ಶಿವಮೊಗ್ಗ: ಅಡಕೆಗೆ ಭಾರತೀಯ ಸಂಸ್ಕೃತಿಯಲ್ಲಿ ಒಂದು ಸ್ಥಾನವಿದೆ. ಭಾರತದಲ್ಲಿ ಶುಭಕರವಾದ ಕೆಲಸ ಮಾಡುವಾಗ ಅಡಕೆಯನ್ನು ಮುಂದಿಟ್ಟು ಕೆಲಸ ಮಾಡುತ್ತಾರೆ. ಅಡಕೆ ಬೆಳೆ ಈ ಹಿಂದೆ ಸಾಂಪ್ರದಾಯಕ ಬೆಳೆಯಾಗಿತ್ತು. ಆದರೆ, ಈಗ ಅದು ವಾಣಿಜ್ಯ ಬೆಳೆಯಾಗಿದೆ. ಅಡಕೆಯನ್ನು ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಮಾತ್ರ ಬೆಳೆಯಲಾಗುತ್ತಿತ್ತು. ಆದರೆ, ಈಗ ಮಲೆನಾಡಿನಿಂದ ಅರೆ ಮಲೆನಾಡು ಹಾಗೂ ಬಯಲು ಸೀಮೆಯಲ್ಲೂ ಅಡಕೆ ಬೆಳೆಯನ್ನು ಬೆಳೆಯಲಾಗುತ್ತಿದೆ. ಅಡಕೆ ಬೆಳೆಯನ್ನು ಸಂಪ್ರದಾಯಬದ್ದವಾಗಿ ಬೆಳೆದು ಸಂಸ್ಮರಣೆ ಮಾಡಿ ಮಾರಾಟ ಮಾಡಲಾಗುತ್ತದೆ. ಅಡಕೆಯಲ್ಲಿ ಔಷಧೀಯ ಗುಣವಿದೆ. ಇಂತಹ ಅಡಕೆಯು ಇಂದು ಅನೇಕ ರೋಗಗಳಿಗೆ ತುತ್ತಾಗುತ್ತಿದೆ. ಇದರಿಂದ ಅಡಕೆ ಬೆಳೆಗಾರ ಕಷ್ಟ ಅನುಭವಿಸುವಂತಾಗಿದೆ.
ಮೊದಲು ಅಡಕೆ ಬೆಳೆಯಲ್ಲಿ ಉತ್ತಮ ಅಡಕೆಯಿಂದ ಸಂಗ್ರಹಿಸಿ ಸಸಿ ಮಾಡಲಾಗುತ್ತದೆ. ಸಸಿಯನ್ನು ನೆಟ್ಟು ಸುಮಾರು 8-10 ವರ್ಷಗಳ ಬೆಳೆಸಬೇಕಾಗುತ್ತದೆ. ಅಡಕೆಯು ಸುಮಾರು 6 ವರ್ಷಗಳ ನಂತರ ಹೊಂಬಾಳೆ ಬಿಡಲು ಪ್ರಾರಂಭಿಸುತ್ತದೆ. ಪೂರ್ಣ ಪ್ರಮಾಣದ ಅಡಕೆ ಬೆಳೆ ಸಿಗಬೇಕಾದರೆ ಕನಿಷ್ಠ 10 ವರ್ಷ ಬೇಕಾಗುತ್ತದೆ. ಮಧ್ಯ ಕರ್ನಾಟಕದಲ್ಲಿ ಅಡಕೆ ಬೆಳೆಗಳ ಮೇಲೆ ಸಾಕಷ್ಟು ರೈತರು ಅವಲಂಬಿತರಾಗಿದ್ದಾರೆ. ಅಡಕೆಗೆ ಇಂದಿನ ದರ ಕ್ವಿಂಟಾಲ್ ಗೆ 48 ಸಾವಿರ ಇದೆ. ಅಡಕೆಯಲ್ಲಿ ರಾಶಿ, ಗೊರಬಲು, ಚಾಲಿ , ಚಿಪ್ಪು, ಪುಡಿ, ಕೆಂಪು ಹೀಗೆ ಹಲವು ವಿವಿಧ ತಳಿಗಳಿವೆ. ಅಡಕೆಗೆ ರೋಗಭಾದೆಗಳು ಇತ್ತಿಚೀನ ದಿನಗಳಲ್ಲಿ ಹೆಚ್ಚಾಗಿದೆ. ಇದರಲ್ಲಿ ತಲೆಮುಂಡು ರೋಗ, ಹಳದಿ ರೋಗ ಹಾಗೂ ಎಲೆಚುಕ್ಕಿ ರೋಗ ಸೇರಿದಂತೆ ಹಲವು ರೋಗಳು ಅಡಕೆ ಬೆಳಗಾರರನ್ನು ಕಾಡುತ್ತಿವೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿಹೆಚ್ಚು ಬೆಳೆಗಾರರು:ಅಡಕೆಯನ್ನು ನಮ್ಮ ರಾಜ್ಯದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಬೆಳೆಯುತ್ತಾರೆ. ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ದಾವಣಗೆರೆ, ಹಾಸನ ಭಾಗದಲ್ಲಿ ಬೆಳೆಯುತ್ತಾರೆ. ಆದರೆ, ಇತ್ತಿಚೀನ ವರ್ಷಗಳಲ್ಲಿ ಚಿತ್ರದುರ್ಗ, ತಮಕೂರು ಭಾಗದಲ್ಲೂ ಸಹ ಅಡಕೆ ಬೆಳೆ ಬೆಳೆಯುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆ- 92.181 ಹೆಕ್ಟರ್, ಚಿಕ್ಕಮಗಳೂರು ಜಿಲ್ಲೆ-72.998.7 ಹೆಕ್ಟರ್ ಮತ್ತು ದಾವಣಗೆರೆ ಜಿಲ್ಲೆ- 84 ಸಾವಿರ ಹೆಕ್ಟೇರ್ ಅಡಕೆ ಬೆಳೆ ಬೆಳೆಯಲಾಗಿದೆ.
ಈ ಕುರಿತು ಮಾತನಾಡಿದ ಅಡಕೆ ಬೆಳೆಗಾರರಾದ ರಮೇಶ್ ಹೆಗ್ಡೆ, ಶಿವಮೊಗ್ಗ ಜಿಲ್ಲೆಯು ರಾಜ್ಯದಲ್ಲಿಯೇ ಅಡಕೆ ಬೆಳೆಯುವ ಜಿಲ್ಲೆಯಾಗಿದೆ. ಅದೇ ರೀತಿ ಕರ್ನಾಟಕ ರಾಜ್ಯ ಇಡೀ ದೇಶದಲ್ಲಿಯೇ ಅತಿ ಹೆಚ್ಚು ಅಡಕೆ ಬೆಳೆಯುವ ರಾಜ್ಯವಾಗಿದೆ. ಅಡಕೆ ಬೆಳೆಗಾರರಿಗೆ ಎಲೆಚುಕ್ಕಿ ರೋಗ ಬಹುವಾಗಿ ಕಾಡುತ್ತಿದೆ. ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಯಲ್ಲಿ ಎಲೆಚುಕ್ಕೆ ರೋಗ ಬಹುವಾಗಿ ಹರಡುತ್ತಿದೆ. ಎಲೆಚುಕ್ಕೆ ರೋಗಕ್ಕೆ ಸೂಕ್ತ ನಿಯಂತ್ರಣದ ವ್ಯವಸ್ಥೆ ಆಗಬೇಕಿದೆ. ಅಡಕೆ ತಳಿ, ಅದರ ರೋಗ ಹಾಗೂ ನಿಯಂತ್ರಣದ ಕುರಿತು ಸಂಶೋಧನೆಯಾಗಬೇಕಿದೆ. ಇದಕ್ಕಾಗಿ ಅನುದಾನ ಬಿಡುಗಡೆಯಾಗಬೇಕಿದೆ ಎಂದರು. ಈಗ ಇರುವ ಔಷಧಗಳಿಂದ ಇದುವರೆಗೂ ಶಾಶ್ವತವಾಗಿ ಎಲೆಚುಕ್ಕೆ ರೋಗ ನಿಯಂತ್ರಣ ಆಗಿಲ್ಲ. ಆದರೂ ತಾತ್ಕಾಲಿಕವಾಗಿ ಔಷಧ ನಿಂಪಡಣೆ ಮಾಡಲು ತೋಟಗಾರಿಕ ಇಲಾಖೆ ಹೇಳಿದೆ. ಅದಕ್ಕೆ ಈ ಔಷಧಗಳನ್ನು ಉಚಿತವಾಗಿ ಹಾಗೂ ಸಬ್ಸಡಿ ದರದಲ್ಲಿ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.