ಕರ್ನಾಟಕ

karnataka

By ETV Bharat Karnataka Team

Published : Mar 9, 2024, 4:15 PM IST

ETV Bharat / state

ಹುಬ್ಬಳ್ಳಿ: ಸ್ಟಾಕ್ ಇನ್ವೆಸ್ಟ​ಮೆಂಟ್ ಹೆಸರಲ್ಲಿ ನಿವೃತ್ತ ಬ್ಯಾಂಕ್ ಸಿಬ್ಬಂದಿಗೆ 73 ಲಕ್ಷ ರೂ. ವಂಚನೆ

ಸ್ಟಾಕ್​ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಹಣ ಗಳಿಸಬಹುದು ಎಂದು ನಂಬಿಸಿ ನಿವೃತ್ತ ಬ್ಯಾಂಕ್ ಉದ್ಯೋಗಿಗೆ 73.61 ಲಕ್ಷ ರೂ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಹಾಗೆಯೇ ಇನ್ನೊಂದು ಪ್ರಕರಣದಲ್ಲಿ ಗೂಗಲ್​ನಲ್ಲಿ ಲೈಕ್ಸ್, ರೇಟಿಂಗ್ಸ್ ಕೊಟ್ಟು ಹಣ ಗಳಿಸಬಹುದು ಎಂಬ ಸಂದೇಶ ನಂಬಿ ವ್ಯಕ್ತಿಯೊಬ್ಬರು 24 ಲಕ್ಷ ಕಳೆದುಕೊಂಡಿದ್ದಾರೆ.

Etv Bharat
Etv Bharat

ಹುಬ್ಬಳ್ಳಿ:ಖಾಸಗಿ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು ಎಂದು ನಂಬಿಸಿ ಇಲ್ಲಿನ ವಿದ್ಯಾನಗರದ ನಿವೃತ್ತ ಬ್ಯಾಂಕ್ ಉದ್ಯೋಗಿಯೊಬ್ಬರಿಗೆ 73.61 ಲಕ್ಷ ರೂ ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. 73.61 ಲಕ್ಷ ಕಳೆದುಕೊಂಡ ಸಿದ್ದೇಶ್ವರ ಯಲ್ಲಾಪುರ ಅವರು ಹುಬ್ಬಳ್ಳಿ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಫೇಸ್‌ಬುಕ್‌ನಲ್ಲಿ ಬಂದಿದ್ದ ಜಾಹೀರಾತಿನಲ್ಲಿದ್ದ ಮೊಬೈಲ್ ಸಂಖ್ಯೆಗೆ ಸಿದ್ದೇಶ್ವರ ಅವರು ಕರೆ ಮಾಡಿದ್ದರು. ಕರೆ ಸ್ವೀಕರಿಸಿರುವ ಅಪರಿಚಿತ ವ್ಯಕ್ತಿ, ಕೆಕೆಆರ್‌ಸಿಎ ಸ್ಟಾಕ್ ಇನ್ವೆಸ್ಟ್‌ಮೆಂಟ್‌ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು ಎಂದು ನಂಬಿಸಿದ್ದಾನೆ. ಬಳಿಕ ಸಿದ್ದೇಶ್ವರ ಯಲ್ಲಾಪುರ ಹೆಸರಲ್ಲಿ ವಂಚಕರು ಐಡಿ ತಯಾರಿಸಿ, ಲಾಭ ನೀಡುವುದಾಗಿ ಬ್ಯಾಂಕ್ ಖಾತೆಗಳ ವಿವರ ಪಡೆದು ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡಿದ್ದಾರೆ. ಅಂದಾಜು 73 ಲಕ್ಷ ರೂ ಹಣವನ್ನು ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ದೂರಿನಲ್ಲಿ ಸಿದ್ದೇಶ್ವರ ಯಲ್ಲಾಪುರ ದೂರಿದ್ದಾರೆ.

ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ ಹೆಚ್ಚು ಹಣ ಗಳಿಸುವ ಆಮಿಷ: ಧಾರವಾಡ ಮಹಿಳೆಗೆ 23 ಲಕ್ಷ ವಂಚನೆ

ಲೈಕ್ಸ್, ರೇಟಿಂಗ್ಸ್ ಕೊಟ್ಟು ಹಣ ಗಳಿಸಿ ಸಂದೇಶ ನಂಬಬೇಡಿ:ಮತ್ತೊಂದು ಪ್ರಕರಣದಲ್ಲಿ ಮನೆಯಲ್ಲಿ ಬಿಡುವಿನ ವೇಳೆಯಲ್ಲಿ ಕೆಲಸ ಮಾಡಿ ಹೆಚ್ಚಿನ ಹಣ ಗಳಿಸಬಹುದು ಎಂಬುದನ್ನು ನಂಬಿದ ಧಾರವಾಡದ ನಿವಾಸಿ 24.54 ಲಕ್ಷ ಹಣ ಕಳೆದುಕೊಂಡಿದ್ದಾರೆ. ಧಾರವಾಡದ ಯಾಲಕ್ಕಿ ಶೆಟ್ಟರ್ ಕಾಲೋನಿಯ ನಿವಾಸಿ ವಿನಯ ಸಜ್ಜನರ್ ವಂಚನೆಗೊಳಗಾದವರು. ಸಾಮಾಜಿಕ ಜಾಲತಾಣ ಟೆಲಿಗ್ರಾಮ್‌ನಲ್ಲಿ ಪರಿಚಿತನಾದ ವಂಚಕ, ಮನೆಯಲ್ಲಿ ಕುಳಿತು ಸಂಪಾದಿಸುಬಹುದೆಂದು ವಿನಯ ಅವರಿಗೆ ನಂಬಿಸಿ ಲಿಂಕ್ ಕಳುಹಿಸಿದ್ದ. ಹೋಟೆಲ್‌ಗಳಿಗೆ ಲೈಕ್ಸ್, ರಿವ್ಯೂ ಹಾಗೂ ಸ್ಟಾರ್ ರೇಟಿಂಗ್ಸ್ ನೀಡಿದರೆ ಹೆಚ್ಚು ಹಣ ಗಳಿಸಬಹುದು ಎಂದು ವಂಚಕ ನಂಬಿಸಿದ್ದ. ಆರಂಭದಲ್ಲಿ ವಿನಯ್​ಗೆ ಹಣ ನೀಡಿದ್ದ ವಂಚಕ, ಬಳಿಕ ಹೆಚ್ಚಿನ ಹಣ ಹೂಡಿಕೆ ಮಾಡಿದರೆ ಜಾಸ್ತಿ ಲಾಭ ಗಳಿಸಬಹುದು ಎಂದು ನಂಬಿಸಿದ್ದ. ಇದನ್ನು ನಂಬಿ ವಿನಯ್ 24.54 ಲಕ್ಷ ಹಣ ಕಳೆದುಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದೇ ರೀತಿಯ ಪ್ರಕರಣವೊಂದು ಕಳೆದ ವಾರ ಕೂಡ ದಾಖಲಾಗಿತ್ತು. ಆನ್​ಲೈನ್​ ಜಾಹೀರಾತುಗಳಿಗೆ ಲೈಕ್, ರೇಟಿಂಗ್ ನೀಡಿದರೆ ಹೆಚ್ಚು ಲಾಭ ಪಡೆಯಬಹುದು ಎಂದು ಬಂದ ವಾಟ್ಸ್ಆ್ಯಪ್ ಸಂದೇಶ ನಂಬಿ ಉಣಕಲ್‌ ನಿವಾಸಿ ನಿಜಾಮುದ್ದೀನ್ 20 ಲಕ್ಷ ಹಣ ಕಳೆದುಕೊಂಡಿದ್ದರು. ಈ ಕುರಿತು ಇತ್ತೀಚೆಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಾಟ್ಸ್​​ಆ್ಯಪ್​ ಸೇರಿ ಸಾಮಾಜಿಕ ಜಾಲ ತಾಣಗಳಲ್ಲಿ ಬರುವ ಲಿಂಕ್​ಗಳನ್ನು ಕ್ಲಿಕ್ ಮಾಡುವ ಮುನ್ನ ಜನರು ಹುಷಾರಾಗಿರಬೇಕು. ಜೊತೆಗೆ ಸೈಬರ್ ವಂಚಕರ ಜಾಲಕ್ಕೆ ಬೀಳದಂತೆ ಎಚ್ಚರಿಕೆ ವಹಿಸಬೇಕು ಎಂದು ಪೊಲೀಸ್ ಇಲಾಖೆ ಜಾಗೃತಿ ಮೂಡಿಸುತ್ತಲೇ ಇರುತ್ತದೆ. ಆದರೂ ವಂಚಕರ ಮಾತು ನಂಬಿ ಹಣ ಕಳೆದುಕೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ.

ಇದನ್ನೂ ಓದಿ: ಬೆಂಗಳೂರು: ಮ್ಯಾಟ್ರಿಮೋನಿ ವೆಬ್​ಸೈಟ್​​ನಲ್ಲಿ ನಕಲಿ ಪ್ರೊಫೈಲ್​; 250ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿದ್ದ ಆರೋಪಿ ಸೆರೆ

ABOUT THE AUTHOR

...view details