ಚಿಕ್ಕೋಡಿ: ಮಹಾರಾಷ್ಟ್ರ ಪಶ್ಚಿಮ ಘಟ್ಟದಲ್ಲಿ ಕಳೆದೆರಡು ವಾರಗಳಿಂದ ನಿರಂತರ ಮಳೆ ಸುರಿಯುತ್ತಿದ್ದು, ಕೃಷ್ಣ ನದಿಯಲ್ಲಿ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಚಿಕ್ಕೋಡಿ ಉಪವಿಭಾಗದಲ್ಲಿ ಪ್ರವಾಹ ಆತಂಕ ಸೃಷ್ಟಿಯಾಗಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ಉಗಾರ-ಕುಡಚಿ ಸೇತುವೆ ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಚಿಕ್ಕೋಡಿ ತಾಲೂಕಿನಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿರುವ ಕಲ್ಲೋಳ-ಯಡೂರ, ದೂದಗಂಗಾ ನದಿಗೆ ಅಡ್ಡಲಾಗಿರುವ ಮಲಿಕವಾಡ-ದತ್ತವಾಡ ಸೇತುವೆ ಜಲಾವೃತಗೊಂಡಿದೆ. ನಿಪ್ಪಾಣಿ ತಾಲೂಕಿನಲ್ಲಿ ವೇದಗಂಗಾ ಮತ್ತು ದೂದಗಂಗಾ ನದಿಗೆ ಅಡ್ಡಲಾಗಿರುವ ಕಾರದಗಾ-ಭೂಜ, ವೇದಗಾಂಗ ನದಿಗೆ ಅಡ್ಡಲಾಗಿರುವ ಭೋಜವಾಡಿ-ಕುನ್ನೂರ ಮತ್ತು ಸಿದ್ನಾಳ-ಅಕ್ಕೋಳ ಹಾಗೂ ಜತ್ರಾಟ-ಭಿವಶಿ ಸೇತುವೆಗಳು ಕೂಡ ಜಲಾವೃತಗೊಂಡಿವೆ.
ರಾಯಬಾಗ್ ತಾಲೂಕಿನಲ್ಲಿ, ಕೃಷ್ಣಾ ನದಿಗೆ ಅಡ್ಡಲಾಗಿರುವ ಹಾಗೂ ಮಹಾರಾಷ್ಟ್ರ ಕರ್ನಾಟಕ ಸಂಪರ್ಕ ಕಲ್ಪಿಸುವ ಉಗಾರ-ಕುಡಚಿ ಸೇತುವೆ ಜಲಾವೃತಗೊಂಡಿವೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಪ್ರಮುಖವಾಗಿ 07 ಸೇತುವೆಗಳು ಈಗಾಗಲೇ ಮುಳುಗಡೆಯಾಗಿ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಸುತ್ತಮುತ್ತಲಿನ ಗ್ರಾಮಸ್ಥರು ಅನಿವಾರ್ಯವಾಗಿ ಹತ್ತಾರು ಕಿಲೋಮೀಟರ್ ಸಂಚಾರ ಮಾಡುವ ಪರಿಸ್ಥಿತಿ ಉದ್ಭವಿಸಿದೆ.
ಮುಳುಗಡೆಯಾಗಿರುವ ಸೇತುವೆಗೆಗಳಿಗೆ ಪರ್ಯಾಯ ಮಾರ್ಗಗಳಿದ್ದು ಹತ್ತಾರು ಕಿ.ಮೀ ಸುತ್ತಿಕೊಂಡು ಗ್ರಾಮಗಳಿಗೆ ಸಂಪರ್ಕ ಸಾಧಿಸಬಹುದು. ಮುನ್ನೆಚ್ಚರಿಕೆ ಕ್ರಮವಾಗಿ ಬೆಳಗಾವಿ ಜಿಲ್ಲಾಡಳಿತ ಮುಳುಗಿರುವ ಸೇತುವೆಗಳ ಮುಂಭಾಗದಲ್ಲಿ ಬ್ಯಾರಿಕೇಡ್ ಅಳವಡಿಸಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಮಹಾರಾಷ್ಟ್ರ ಡ್ಯಾಮ್‌ಗಳಿಂದ ಅಧಿಕೃತವಾಗಿ ಇದುವರೆಗೆ ಯಾವುದೇ ನದಿಗಳಿಗೂ ನೀರುಹರಿಸದೆ ಇದ್ದರೂ ಸದ್ಯ ಕೃಷ್ಣಾ ನದಿಯಲ್ಲಿ 12,1953 ಕ್ಯುಸೆಕ್ ಒಳಹರಿವು ಇದ್ದು ಅಪಾಯಮಟ್ಟದಲ್ಲಿ ನದಿ ಭೋರ್ಗರೆದು ಹರಿಯುತ್ತಿದೆ. ನದಿ ದಂಡೆ ಅಕ್ಕಪಕ್ಕದ ಜಮೀನುಗಳಿಗೆ ನದಿ ನೀರು ಹೊಕ್ಕಿದ್ದು ರೈತರು ಬೆಳೆ ನಾಶವಾಗುವ ಆತಂಕದಲ್ಲಿದ್ದಾರೆ.
ಇದನ್ನೂ ಓದಿ:ಶಿವಮೊಗ್ಗದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ; ಹಾನಿಗೊಳಗಾದ ಪ್ರದೇಶಗಳಲ್ಲಿ ಪರಿಹಾರ ಕಾರ್ಯ - Shivamogga Flood Relief Works