ಬೆಂಗಳೂರು:"ಈಶ್ವರಪ್ಪ ತಮ್ಮ ಪುತ್ರನಿಗೆ ಟಿಕೆಟ್ ಸಿಗಲಿಲ್ಲ ಎಂದು ನಮ್ಮ ವಿರುದ್ಧ ಈ ರೀತಿ ಆರೋಪ ಮಾಡುವುದು ಸರಿಯಲ್ಲ. ಅಭ್ಯರ್ಥಿಗಳ ಆಯ್ಕೆ ಮಾಡುವುದು ಪಕ್ಷದ ಕೇಂದ್ರ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿ. ಅಲ್ಲಿ ಎಲ್ಲರೂ ಸೇರಿ ಚರ್ಚಿಸಿ ಸರ್ವಸಮ್ಮತ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆಯೇ ಹೊರತು ಯಡಿಯೂರಪ್ಪ ವೈಯಕ್ತಿವಾಗಿ ಯಾವುದೇ ತೀರ್ಮಾನ ಕೈಗೊಳ್ಳುವುದಿಲ್ಲ." ಎಂದು ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ವಿರುದ್ಧ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕಿಡಿಕಾರಿದರು.
ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಂಡಾಯವಾಗಿ ನಿಲ್ಲುವ ತೀರ್ಮಾನ ಮಾಡಬೇಡಿ ಎಂದು ಅವರಿಗೆ ಎಲ್ಲ ನಾಯಕರೂ ಹೇಳಿದ್ದಾರೆ. ಇದರ ಮೇಲೆ ಅಂತಿಮವಾಗಿ ಅವರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡೋಣ. ಈಗಾಗಲೇ ಎಲ್ಲರೂ ಅವರೊಂದಿಗೆ ಮಾತನಾಡಿದ್ದಾರೆ. ನಾನೂ ಅವರಿಗೆ ವಿನಂತಿ ಮಾಡಿದ್ದೆ. ಮುಂದಿನದ್ದು ಅವರಿಗೆ ಬಿಟ್ಟ ವಿಚಾರ. ಎಲ್ಲವೂ ಸರಿಹೋಗಲಿದೆ ಎನ್ನುವ ವಿಶ್ವಾಸವಿದೆ ಮತ್ತೆ ಅವರೊಂದಿಗೆ ಮಾತುಕತೆ ನಡೆಸಲ್ಲ" ಎಂದು ಮಾಜಿ ಸಿಎಂ ಸ್ಪಷ್ಟಪಡಿಸಿದ್ದಾರೆ.
"ನಿನ್ನೆ ಅಮಿತ್ ಶಾ, ಜೆ.ಪಿ. ನಡ್ಡಾ ಜೊತೆ ಸುದೀರ್ಘವಾಗಿ ಚರ್ಚೆ ನಡೆಸಿ ಉಳಿದ ಐದು ಕ್ಷೇತ್ರಗಳ ಬಗ್ಗೆ ಸಾಕಷ್ಟು ಚರ್ಚೆ ಮಾಡಿದ್ದೇವೆ. ಅಂತಿಮವಾಗಿ ಮೋದಿ ಜೊತೆ ಸಮಾಲೋಚನೆ ನಡೆಸಿ 22ರಂದು ಹೆಸರು ಪ್ರಕಟಿಸಲಾಗುತ್ತದೆ. ಬಿಜೆಪಿ ಜೆಡಿಎಸ್ ಹೊಂದಾಣಿಕೆಯಿಂದ ಎಲ್ಲಾ 28 ಕ್ಷೇತ್ರಗಳಲ್ಲಿ ಗೆಲ್ಲಲು ಸಾಧ್ಯವಾಗಲಿದೆ. ದೇವೇಗೌಡರು ಕೂಟ ಮೋದಿ ಹಾಗೂ ಅಮಿತ್ ಶಾ ಅವರ ಸಂಪರ್ಕದಲ್ಲಿದ್ದಾರೆ. ಇದೆಲ್ಲದರ ಪರಿಣಾಮ ನಮ್ಮ ನಿರೀಕ್ಷೆ ಮೀರಿ ಒಳ್ಳೆಯ ಫಲಿತಾಂಶ ಬರುವ ವಿಶ್ವಾಸ ಇದೆ. ಪಟ್ಟಿ ಬಿಡುಗಡೆ ನಂತರ ನಾವೆಲ್ಲ ರಾಜ್ಯ ಪ್ರವಾಸ ಮಾಡಲು ಹೊರಡಲಿದ್ದೇವೆ. ಜನ ಇಂದು ಮೋದಿ ಮತ್ತು ಬಿಜೆಪಿ ಪರ ಇರುವುದರಿಂದಾಗಿ ಹಿಂದಿನ ಚುನಾವಣೆಗಿಂತ ಈ ಚುನಾವಣೆ ನಮ್ಮ ಗೆಲುವಿಗೆ ಬಹಳ ಅನುಕೂಲವಾಗಲಿದೆ" ಎಂದರು.
"ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಮುಂದುವರೆಯಲಿದೆ. ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಹಾಗೂ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಎಲ್ಲರೂ ನಮ್ಮ ಜೊತೆ ಇರಲಿದ್ದಾರೆ. ನಮ್ಮ ಹೈಕಮಾಂಡ್ ತೀರ್ಮಾನ ಅವರಿಗೆ ಮನವರಿಕೆ ಆದ ನಂತರ ಎಲ್ಲವೂ ಸರಿಯಾಗಲಿದೆ. ನಮ್ಮ ಪಕ್ಷದಲ್ಲಿ ಎಲ್ಲವನ್ನೂ ನಾವು ಚರ್ಚಿಸಿದ್ದೇವೆ. ಅವರ ಅಪೇಕ್ಷಿತ ಸೀಟು ಕೊಡಲಾಗುತ್ತದೆ. ಜೆಡಿಎಸ್ಗೆ ಎಷ್ಟು ಕ್ಷೇತ್ರ ಎಂದು 22ರಂದೇ ಗೊತ್ತಾಗಲಿದೆ. ಈಗ ನನಗೆ ಅದು ಗೊತ್ತಿಲ್ಲ. ಅಭ್ಯರ್ಥಿಗಳ ಘೋಷಣೆ ಮುಗಿದ ನಂತರ ಎರಡೂ ಪಕ್ಷಗಳ ನಾಯಕರು ಸೇರಿ ಪ್ರವಾಸಕ್ಕೆ ತೆರಳಲಿದ್ದೇವೆ" ಎಂದರು.
ಈ ಹೇಳಿಕೆಗೆ ನಾನು ಉತ್ತರ ಕೊಡುವುದಿಲ್ಲ:ಲೋಕಸಭಾ ಚುನಾವಣೆ ನಂತರ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೆಂದ್ರ ರಾಜೀನಾಮೆ ನೀಡುವ ಪರಿಸ್ಥಿತಿ ಉದ್ಭವವಾಗಲಿದೆ ಎನ್ನುವ ಬೇಜವಾಬ್ದಾರಿ ಹೇಳಿಕೆಗಳಿಗೆ ನಾನು ಉತ್ತರ ಕೊಡಲ್ಲ. ನಾಡಿನ ಜನ ಉತ್ತರ ಕೊಡಲಿದ್ದಾರೆ. ವಿಜಯೇಂದ್ರ ಅಧ್ಯಕ್ಷ ಆದ ನಂತರ ಪಕ್ಷ ಹೇಗೆ ಬೆಳೆಯುತ್ತಿದೆ ಎಂದು ಎಲ್ಲರಿಗೂ ಗೊತ್ತಿದೆ. ಅನಗತ್ಯವಾಗಿ ಯಡಿಯೂರಪ್ಪ ಅವರು ನನ್ನ ಮಗನಿಗೆ ಟಿಕೆಟ್ ಕೊಡಿಸಲಿಲ್ಲ ಎಂದು ಈಶ್ವರಪ್ಪ ಆರೋಪ ಮಾಡುತ್ತಿದ್ದಾರೆ. ಇನ್ನೆರಡು - ಮೂರು ದಿನಗಳಲ್ಲಿ ಅವರು ಅರ್ಥ ಮಾಡಿಕೊಳ್ಳಲಿದ್ದಾರೆ. ಎಲ್ಲವೂ ಸರಿಹೋಗಲಿದೆ. ಸ್ವಾಭಾವಿಕವಾಗಿ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ, ಮಾಡಲಿ. ಏನು ಮಾಡಲಾಗುತ್ತದೆ" ಎಂದರು.