ಬೆಂಗಳೂರು:ಅಶ್ಲೀಲ ವಿಡಿಯೋ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ತಮ್ಮ ವಿರುದ್ಧದ ದಾಖಲಾಗಿದ್ದ ಎಫ್‌ಐಆರ್ ರದ್ದು ಕೋರಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಸಲ್ಲಿಸಿರುವ ಅರ್ಜಿಯ ಸಂಬಂಧ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿರುವ ಹೈಕೋರ್ಟ್, ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ.
ರೇವಣ್ಣ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೆ, ಸೋಮವಾರ ಅರ್ಜಿ ವಿಚಾರಣೆಗೆ ನಿಗದಿ ಪಡಿಸಲಾಗುವುದು ಎಂದು ತಿಳಿಸಿ ವಿಚಾರಣೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ.ನಾಗೇಶ್, ''ಪ್ರಕರಣದಲ್ಲಿ ಅರ್ಜಿದಾರ ರೇವಣ್ಣ ಅವರ ಪಾತ್ರ ಇಲ್ಲ. ಅಪಹರಣ ಮಾಡಬೇಕಾದಲ್ಲಿ ಬೆದರಿಕೆ ಹಾಕಬೇಕಾಗುತ್ತದೆ. ಈ ಪ್ರಕರಣದಲ್ಲಿ ಆ ರೀತಿಯ ಪ್ರಕ್ರಿಯೆ ನಡೆದಿಲ್ಲ. ಹೀಗಾಗಿ, ಎಫ್‌ಐಆರ್ ದಾಖಲಿಸಿರುವುದೇ ಕಾನೂನುಬಾಹಿರ. ಆದ್ದರಿಂದ ಎಫ್‌ಐಆರ್ ರದ್ದುಪಡಿಸಬೇಕು'' ಎಂದು ಮನವಿ ಮಾಡಿದರು.
''ಅಲ್ಲದೆ, ಸಂತ್ರಸ್ತ ಮಹಿಳೆ ಹಲವು ವರ್ಷಗಳಿಂದ ರೇವಣ್ಣ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದವರು, ಅವರಿಗೆ ರೇವಣ್ಣ ಯಾವುದೇ ಸೂಚನೆ ನೀಡಿಲ್ಲ. ಜೊತೆಗೆ, ಸಂತ್ರಸ್ತೆಯನ್ನು ಅರ್ಜಿದಾರರ ವಶದಲ್ಲಿಯೂ ಇಟ್ಟುಕೊಂಡಿಲ್ಲ. ಎಲ್ಲವೂ ಸುಳ್ಳು ಆರೋಪವಾಗಿದೆ. ಹೀಗಾಗಿ ಪ್ರಕರಣ ರದ್ದುಗೊಳಿಸಬೇಕು'' ಎಂದು ಮನವಿ ಮಾಡಿಕೊಂಡರು.