ಶಿರಡಿ, ಮಹಾರಾಷ್ಟ್ರ: ಬಜೆಟ್ ಅಧಿವೇಶನಲ್ಲಿ ನಿನ್ನೆ ಮಹಾರಾಷ್ಟ್ರ ಚುನಾವಣೆ ವಿಚಾರ ಪ್ರತಿಧ್ವನಿಸಿದೆ. ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ, ಶಿರಡಿಯಲ್ಲಿ ಒಂದೇ ಕಟ್ಟಡದಲ್ಲಿ 7 ಸಾವಿರಕ್ಕೂ ಹೆಚ್ಚು ಮತದಾರರ ನೋಂದಣಿ ಆಗಿರುವ ಬಗ್ಗೆ ಪ್ರಶ್ನಿಸಿದ್ದಾರೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ಇದೀಗ ರಾಹುಲ್ ಗಾಂಧಿ ಮಾಡಿರುವ ಆರೋಪಕ್ಕೆ ಕಾರಣವೇನು, ಅದರ ಹಿಂದಿನ ಕಾರಣ ಏನು ಎಂಬ ಕುರಿತು ಶಿರಡಿಯ ಕಾಂಗ್ರೆಸ್ ನಾಯಕಿ ಪ್ರಭಾವತಿ ಘೋಗ್ರೆ ಉತ್ತರ ನೀಡಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿಯ ಹಿರಿಯ ನಾಯಕ ರಾಧಾಕೃಷ್ಣ ವಿಖೆ ಪಾಟೀಲ್ ಮತ್ತು ಕಾಂಗ್ರೆಸ್‌ನ ಪ್ರಭಾವತಿ ಘೋಗ್ರೆ ಪ್ರತಿಸ್ಪರ್ಧಿಗಳಾಗಿ ಕಣಕ್ಕೆ ಇಳಿದಿದ್ದರು.
ಘೋಗ್ರೆ ಆರೋಪವೇನು?: ಮತದಾನದ ದಿನದಂದು ನನ್ನ ಸಹೋದ್ಯೋಗಿಗಳ ಜೊತೆ ಲೋನಿ ಬುದ್ರುಕ್‌ನಲ್ಲಿರುವ ಅಹಲ್ಯಾಬಾಯಿ ಹೋಳ್ಕರ್ ಸೆಕೆಂಡರಿ ಶಾಲೆಯ ಮತಗಟ್ಟೆಗೆ ಭೇಟಿ ನೀಡಿದ್ದೆ, ಈ ವೇಳೆ ಅಲ್ಲಿ ಶಾಲಾ ವಿದ್ಯಾರ್ಥಿಗಳು ಮತದಾನ ಮಾಡುತ್ತಿದ್ದರ ಕುರಿತು ಅನುಮಾನ ವ್ಯಕ್ತಪಡಿಸಿ, ಅವರನ್ನು ಪ್ರಶ್ನಿಸಿದ್ದೆ. ಈ ವೇಳೆ ಅವರಲ್ಲಿ ಬಹುತೇಕರು ಬೇರೆ ಜಿಲ್ಲೆಗಳಿಂದ ಮತ್ತು ಕೆಲವರು ಹೊರ ರಾಜ್ಯದವರು ಎಂಬುದು ತಿಳಿದು ಬಂತು ಎಂದು ಅವರು ಆರೋಪಿಸಿದ್ದಾರೆ. ಅಷ್ಟೇ ಅಲ್ಲ ಇಲ್ಲಿ ವಿದ್ಯಾರ್ಥಿಗಳಿಂದ ನಕಲಿ ಮಾತದಾನ ನಡೆಯುತ್ತಿದೆ ಎಂದು ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದೆ ಅಂತಾ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕೋರ್ ಕಮಿಟಿಯಲ್ಲಿ ಚರ್ಚೆ: ಚುನಾವಣಾ ಫಲಿತಾಂಶ ಪ್ರಕಟವಾದ ನಂತರವೂ ಚುನಾವಣಾಧಿಕಾರಿಗಳು ನಮ್ಮ ದೂರನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ, ಲೋಣಿ ಬಿ ಮತ್ತು ಲೋಣಿ ಖು 23 ಮತಗಟ್ಟೆಗಳ ಮತದಾನದ ಅಂಕಿ- ಅಂಶಗಳು ಬೆಳಕಿಗೆ ಬಂದ ಬಳಿಕ ಈ ಕೇಂದ್ರಗಳಲ್ಲಿ 7 ಸಾವಿರಕ್ಕೂ ಹೆಚ್ಚು ನಕಲಿ ಮತದಾನ ನಡೆದಿದ್ದು, ಶಿರಡಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮುಖಂಡರು ಹೇಗೆ ನಕಲಿ ಮತದಾನ ಮಾಡಿದ್ದಾರೆ? ಎಂಬ ವದಂತಿಗಳ ಹಿಂದೆಯೇ ದೆಹಲಿಯಲ್ಲಿ ಕಾಂಗ್ರೆಸ್ ಕೋರ್ ಕಮಿಟಿಯ ನಾಯಕರಿಗೂ ಈ ವಿಚಾರವನ್ನು ತಿಳಿಸಲಾಗಿತ್ತು. ಇದಾದ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ ಎಂದು ತಿಳಿದು ಬಂದಿದೆ.
ಎಲ್ಲ ಆರೋಪಗಳು ನಿರಾಧಾರ ಎಂದ ರಾಧಾಕೃಷ್ಣ ಪಾಟೀಲ್: ಕಾಂಗ್ರೆಸ್ ನಾಯಕರ ಹೇಳಿಕೆಯನ್ನು ರಾಧಾಕೃಷ್ಣ ವಿಖೆ ಪಾಟೀಲ್ ಖಂಡಿಸಿದ್ದಾರೆ. ಈ ಆರೋಪಗಳೆಲ್ಲ ನಿರಾಧಾರ ಎಂದು ಹೇಳಿದ್ದಾರೆ. ಯಾವುದೇ ಹೇಳಿಕೆ ನೀಡುವ ಮುನ್ನ ರಾಹುಲ್ ಗಾಂಧಿ ಜಾಗೃತರಾಗಿರಬೇಕು. ರಾಜ್ಯದಲ್ಲಿ ಬಿಜೆಪಿಗೆ ದೊಡ್ಡ ಜನಾದೇಶ ಸಿಕ್ಕಿರುವುದು ಕಾಂಗ್ರೆಸ್ ಪಕ್ಷಕ್ಕೆ ಬೇಸರ ತಂದಿದೆ. ಹೀಗಾಗಿ ಅವರು ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಗಮನ ಸೆಳೆಯುತ್ತಿದೆ ಮಹಾಕುಂಭದ ಲೈಟಿಂಗ್ ವ್ಯವಸ್ಥೆ: ಗಗನಯಾನಿಯ ಸ್ಯಾಟಿಲೈಟ್ ಚಿತ್ರಕ್ಕೆ ಯುಪಿ ಸಚಿವರ ಪ್ರತಿಕ್ರಿಯೆ, ಸಂತಸ
ಇದನ್ನೂ ಓದಿ: ಇಂಫಾಲದಲ್ಲಿ ನಿಷೇಧಿತ ಸಂಘಟನೆಯ 9 ಉಗ್ರರ ಬಂಧನ