ಬೆಂಗಳೂರು: ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಮಾಜಿ ಆಪ್ತ ಸಹಾಯಕರಾಗಿದ್ದ ಎನ್.ಎಸ್. ವಿನಯ್ ಅಪಹರಣಕ್ಕೆ ಯತ್ನಿಸಿದ ಆರೋಪದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಮಾಜಿ ಆಪ್ತ ಸಹಾಯಕರಾಗಿದ್ದ ಎನ್.ಆರ್. ಸಂತೋಷ್‌ಗೆ ಮಂಜೂರಾಗಿದ್ದ ನಿರೀಕ್ಷಣಾ ಜಾಮೀನು ರದ್ದು ಕೋರಿ ನಗರದ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆಯಾಗಿದೆ.
ಸಂತೋಷ್‌ಗೆ ನೀಡಲಾಗಿರುವ ಜಾಮೀನು ರದ್ದುಪಡಿಸುವಂತೆ ಕೋರಿ ಪ್ರಕರಣದ ದೂರುದಾರರಾಗಿರುವ ಎನ್.ಎಸ್. ವಿನಯ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿ ನಗರದ 56ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಆಕ್ಷೇಪಣೆ ಸಲ್ಲಿಸುವಂತೆ ಸಂತೋಷ್‌ಗೆ ಸೂಚನೆ ನೀಡಿ ವಿಚಾರಣೆಯನ್ನು ಫೆ.17ಕ್ಕೆ ಮುಂದೂಡಿದೆ.
ವಿನಯ್ ಅಪಹರಣಕ್ಕೆ ಯತ್ನಿಸಿದ ಘಟನೆ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2017ರ ಮೇ 11ರಂದು ನಡೆದಿತ್ತು. ಈ ಕುರಿತು ಮಹಾಲಕ್ಷ್ಮೀ ಲೇಔಟ್ ಠಾಣೆಗೆ ವಿನಯ್ ದೂರು ನೀಡಿದ್ದರು. ಪ್ರಕರಣದಲ್ಲಿ ಸಂತೋಷ್ ಮೊದಲ ಆರೋಪಿಯಾಗಿದ್ದಾರೆ. ಅವರಿಗೆ 2017ರ ಆ. 5ರಂದು 56ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ನಿರೀಕ್ಷಣಾ ಜಾಮೀನು ನೀಡಿತ್ತು. ಸಂತೋಷ್ ಮತ್ಯಾವುದೇ ಅಪರಾಧ ಪ್ರಕರಣದಲ್ಲಿ ಭಾಗಿಯಾದರೆ ನಿರೀಕ್ಷಣಾ ಜಾಮೀನಿನ ಬಾಂಡ್‌ಗಳು ತನ್ನಿಂದ ತಾನೇ ರದ್ದಾಗುತ್ತವೆ ಎಂದು ಇದೇ ವೇಳೆ ನ್ಯಾಯಾಲಯ ಷರತ್ತು ವಿಧಿಸಿತ್ತು.
ಇದೀಗ ಕೋರ್ಟ್ ಮೆಟ್ಟಿಲೇರಿರುವ ದೂರುದಾರ ವಿನಯ್, ಸಂತೋಷ್ ಸೇರಿದಂತೆ ಒಟ್ಟು 14 ಮಂದಿ ವಿರುದ್ಧ ಅಕ್ರಮ ಕೂಟ, ಸಂಘಟಿತ ಅಪರಾಧ ಕೃತ್ಯ ಎಸಗಿದ, ಹಾಸನದ ಅರಸಿಕೆರೆ ನಗರಸಭೆಯ ಉಪಾಧ್ಯಕ್ಷ ಮೋಹನ್ ಅವರಿಗೆ ಜೀವ ಬೆದರಿಕೆ ಮತ್ತು ಜಾತಿ ನಿಂದನೆ ಮಾಡಿದ ಆರೋಪದ ಮೇಲೆ 2025ರ ಜ.26ರಂದು ಅರಸಿಕೆರೆ ಟೌನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆದ್ದರಿಂದ ಈ ಹಿಂದೆ ನ್ಯಾಯಾಲಯ ವಿಧಿಸಿರುವ ಷರತ್ತು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಸಂತೋಷ್‌ಗೆ ಮಂಜೂರು ಮಾಡಲಾಗಿರುವ ನಿರೀಕ್ಷಣಾ ಜಾಮೀನು ರದ್ದುಪಡಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಜಯಲಲಿತಾ ಚಿನ್ನಾಭರಣ ಒಯ್ಯಲು 6 ದೊಡ್ಡ ಪೆಟ್ಟಿಗೆ ತನ್ನಿ: ತಮಿಳುನಾಡು ಸರ್ಕಾರಕ್ಕೆ ಕೋರ್ಟ್ ನಿರ್ದೇಶನ
ಇದನ್ನೂ ಓದಿ: ಶಾಸಕ ವಿನಯ್ ಕುಲಕರ್ಣಿ ವಿರುದ್ಧದ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್