ಬಲೋದ್( ಛತ್ತೀಸ್‌ಗಢ): ವ್ಯಕ್ತಿಯೊಬ್ಬ ಕ್ಷುಲ್ಲಕ ಕಾರಣಕ್ಕೆ ತನ್ನ ಪತ್ನಿ ಕೊಲೆ ಮಾಡಿ ನೆರವಾಗಿ ಪೊಲೀಸ್ ಠಾಣೆ ಬಂದು ಶರಣಾಗಿರುವ ಘಟನೆ ಕನ್ವಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಸಾಂಗ್ಲಿ ಗ್ರಾಮದಲ್ಲಿ ನಡೆದಿದೆ. ಈಶ್ವರಿ ಸಾಹು ಪತಿಯಿಂದ ಹತ್ಯೆಯಾದ ಪತ್ನಿ. ಕೇವಲ್ ಚಂದ್ ಸಾಹು ಕೊಲೆ ಮಾಡಿದ ಪತಿ ಎಂದು ಗುರುತಿಸಲಾಗಿದೆ.
ಸಣ್ಣಪುಟ್ಟ ವಿಷಯಗಳಿಗೆ ದಂಪತಿ ಪ್ರತಿದಿನ ಜಗಳವಾಡುತ್ತಿದ್ದರು. ಶುಕ್ರವಾರ ಒಂದು ಕಪ್ ಟೀ ತಯಾರಿಸುವ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ಕೋಪದ ಭರದಲ್ಲಿ ಕೇವಲ್ ಅಡುಗೆ ಮನೆಯ ಬಾಗಿಲು ಲಾಕ್ ಮಾಡಿ ಈಶ್ವರಿ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಇದನ್ನು ಗಮಸಿದ ಮಕ್ಕಳಿಬ್ಬರೂ ಬಾಗಿಲು ತೆರೆಯುವಂತೆ ಗೋಗರೆದಿದ್ದಾರೆ, ತಂದೆ ತೆಗೆಯದಿದ್ದಾಗ ಬಾಗಿಲು ಒಡೆಯಲು ಯತ್ನಿಸಿ, ವಿಫಲರಾಗಿದ್ದಾರೆ. ಅಷ್ಟರಲ್ಲಾಗಲೇ ಕೇವಲ್, ಈಶ್ವರಿಗೆ ಚಾಕುವಿನಿಂದ ಇರಿದಿದ್ದಾನೆ, ಇದರಿಂದ ಆಕೆಗೆ ತೀವ್ರ ರಕ್ತಸ್ರಾವವಾಗಿದೆ. ಕೃತ್ಯ ಎಸಗಿದ ಬಳಿಕ ಕೇವಲ್ ಮನೆಯಿಂದ ಪರಾರಿಯಾಗಿದ್ದಾನೆ
ನಂತರ ರಕ್ತದ ಮಡುವಿನಲ್ಲಿ ಬಿದ್ದಿದ್ದ ಈಶ್ವರಿಯನ್ನು ನೆರೆಹೊರೆಯವರು ಧಮ್ತಾರಿಯ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಈಶ್ವರಿ ಸಾವನ್ನಪ್ಪಿದ್ದಾರೆ. ನಂತರ ಕೇವಲ್ ಕನ್ವಾರ್ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
" ಈಶ್ವರಿ ಸಾಹು ಮತ್ತು ಆಕೆಯ ಪತಿ ಕೇವಲ್ ಚಂದ್ ಸಾಹು ಕ್ಷುಲ್ಲಕ ವಿಚಾರಕ್ಕೆ ಜಗಳವಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ" ಎಂದು ಕನ್ವಾರ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಲತಾ ತಿವಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಸಂಧ್ಯಾ ಥಿಯೇಟರ್ ಪ್ರಕರಣ: ನಟ ಅಲ್ಲು ಅರ್ಜುನ್ಗೆ ಜಾಮೀನು ಮಂಜೂರು