ಬೆಂಗಳೂರು:ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅಕ್ರಮದ ತನಿಖೆಯಲ್ಲಿ ದೂರುದಾರರೊಬ್ಬರ ವಿಚಾರಣೆ ವೇಳೆ ಮುಖ್ಯಮಂತ್ರಿಗಳ ಹೆಸರನ್ನು ಹೇಳುವಂತೆ ಒತ್ತಡ ಹೇರಿದ ಆರೋಪದಲ್ಲಿ ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳ ವಿರುದ್ಧ ದಾಖಲಾಗಿದ್ದ ಎಫ್ಐಆರ್ಗೆ ಹೈಕೋರ್ಟ್ ತಡೆ ನೀಡಿ ಆದೇಶಿಸಿದೆ.
ಅಲ್ಲದೆ, ಪ್ರಕರಣ ಸಂಬಂಧ ಲಿಖಿತ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ಆದೇಶಿಸಿದೆ. ತಮ್ಮ ವಿರುದ್ಧದ ಪ್ರಕರಣ ರದ್ದು ಕೋರಿ ಜಾರಿ ನಿರ್ದೇಶನಾಲಯದ ಉಪನಿರ್ದೇಶಕ ಮಿತ್ತಲ್ ಮತ್ತು ಸಹಾಯಕ ನಿರ್ದೇಶಕ ಮುರಳಿ ಕಣ್ಣನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಪ್ರಕರಣದಲ್ಲಿನ ಅಂಶಗಳು ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸುವುದಾಗಿದೆ. ಈ ಪ್ರಕರಣ ಮುಂದುವರೆದಲ್ಲಿ ಕಾನೂನು ಪ್ರಕ್ರಿಯೆ ದುರ್ಬಳಕೆ ಮಾಡಿದಂತಾಗಲಿದೆ. ಅಲ್ಲದೆ, ಅಧಿಕಾರಿಗಳ ಕೆಲಸ ಮಾಡುವುದಕ್ಕೆ ಸಾಧ್ಯವಿಲ್ಲದಂತಾಗಲಿದೆ. ಹೀಗಾಗಿ ಪ್ರಕರಣದ ತನಿಖೆಗೆ ತಡೆ ನೀಡಲಾಗುತ್ತಿದೆ ಎಂದು ಪೀಠ ತಿಳಿಸಿದೆ.
ವಿಚಾರಣೆ ವೇಳೆ ಜಾರಿ ನಿರ್ದೇನಾಲಯದ ಪರ ವಾದ ಮಂಡಿಸಿದ ಸಹಾಯಕ ಸಾಲಿಸಿಟರ್ ಜನರಲ್ ಅರವಿಂದ ಕಾಮತ್, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದ ಅವ್ಯವಹಾರ ಸಂಬಂಧ ಇಡಿ ಅಧಿಕಾರಿಗಳು ಕಚೇರಿ ಮೇಲೆ ಜೂನ್ 18 ಮತ್ತು 19ರಂದು ದಾಳಿ ನಡೆಸಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಇದರಲ್ಲಿ ಹಲವು ಮಂದಿಯ ವಿರುದ್ಧ ದೋಷಾರೋಪವನ್ನು ಸಾಬೀತು ಪಡಿಸಬಹುದಾದಂತಹ ಸಾಕ್ಷ್ಯಗಳು ಲಭ್ಯವಾಗಿದ್ದವು.
ಈ ಆಧಾರದಲ್ಲಿ ನಿಗಮದ ಹೆಚ್ಚುವರಿ ನಿರ್ದೇಶಕರಾದ ಕಲ್ಲೇಶ್ ಎಂಬುವರನ್ನು ಜು.16ರಂದು ವಿಚಾರಣೆಗೆ ಕರೆದಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹಲವು ಮಾಹಿತಿ ಪಡೆದು ಕಳುಹಿಸಿದ್ದರು. ಈ ವೇಳೆ ವಿಚಾರಣೆ ವೇಳೆ 17 ಪ್ರಶ್ನೆಗಳನ್ನು ಕೇಳಿದ್ದು, ಮೂರು ಪ್ರಶ್ನೆಗಳಿಗೆ ಉತ್ತರಿಸಲು ನನಗೆ ಕಡತ ಬೇಕಾಗಿದೆ. ಕೆಳ ಹಂತದ ಅಧಿಕಾರಿಗಳಿಂದ ಮಾಹಿತಿ ಪಡೆಯಬೇಕು ಎಂದು ಕೋರಿದ್ದರು. ಇದಾದ ಆರು ದಿನಗಳ ಬಳಿಕ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧ ಕಲ್ಲೇಶ್ ಅವರು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.
ಇಡಿ ಕಚೇರಿ ಮತ್ತು ಪೊಲೀಸ್ ಠಾಣೆಗೆ ಎರಡು ನಿಮಿಷದ ನಡಿಗೆಯಾದರೂ, ಆರು ದಿನಗಳ ಬಳಿಕ ದೂರು ದಾಖಲಿಸಿದ್ದು. ಈ ಘಟನೆ ಆ ಮೂಲಕ ಇಡಿ ಅಧಿಕಾರಿಗಳ ಅವರ ನಿಯಮಗಳ ಪ್ರಕಾರ ತನಿಖೆ ನಡೆಸುವುದಕ್ಕೆ ರಾಜ್ಯ ಸರ್ಕಾರ ಬೆದರಿಕೆ ಹಾಕಲಾಗುತ್ತಿದೆ. ಇಡಿ ಬಳಿ ದೋಷಾರೋಪ ನಿರೂಪಿಸಲು ಅಗತ್ಯವಿರುವ ದಾಖಲೆಗಳಿದ್ದರೂ, ಅಧಿಕಾರಿಗಳ ವಿರುದ್ಧವೇ ಕ್ರಿಮಿನಲ್ ಪ್ರಕರಣ ದಾಖಲಿಸಿ ಸಿಲುಕಿಸುವ ಕೆಲಸ ನಡೆಯುತ್ತಿದೆ. ಇವೆಲ್ಲವನ್ನೂ ಗಮನಿಸಿದರೆ ಇದೊಂದು ವಾಮಮಾರ್ಗದ ಯೋಜನೆಯಾಗಿದ್ದು, ದುರುದ್ದೇಶದಿಂದ ಕೂಡಿದೆ ಎಂದು ವಿವರಿಸಿದರು.
ಪ್ರಕರಣದ ಹಿನ್ನೆಲೆ:ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧ ನಿಗಮದ ಅಕ್ರಮ ಬೆಳಕಿಗೆ ಬಂದ ಬಳಿಕ ನಿಗಮದಲ್ಲಿ ಲೆಕ್ಕಾಧಿಕಾರಿಯಾಗಿದ್ದ ಚಂದ್ರಶೇಖರ್ ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಯಾದ ವ್ಯಕ್ತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಲೆಕ್ಕಾಧಿಕಾರಿ ಮತ್ತು ಯೂನಿಯನ್ ಬ್ಯಾಂಕ್ ಆರು ಮಂದಿ ಅಧಿಕಾರಿಗಳ ವಿರುದ್ಧ ಡೆತ್ ನೋಟ್ ಬರೆದಿಟ್ಟಿದ್ದರು.
ಇದಾದ ಬಳಿಕ ಅವರ ಪತ್ನಿ ಕವಿತಾ ಎಂಬುವರು 2024ರ ಮೇ 27ರಂದು ಶಿವಮೊಗ್ಗ ಪೊಲೀಸರಿಗೆ ಕೊಲೆ ಆರೋಪದಲ್ಲಿ ದೂರು ದಾಖಲಿಸಿದ್ದರು.
ನಂತರ ಹಲವು ಸಂದರ್ಭಗಳಲ್ಲಿ ಅಕ್ರಮ ಹಣ ವರ್ಗಾವಣೆ ಮಾಡಿರುವ ಆರೋಪ ಸಂಬಂಧ ಸಿಬಿಐ ಈ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿತ್ತು. ಇಡಿ ಅಧಿಕಾರಿಗಳಿಗೆ ಗಮನಕ್ಕೆ ಬಂದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು.
ನಿಗಮದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಲು ಪರಿಶೀಲಿಸಲಾಗಿದ್ದು, ಈ ಸಂದರ್ಭದಲ್ಲಿ ಹಲವು ಮಂದಿಯ ವಿರುದ್ಧ ದೋಷಾರೋಪವನ್ನು ಸಾಬೀತು ಪಡಿಸಬಹುದಾದಂತಹ ಸಾಕ್ಷ್ಯಗಳು ಲಭ್ಯವಾಗಿದ್ದವು. ಅದರಂತೆ ನಿಗಮದ ಹೆಚ್ಚುವರಿ ನಿರ್ದೇಕರಾಗಿದ್ದ ಕಲ್ಲೇಶ್ ಎಂಬುವರಿಗೆ ವಿಚಾರಣೆಗೆ ಹಾಜರಾಗುವಂತೆ ಹಾಜರಾಗುವಂತೆ ಇಡಿ ಕಚೇರಿಗೆ ಬರಲು ಸೂಚಿಸಿ ವಿಚಾರಣೆಗೊಳಪಡಿಸಿ ಕಳುಹಿಸಲಾಗಿತ್ತು. ಇದಾದ ಒಂದು ವಾರದ ಬಳಿಕ ಜಾರಿ ನಿದೇರ್ಶನಾಲಯದ ಉಪನಿರ್ದೇಶಕರು ಹಾಗೂ ಸಹಾಯಕ ನಿರ್ದೇಶಕರ ವಿರುದ್ಧ ಕಲ್ಲೇಶ್ ಅವರು ಶೇಷಾದ್ರಿಪುರಂ ಠಾಣೆಗೆ ದೂರು ನೀಡಿದ್ದರು. ಆ ಬಳಿಕ, ಸ್ಥಳದ ಆಧಾರದಲ್ಲಿ ದೂರನ್ನು ವರ್ಗಾವಣೆ ಪಡೆದಿರುವ ವಿಲ್ಸನ್ ಗಾರ್ಡನ್ ಠಾಣಾ ಪೊಲೀಸರು ಇ.ಡಿ. ಅಧಿಕಾರಿಗಳಿಬ್ಬರ ವಿರುದ್ಧ ಎಫ್ಐ ಆರ್ ದಾಖಲಿಸಿಕೊಂಡಿದ್ದರು. ಇದನ್ನು ಪ್ರಶ್ನಿಸಿ ಇಡಿ ಅಧಿಕಾರಿಗಳು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ:ವಾಲ್ಮೀಕಿ ನಿಗಮ ಹಗರಣ ಸಿಬಿಐಗೆ ವಹಿಸಲು ಕೋರಿ ಯೂನಿಯನ್ ಬ್ಯಾಂಕ್ ಅರ್ಜಿ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ - High Court notice to Govt