ವಾದ ವಿವಾದ, ಜಗಳ, ಮನಸ್ತಾಪಗಳಿಂದ ಕೂಡಿದ್ದ ಬಿಗ್ ಬಾಸ್ ಮನೆಯೀಗ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಗಿದೆ. ಈ ವಾರ ಎಮೋಶನಲ್ ವೀಕ್ ಆಗಿಬಿಟ್ಟಿದೆ. ಇತರರೊಂದಿಗೆ ಅದೆಷ್ಟೇ ಆರ್ಭಟಿಸಿದರೂ, ತಮ್ಮವರನ್ನು ಕಂಡೊಡನೆ ಸ್ಪರ್ಧಿಗಳ ಕಣ್ಣಂಚು ಒದ್ದೆಯಾಗಿಬಿಟ್ಟಿದೆ. ಕೆಲವರೊಂತೂ ಕಣ್ಣೀರಧಾರೆ ಹರಿಸಿದ್ದು, ವೀಕ್ಷಕರೂ ಕೂಡಾ ಮರುಗಿದ್ದಾರೆ.
ಈಗಾಗಲೇ ಭವ್ಯಾ ಗೌಡ, ತ್ರಿವಿಕ್ರಮ್, ರಜತ್ ಕಿಶನ್, ಉಗ್ರಂ ಮಂಜು, ಗೌತಮಿ ಜಾಧವ್ ಅವರ ಕುಟುಂಬಸ್ಥರು ಮನೆಗೆ ಬಂದು ಹೋಗಿದ್ದಾರೆ. ಇಂದಿನ ಸಂಚಿಕೆಯಲ್ಲಿ ಧನರಾಜ್ ಆಚಾರ್ ಅವರ ಕೂಡುಕುಟುಂಬ ಬಂದಿದೆ. ನಾಲ್ಕೈದು ಮಂದಿಯಲ್ಲ ಸರಿಸುಮಾರು 30 ಮಂದಿ ಬಂದಂತೆ ತೋರಿದೆ. ದೊಡ್ಡ ಕುಟುಂಬವೇ ದೊಡ್ಮನೆ ಪ್ರವೇಶಿಸಿದ್ದು, ಮನೆಯ ಇತರೆ ಸ್ಪರ್ಧಿಗಳ ಜೊತೆಗೆ, ಪ್ರೇಕ್ಷಕರೂ ಕೂಡಾ ಹುಬ್ಬೇರಿಸಿದ್ದಾರೆ. ಇದರ ಒಂದು ಸುಳಿವನ್ನು 'ದೊಡ್ಮನೆ ತುಂಬಾ ನಿಷ್ಕಲ್ಮಶ ಪ್ರೀತಿಧಾರೆ', ಬಿಗ್ ಬಾಸ್ ಕನ್ನಡ ಸೀಸನ್ 11, ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಶೀರ್ಷಿಕೆಯಡಿ ಅನಾವರಣಗೊಂಡಿರುವ ಪ್ರೋಮೋದಲ್ಲಿ ಕಾಣಬಹುದು.
ಬಿಗ್ ಬಾಸ್ ಮನೆಯ ಮುಖ್ಯದ್ವಾರದ ಬಳಿ ಸರಿಸುಮಾರು 30 ಮಂದಿ ನಿಂತಿರೋ ದೃಶ್ಯದೊಂದಿಗೆ ಬಿಗ್ ಬಾಸ್ ಪ್ರೋಮೋ ಅನಾವರಣಗೊಂಡಿದೆ. ಇದನ್ನು ಕಂಡು ಧನರಾಜ್ ಅವರಿಗಾದ ಖುಷಿ ವರ್ಣನಾತೀತ. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಧನರಾಜ್ ದೊಡ್ಡ ಕುಟುಂಬ ಎಂಬ ಹಿನ್ನೆಲೆ ದನಿಯೊಂದಿಗೆ ಪ್ರೋಮೋ ಪ್ರಾರಂಭವಾಗಿದೆ. ಎಲ್ಲರೂ ಸೇರಿ ಮನೆಯ ಆಂಗಣದಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಕರಾವಳಿಯ ಪಿಲಿಕುಣಿತ ಪ್ರೋಮೋದ ಆಕರ್ಷಣೆ ಅಂದ್ರೆ ತಪ್ಪಾಗಲ್ಲ.
ಇದನ್ನೂ ಓದಿ: 'ಪಿನಾಕ'ದಲ್ಲಿ ಗೋಲ್ಡನ್ ಸ್ಟಾರ್: ಇದು ಯಾರೋ ಹೆಣೆದ ಕಟ್ಟುಕಥೆಯಲ್ಲ, ಜನರಿಗಾಗಿ ಬದುಕಿದ ವೀರನ ದಂತಕಥೆ!
ನಂತರ ಧನರಾಜ್ ಆಚಾರ್ ಪತ್ನಿ ಮನೆ ಪ್ರವೇಶಿಸಿದ್ದಾರೆ. ನಾನಿಲ್ಲದೇ ಖುಷಿಯಾಗಿದೆ ಅಲ್ವಾ ನಿಮಗೆ ಎಂದು ಹೇಳುತ್ತಾ ಮನೆಯೊಳಗೆ ಬಂದಿದ್ದಾರೆ. ಇದೊಂದು ಹಾಸ್ಯಭರಿತ ಕ್ಷಣ ಅಂತಾನೇ ಹೇಳಬಹುದು. ಮನೆಯ ಸ್ಪರ್ಧಿಗಳು ಪಾಸ್ನಲ್ಲಿದ್ದು, ಹೆಂಡತಿ ಕೈಯಿಂದ ಧನರಾಜ್ ಪ್ರೀತಿಯ ಪೆಟ್ಟು ತಿಂದಿದ್ದಾರೆ. ಯಾವಾಗ್ಲೂ ಐಶು ಅವರಿಗೇನೆ ಉತ್ತಮ ಕೊಟ್ಟಿದ್ದೀರ ಎಂದು ಹೇಳುತ್ತಾ ಮತ್ತೆರಡು ಪೆಟ್ಟು ಬಿದ್ದಿದೆ. ಐಶುಗೆ ಲೈನ್ ಹೊಡಿತಿದ್ರಾ ಅಂತಾ ನನಗೆ ಡೌಟ್ ಎಂದು ಧನರಾಜ್ ಕಪಾಳಕ್ಕೆ ಪ್ರೀತಿಯಿಂದಲೇ ಬಾರಿಸಿದ್ದಾರೆ.
ಇದನ್ನೂ ಓದಿ: ಫ್ಯಾಮಿಲಿಯೊಂದಿಗೆ ರಾಕಿಂಗ್ ಸ್ಟಾರ್ ಯಶ್ ನ್ಯೂ ಇಯರ್ ಸೆಲೆಬ್ರೇಶನ್: ಆದ್ರೆ ಜ.8ಕ್ಕೆ.....!
ಮನೆಯವರೊಂದಿಗಿನ ಹಾಸ್ಯ ಕ್ಷಣಗಳ ಬಳಿಕ ಟಿವಿಯಲ್ಲಿ ಧನರಾಜ್ ಅವರ ಕಂದಮ್ಮನನ್ನು ತೋರಿಸಲಾಗಿದೆ. ಎತ್ತಿಕೊಳ್ಳೋಕೆ ಬಿಡಿ ಬಿಗ್ ಬಾಸ್ ಎಂದು ಧನರಾಜ್ ಕೇಳಿಕೊಂಡಿದ್ದಾರೆ. ಟಿವಿ ಮೇಲಿನ ಮಗಳ ಫೋಟೋಗೆ ಮುತ್ತಿಕ್ಕಿದ್ದಾರೆ. ನಂತರ ಧನರಾಜ್ ಓಡಿ ಎಂದು ಬಿಗ್ ಬಾಸ್ ಸೂಚಿಸುತ್ತಿದ್ದಂತೆ, ಸ್ಪರ್ಧಿ ಮಗಳಿರುವ ಜಾಗಕ್ಕೆ ಓಡೋಡಿ ಹೋಗಿದ್ದಾರೆ. ನಂತರದ ಕ್ಷಣಗಳು ಮನಮುಟ್ಟುವಂಥದ್ದು. ಮಗಳೊಂದಿಗೆ ಭಾವನಾತ್ಮಕ ಕ್ಷಣಗಳನ್ನು ಧನರಾಜ್ ಕಳೆದಿದ್ದಾರೆ. ಸಂಪೂರ್ಣ ಸಂಚಿಕೆ ವೀಕ್ಷಿಸಲು ಪ್ರೇಕ್ಷಕರು ಕಾತರರಾಗಿದ್ದಾರೆ.