇಲ್ಲ ಎಂದು ತಿಳಿಸಿದರು.
ರಾಜಕೀಯದಲ್ಲಿ ಹೋರಾಟ ಮಾಡಿದ್ದೇವೆ. ಆ ಚಿಲ್ಲರೆ ಕೆಲಸ ನಮ್ಮಲ್ಲಿ ಆಗಿಲ್ಲ. ನಮ್ಮ ಜಿಲ್ಲೆಯಲ್ಲಿ ಆ ರೀತಿ ನಡೆದಿಲ್ಲ, ನನ್ನ ಮೇಲೂ ಆ ರೀತಿ ನಡೆದಿಲ್ಲ ಎಂದರು.
ಸಿದ್ದರಾಮಯ್ಯ ಸೇಡು ತೀರಿಸಿಕೊಳ್ಳುವುದಕ್ಕಾಗಿ ಆ ರೀತಿ ಮಾಡಿದ್ರು ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ದರಾಮಯ್ಯನವರು ಸೇಡು ತೀರಿಸಿಕೊಳ್ಳುವುದಕ್ಕೆ ರಾಜಕೀಯ ಮಾಡಿದ್ದಾರೆ. ನನ್ನ ಸೋಲಿಸುವಂತಹ ಎಲ್ಲ ಪ್ರಯತ್ನಗಳನ್ನೂ ಕೂಡಾ ಮಾಡಿದ್ದಾರೆ. ಆದರೆ ವೈಯಕ್ತಿಕವಾಗಿ ಜಿ. ಟಿ ದೇವೇಗೌಡರ ಮೇಲೆ ಕೇಸ್ ಹಾಕಿ, ಅರೆಸ್ಟ್ ಮಾಡಿ ಎಂದು ಹೇಳುವ ಸಂದರ್ಭ ಯಾವತ್ತೂ ಕೂಡಾ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಹಾಗಿದ್ರೆ ಸುಮ್ಮನೆ ರೇವಣ್ಣ ಯಾಕೆ ಹೀಗೆ ಹೇಳಿದ್ರು ಎಂಬ ಪ್ರಶ್ನೆಗೆ, ಬೆಳಗಾವಿ ಅಧಿವೇಶನಕ್ಕೆ ಅವರು ಬರ್ತಾರೆ. ನಾನು ರೇವಣ್ಣ ಚೆನ್ನಾಗಿದ್ದೇವೆ. ಆತ್ಮೀಯತೆ ಇದೆ, ಒಟ್ಟಾಗಿ ಕೆಲಸ ಮಾಡಿದ್ದೇವೆ. ರೇವಣ್ಣನವರನ್ನು ಕೇಳಿಯೇ ನಿಮಗೆ ಸಂಪೂರ್ಣ ಮಾಹಿತಿ ಹೇಳುತ್ತೇನೆ ಎಂದಿದ್ದಾರೆ.
ಯಡಿಯೂರಪ್ಪ ಸಿಎಂ ಆಗುವುದನ್ನು ತಪ್ಪಿಸಿದ್ದು ರೇವಣ್ಣ : ಜೆಡಿಎಸ್ ಜತೆ ಅಧಿಕಾರ ಹಂಚಿಕೆ ಸಮಯದಲ್ಲಿ ಯಡಿಯೂರಪ್ಪ ಸಿಎಂ ಆಗುವುದನ್ನ ತಪ್ಪಿಸಿದ್ದು ಹೆಚ್. ಡಿ ರೇವಣ್ಣ. ಈ ಬಗ್ಗೆ ಅವರೇ ಒಪ್ಪಿಕೊಂಡಿದ್ದಾರೆ. ನಾನು ಡಿಸಿಎಂ ಆಗುವುದಿಲ್ಲ ಎಂಬ ಕಾರಣಕ್ಕೆ ರೇವಣ್ಣ ದೊಡ್ಡ ಗೌಡರ ಜತೆ ಮಾತನಾಡಿ ಯಡಿಯೂರಪ್ಪ ಸಿಎಂ ಆಗುವುದನ್ನು ತಪ್ಪಿಸಿದರು ಎಂದು ಹೇಳಿದ್ದಾರೆ.
ಇನ್ನು ಮುಂದೆ ನಾನು ರಾಜಕೀಯವಾಗಿ ಯಾರ ಹೇಳಿಕೆಗೂ ಮಾತನಾಡುವುದಿಲ್ಲ. ನನ್ನನ್ನ ಕಳ್ಳ ಅಂದರೂ ಸಹ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಮಾಧ್ಯಮಗಳಲ್ಲಿ ಇದು ನನ್ನ ಕೊನೆಯ ರಾಜಕೀಯ ಪ್ರತಿಕ್ರಿಯೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಹೆಚ್ಡಿಡಿ ನನಗೆ ಕರೆ ಮಾಡಿರುವುದಾಗಿ ಹೇಳಿದರೆ ರಾಜಕೀಯ ನಿವೃತ್ತಿ: ಜಿ.ಟಿ. ದೇವೇಗೌಡ