ಬೆಂಗಳೂರು :ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ (ರೇರಾ) ಮೇಲ್ಮನವಿ ನ್ಯಾಯಾಧಿಕರಣಕ್ಕೆ ಅಧ್ಯಕ್ಷರ ನೇಮಕಾತಿ ವಿಳಂಬವು ನ್ಯಾಯಾಲಯದಲ್ಲಿ ಬಾಕಿ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದ್ದು, ಶೀಘ್ರದಲ್ಲಿ ಅಧ್ಯಕ್ಷರ ನೇಮಕ ಮಾಡಬೇಕು ಎಂದು ನಿರ್ದೇಶನ ನೀಡಿದೆ.
ರೇರಾ ಮೇಲ್ಮನವಿ ನ್ಯಾಯಾಧಿಕರಣಕ್ಕೆ ಮುಖ್ಯಸ್ಥರನ್ನು ನೇಮಿಸುವಂತೆ ಕೋರಿ ಬೆಂಗಳೂರಿನ ಮ್ಯಾಥ್ಯೂ ಥಾಮಸ್ ಎಂಬುವವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ನಡೆಸಿತು. ನ್ಯಾಯಾಧಿಕರಣಕ್ಕೆ ಅಧ್ಯಕ್ಷರನ್ನು ನೇಮಿಸಲು ಹಾಗೂ ಅಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಸರ್ಕಾರ ಕ್ರಮಕೈಗೊಂಡಿಲ್ಲ. ರೇರಾದ ಸೆಕ್ಷನ್ 22ರ ಪ್ರಕಾರ ರಾಜ್ಯ ಸರ್ಕಾರ ಹುದ್ದೆಗಳನ್ನು ತುಂಬಿದರೆ ಪ್ರಕ್ರಿಯೆ ಮುಂದುವರಿಯಲಿದೆ. ರೇರಾ ಹೊರಡಿಸಿದ ಆದೇಶಗಳನ್ನು ಕಾಯಿದೆಯ ಸೆಕ್ಷನ್ 44(5)ರ ಅಡಿ ಪ್ರಶ್ನಿಸಬಹುದಾಗಿದೆ. ಮೇಲ್ಮನವಿ ನ್ಯಾಯಾಧಿಕರಣವು 60 ದಿನಗಳ ಒಳಗಾಗಿ ಮೇಲ್ಮನವಿ ಇತ್ಯರ್ಥಪಡಿಸಬೇಕು. ಆದರೆ, ನ್ಯಾಯಾಧಿಕರಣಕ್ಕೆ ಅಧ್ಯಕ್ಷರನ್ನು ನೇಮಕ ಮಾಡದಿರುವುದರಿಂದ ಸಕ್ಷಮ ಪ್ರಾಧಿಕಾರ ಮಾಡಿದ ಆದೇಶಗಳನ್ನು ಪ್ರವರ್ತಕರು ಪ್ರಶ್ನಿಸಿದ್ದು, ಸಾಕಷ್ಟು ಅರ್ಜಿಗಳು ಹೈಕೋರ್ಟ್‌ಗೆ ಸಲ್ಲಿಕೆಯಾಗಿವೆ ಎಂದು ತಿಳಿಸಿದೆ.
ಅಲ್ಲದೇ, ಈ ಎಲ್ಲ ಅರ್ಜಿಗಳು ನ್ಯಾಯಾಧಿಕರಣದ ಮುಂದೆ ಸಲ್ಲಿಸಬೇಕಾಗಿದೆ. ನ್ಯಾಯಾಧಿಕರಣ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ಏಕೈಕ ಕಾರಣಕ್ಕೆ ಈ ನ್ಯಾಯಾಲಯದಲ್ಲಿ ಸಾಕಷ್ಟು ಅರ್ಜಿಗಳು ಬಾಕಿ ಉಳಿದಿವೆ. ರಾಜ್ಯ ಸರ್ಕಾರವು ಅಧ್ಯಕ್ಷರನ್ನು ನೇಮಕ ಮಾಡದಿರುವುದರಿಂದ ನ್ಯಾಯಾಧಿಕರಣ ಕೆಲಸ ಮಾಡುತ್ತಿಲ್ಲ. ಹೀಗಾಗಿ, ಮೇಲ್ನೋಟಕ್ಕೆ ಹೈಕೋರ್ಟ್‌ನಲ್ಲಿ ಬಾಕಿ ಪ್ರಕರಣ ಹೆಚ್ಚಲು ಕಾರಣವಾಗುತ್ತಿದೆ ಎಂದು ಪೀಠ ಹೇಳಿದೆ.