ಅಹಮದಾಬಾದ್: ದೇಶಾದ್ಯಂತ ಇಂದಿನಿಂದ ನವರಾತ್ರಿ ಸಂಭ್ರಮ ಆರಂಭವಾಗಿದೆ. ಈ ಮಧ್ಯೆ ಅಹಮದಾಬಾದ್‌ನ ಹಳೆನಗರದ ಹೃದಯ ಭಾಗದಲ್ಲಿರುವ ವಿಶಿಷ್ಟ ಸಂಪ್ರದಾಯವೊಂದು ಎಲ್ಲರ ಗಮನ ಸೆಳೆಯುತ್ತಿದೆ.
ಇಲ್ಲಿನ ಸಾದು ಮಾತಾನಿ ಪೋಲ್ ಎಂಬಲ್ಲಿ ಪ್ರತಿ ವರ್ಷ ನವರಾತ್ರಿಯ ಎಂಟನೇ ರಾತ್ರಿಯಲ್ಲಿ ಬಾರೋಟ್ ಸಮುದಾಯದ ಪುರುಷರು ಮಹಿಳೆಯರಂತೆ ಸೀರೆಗಳನ್ನು ಧರಿಸಿ ಗರ್ಬಾ ಆಚರಿಸುತ್ತಾರೆ. ಪುರಾತನ ಶಾಪವನ್ನು ಗೌರವಿಸುವುದಕ್ಕಾಗಿ 200 ವರ್ಷಗಳ ಹಿಂದಿನ ಆಚರಣೆಯನ್ನು ಈಗಲೂ ಪುರುಷರು ಆಚರಿಸಿಕೊಂಡು ಬರುತ್ತಿದ್ದಾರೆ.
ಹೀಗಿದೆ ಐತಿಹ್ಯ?: ಈ ಪ್ರಾಚೀನ ಸಂಪ್ರದಾಯಕ್ಕೆ ಒಂದು ಕಥೆ ಕೂಡ ಇದೆ. ಸ್ಥಳೀಯ ನಂಬಿಕೆಯ ಪ್ರಕಾರ, 200 ವರ್ಷಗಳ ಹಿಂದೆ, ಸದುಬೆನ್ ಎಂಬ ಮಹಿಳೆಯ ಬಳಿ ಮೊಘಲ್ ಕುಲೀನನೊಬ್ಬ ತನ್ನ ಉಪಪತ್ನಿಯಾಗಿ ಬೇಡಿಕೆಯಿಟ್ಟಾಗ ಬರೋಟ್ ಸಮುದಾಯದ ಪುರುಷರಿಂದ ರಕ್ಷಣೆ ಕೋರಿದಳು. ಆದರೆ ಪುರುಷರು ಅವಳನ್ನು ರಕ್ಷಿಸಲಿಲ್ಲ. ಇದು ಅವಳ ಮಗುವಿನ ಸಾವಿಗೆ ಕಾರಣವಾಗುತ್ತದೆ. ತನಗಾದ ದುಃಖ ಮತ್ತು ಕೋಪದಲ್ಲಿ, ಸದುಬೆನ್ ಪುರುಷರನ್ನು ಶಪಿಸುತ್ತಾಳೆ. ಅವರ ಮುಂದಿನ ಪೀಳಿಗೆಗಳು ಹೇಡಿಗಳಂತೆ ಬಾಳಲಿ ಮತ್ತು ಪುರುಷರು 'ಸತಿ'ಗಳಾಗಲಿ ಎಂದು ಘೋಷಿಸುತ್ತಾಳೆ. ಇದಕ್ಕಾಗಿ ಇಲ್ಲಿ ಪುರುಷರು ಮಹಿಳೆಯರಂತೆ ಸೀರೆ ಉಟ್ಟು ಗರ್ಬಾವನ್ನು ಆಚರಿಸುತ್ತಾರೆ. ಸದುಬೆನ್ಗಾಗಿ ಇಲ್ಲಿ ದೇವಾಲಯವನ್ನು ಕೂಡ ನಿರ್ಮಿಸಲಾಗಿದೆ.
ಪ್ರಾಯಾಶ್ಚಿತ್ತವಾಗಿ ಗರ್ಬಾ ಆಚರಣೆ: ಪ್ರತಿ ವರ್ಷ, ನವರಾತ್ರಿಯ ರಾತ್ರಿ ಬಾರೋಟ್ ಸಮುದಾಯದ ಪುರುಷರು ಸದು ಮಾತಾ ನಿ ಪೋಲ್‌ನಲ್ಲಿ ಸೇರುತ್ತಾರೆ. ಸೀರೆಗಳನ್ನು ಧರಿಸುತ್ತಾರೆ ಮತ್ತು ಸದುಬೆನ್ ಮಹಿಳೆಯನ್ನು ಕಾಪಾಡದೇ ಇರುವುದರ ಪ್ರಾಯಶ್ಚಿತ್ತವಾಗಿ ಗರ್ಬಾ ಆಚರಿಸುತ್ತಾರೆ. ಇಂದಿಗೂ ಜೀವಂತವಾಗಿರುವ ಈ ಪದ್ಧತಿಯು ನಗರದ ಎಲ್ಲರನ್ನು ಸೆಳೆಯುತ್ತದೆ. ಬರೋಟ್ ಸಮುದಾಯವು ಗುಜರಾತ್‌ನಲ್ಲಿ ಸಾಂಸ್ಕೃತಿಕ ಪರಂಪರೆಯ ಪ್ರಮುಖ ಭಾಗವಾಗಿ ಉಳಿದಿದೆ. ವಿಶೇಷವಾಗಿ ನವರಾತ್ರಿಯಂತಹ ಹಬ್ಬಗಳ ಸಮಯದಲ್ಲಿ ಇವರು ಹೆಚ್ಚಾಗಿ ಒಟ್ಟು ಸೇರುತ್ತಾರೆ.
ಇದನ್ನೂ ಓದಿ: ತಿರುಮಲದಲ್ಲಿ ಬ್ರಹ್ಮೋತ್ಸವ ಸಂಭ್ರಮ; 9 ದಿನವೂ ವಿಶೇಷ ವಾಹನದಲ್ಲಿ ಶ್ರೀವಾರಿ ಸೇವೆ - TIRUMALA BRAHMOTSAVAMS