ಬೆಂಗಳೂರು: ಮುಡಾ ಹಗರಣದಲ್ಲಿ ಅಕ್ರಮವಾಗಿ ಹಣ ವರ್ಗಾವಣೆಯಾಗಿರುವುದಾಗಿ ದೂರು ನೀಡಿದ್ದ ಮೈಸೂರಿನ ಸ್ನೇಹಮಯಿ ಕೃಷ್ಣ ಅವರು ಜಾರಿ ನಿರ್ದೇಶಾನಾಲಯ (ಇಡಿ) ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಮೈಸೂರು ಅಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ ಎಸಗಿರುವುದಾಗಿ ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜುನ ಹಾಗೂ ಅಂದಿನ ಮುಡಾ ಆಯುಕ್ತರ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಈ ಮಧ್ಯೆ ಮುಡಾ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆಯಾಗಿದ್ದು ಸಿದ್ದರಾಮಯ್ಯ ಒಳಗೊಂಡಂತೆ ಸಂಬಂಧಿಸಿದ ವ್ಯಕ್ತಿಗಳ ವಿರುದ್ಧ ತನಿಖೆ ಕೋರಿ ಸ್ನೇಹಮಯಿ ಕೃಷ್ಣ ಅವರು ಸೆ.27ರಂದು ಇಡಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ಅಧಿಕಾರಿಗಳು ಇಂದು ವಿಚಾರಣೆಗೆ ಬರುವಂತೆ ಅ.1ರಂದು ನೋಟಿಸ್ ಜಾರಿ ಮಾಡಿದ್ದರು. ಇದರಂತೆ ಇಂದು ಇಡಿ ಮುಂದೆ ಹಾಜರಾಗಿದ್ದಾರೆ.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸ್ನೇಹಮಯಿ ಕೃಷ್ಣ, "ವಿಚಾರಣೆಗೆ ಹಾಜರಾಗುವಂತೆ ಇಡಿ ನೋಟಿಸ್ ನೀಡಿ ನನ್ನ ಮತ್ತು ನನ್ನ ಕುಟುಂಬದ ಬಗ್ಗೆ ದಾಖಲೆ ಕೇಳಿದ್ದರು. ಆಸ್ತಿ ಪತ್ರ, ಬ್ಯಾಂಕ್ ಖಾತೆ ವಿವರ ಹಾಗೂ ಆದಾಯದ ಮಾಹಿತಿ ಕೇಳಿದ್ದರು. ಇಡಿ ಅಧಿಕಾರಿಗಳ ತನಿಖೆ ಪ್ರಕಾರ ಮೊದಲು ದೂರುದಾರರ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಾರೆ. ಹೀಗಾಗಿ ಮೊದಲು ನನ್ನ ವಿಚಾರಣೆಗೆ ಕರೆದಿದ್ದಾರೆ. 500 ಪುಟಗಳ ದಾಖಲೆಗಳನ್ನು ಸಲ್ಲಿಸಿ ವಿಚಾರಣೆಗೆ ಹಾಜರಾಗುತ್ತಿದ್ದೇನೆ" ಎಂದರು.
ಪ್ರಕರಣದ ಹಿಂದೆ ಕಾಣದ ಕೈಗಳು ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿ, "ಇಲ್ಲಿ ಸಿಎಂ ವಿರುದ್ಧ ಹೋರಾಡಲು ಯಾರಾದರೇನು? ಸಮಾಜದ ಕಟ್ಟ ಕಡೆಯ ವ್ಯಕ್ತಿ ಕೂಡ ಸಿಎಂ ವಿರುದ್ಧ ಹೋರಾಟ ಮಾಡಬಹುದು. ಸಿಎಂ ವಿರುದ್ಧ ಒಬ್ಬ ಮಧ್ಯಮವರ್ಗದವನು ಹೋರಾಟ ಮಾಡಬಾರದಾ? ಕಾಣದ ಕೈಗಳು ಇದಾವೋ ಇಲ್ವೋ ಅನ್ನೋದು ಮುಖ್ಯವಲ್ಲ. ಸಿಎಂ ವಿರುದ್ಧ ಕೇಳಿ ಬಂದಿರುವ ಆರೋಪ ಎಷ್ಟು ಸತ್ಯ ಅಥವಾ ಸುಳ್ಳು ಅನ್ನೋದು ನೋಡಬೇಕು. ಹಾಗೇನಾದರೂ ನನ್ನ ಮೇಲೆ ಅನುಮಾನವಿದ್ದರೆ ಯಾವ ತನಿಖಾ ಸಂಸ್ಥೆಯಾದರೂ ನನ್ನ ವಿಚಾರಣೆ ನಡೆಸಬಹುದು" ಎಂದರು.
"ಸಿಬಿಐಗೆ ವರ್ಗಾವಣೆ ವಿಚಾರ ಸಂಬಂಧ ಈಗಾಗಲೇ ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ನನ್ನ ಕಣ್ಣ ಮುಂದೆಯೇ ಕೇಸ್ ತನಿಖೆ ಶುರು ಮಾಡಿದ್ದಾರೆ. ಆದರೂ ನಾನು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದೇನೆ. ಸಿಬಿಐ ತನಿಖೆ ಬಗ್ಗೆ ನಮ್ಮ ವಕೀಲರು ವಾದ ಮಾಡಲಿದ್ದಾರೆ" ಎಂದರು.
ಇದನ್ನೂ ಓದಿ: ಮುಡಾ: ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗುವಂತೆ ಸ್ನೇಹಮಯಿ ಕೃಷ್ಣಗೆ ED ನೋಟಿಸ್